ನ್ಯಾಯಮೂರ್ತಿಗಳ ಆಸ್ತಿ ಘೋಷಣೆಗೆ ಎಎಬಿ ಆಗ್ರಹ; ಪೂರ್ಣಪೀಠದ ಸಭೆ ಕರೆಯಲು ಸಿಜೆಗೆ ಮನವಿ ಪತ್ರ

ಬೆಂಗಳೂರು: ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಘೋಷಿಸಿರುವುದನ್ನು ಸ್ವಾಗತಿಸಿರುವ ಬೆಂಗಳೂರು ವಕೀಲರ ಸಂಘ (ಎಎಬಿ), ಕರ್ನಾಟಕದಲ್ಲೂ ಸಹ ಹೈಕೋರ್ಟ್‌ ನ್ಯಾಯಮೂರ್ತಿಗಳು ಹಾಗೂ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ತಮ್ಮ ಆಸ್ತಿ ವಿವರ ಘೋಷಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದೆ.

ಈ ಕುರಿತು ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಮತ್ತಿತರ ಪದಾಧಿಕಾರಿಗಳು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರಿಗೆ ಶುಕ್ರವಾರ ಪತ್ರ ಬರೆದಿದ್ದು, ಕೂಡಲೇ ಎಲ್ಲ ನ್ಯಾಯಮೂರ್ತಿಗಳ ಪೂರ್ಣಪೀಠದ ಸಭೆ ಕರೆದು, ಸುಪ್ರೀಂಕೋರ್ಟ್ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸುವ ಮೂಲಕ ನ್ಯಾಯಮೂರ್ತಿಗಳ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಘೊಷಣೆ ಮಾಡಬೇಕು ಎಂದು ಕೋರಿದ್ದಾರೆ.

ಸಾಂವಿಧಾನಿಕ ಕರ್ತವ್ಯ ನಿರ್ವಹಿಸುವ ಅದರಲ್ಲೂ ಪ್ರಮುಖವಾಗಿ ನ್ಯಾಯಮೂರ್ತಿಗಳು ತಮ್ಮ ಹಾಗೂ ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳುವ ಮೂಲಕ ಪಾರದರ್ಶಕತೆಗೆ ನಾಂದಿ ಹಾಡಬೇಕು. ನ್ಯಾಯಮೂರ್ತಿಗಳ ಈ ನಡೆಯು ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸೇರಿ ಸಮಾಜದ ಇತರ ವರ್ಗಗಳಿಗೆ ಉದಾಹರಣೆಯಾಗುವ ಜತೆಗೆ, ಕಾನೂನು ಎಲ್ಲರಿಗೂ ಒಂದೇ ಎಂಬ ಅನಿಸಿಕೆ ಮೂಡಿಸುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಕಳೆದ ಮಾರ್ಚ್ 24ರಂದು ನಡೆದ ಸಂಘದ ಸಭೆಯಲ್ಲಿ ನ್ಯಾಯಮೂರ್ತಿಗಳು ಆಸ್ತಿ ವಿವರ ಘೋಷಣೆ ಮಾಡುವಂತೆ ಕೋರಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ನಡುವೆ, ಸುಪ್ರೀಂಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡುವ ಮೂಲಕ ಪಾರದರ್ಶಕತೆಯ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಅದೇ ರೀತಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಹಾಗೂ ವಿಚಾರಣಾ‌ ನ್ಯಾಯಾಲಯಗಳ ನ್ಯಾಯಾಧೀಶರು ಸಹ ಆಸ್ತಿ ವಿವರ ಘೋಷಿಸಿಕೊಳ್ಳಬೇಕು ಹಾಗೂ ಆ ವಿವರಗಳನ್ನು ಕರ್ನಾಟಕ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

Related Articles

Comments (0)

Leave a Comment