57ನೇ IFFI: ‘ಅಕ್ವಿ’, ‘ದಿ ಹಂಟ್ರೆಸ್’ ಚಿತ್ರಗಳಲ್ಲಿ ಮಾನವ ಭಾವನೆಗಳ ಅನಾವರಣ
- by Legal Samachar
- November 24, 2026
- 7 Views
ಗೋವಾ: 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಪ್ರದರ್ಶನಗೊಂಡ ‘ಅಕ್ವಿ’ ಮತ್ತು ‘ದಿ ಹಂಟ್ರೆಸ್ (ಲಾ ಕ್ಯಾಜಡೋರಾ)’ ಚಿತ್ರಗಳು ಮಾನವ ಭಾವನೆಗಳು, ಕುಟುಂಬ ಸಂಬಂಧಗಳು, ಹಿಂಸೆ ಮತ್ತು ನ್ಯಾಯದ ಹುಡುಕಾಟವನ್ನು ವಿಭಿನ್ನ ಕಥನಗಳ ಮೂಲಕ ತೆರೆದಿಟ್ಟಿವೆ. ನಿರ್ದೇಶಕರಾದ ಟಿಯಾಗೊ ಗುಡೆಸ್ ಮತ್ತು ಸುಜೇನ್ ಆಂಡ್ರ್ಯೂಸ್ ಕೊರಿಯಾ ಪತ್ರಿಕಾಗೋಷ್ಠಿಯಲ್ಲಿ ಚಿತ್ರಗಳ ಕುರಿತು ಮಾತನಾಡಿದರು.
ಜೆ.ಎಂ. ಕೋಟ್ಜಿ ಅವರ ‘ಜೀಸಸ್ ಟ್ರೈಲಾಜಿ’ ಆಧರಿಸಿದ ಟಿಯಾಗೊ ಗುಡೆಸ್ ನಿರ್ದೇಶನದ ‘ಅಕ್ವಿ’ ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಮೇ 18, 2026ರಂದು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡ ಈ ಡಿಸ್ಟೋಪಿಯನ್ ನಾಟಕವು, ಜನರು ಹಿಂದಿನ ನೆನಪುಗಳಿಲ್ಲದೆ ಹೊಸ ಜೀವನ ಆರಂಭಿಸುವ ಸಮಾಜದ ಕಥೆಯನ್ನು ಹೊಂದಿದೆ.

ಸೈಮನ್ ಎಂಬಾತ ಬಾಲಕ ಡೇವಿಡ್ನನ್ನು ಕರೆದುಕೊಂಡು ಇನೆಸ್ ಅವರನ್ನು ಭೇಟಿಯಾಗಿ ಆತನ ತಾಯಿಯಾಗುವಂತೆ ಕೇಳಿಕೊಳ್ಳುತ್ತಾನೆ. ಮೂವರು ಅಸಾಂಪ್ರದಾಯಿಕ ಕುಟುಂಬವಾಗಿ ರೂಪುಗೊಳ್ಳುತ್ತಾರೆ. ಆದರೆ ಸಾಮಾಜಿಕ ನಿಯಮಗಳನ್ನು ಒಪ್ಪಿಕೊಳ್ಳದ ಡೇವಿಡ್ ವ್ಯವಸ್ಥೆಗೆ ಸವಾಲಾಗುತ್ತಾನೆ. ರಕ್ತ ಸಂಬಂಧಕ್ಕಿಂತ ವೈಯಕ್ತಿಕ ಆಯ್ಕೆಗಳಿಂದ ರೂಪುಗೊಳ್ಳುವ ಕುಟುಂಬದ ಪರಿಕಲ್ಪನೆಯನ್ನು ಚಿತ್ರ ಪರಿಶೋಧಿಸುತ್ತದೆ ಎಂದು ಗುಡೆಸ್ ಹೇಳಿದರು. ಚಿತ್ರವನ್ನು ಜನವರಿಯಲ್ಲಿ ಪೋರ್ಚುಗಲ್, ಸ್ಪೇನ್ ಮತ್ತು ಫ್ರಾನ್ಸ್ನಲ್ಲಿ ಪ್ರದರ್ಶಿಸಲು ಯೋಜಿಸಲಾಗಿದೆ.
ಮೆಕ್ಸಿಕನ್-ಅಮೆರಿಕನ್ ನಿರ್ದೇಶಕಿ ಸುಜೇನ್ ಆಂಡ್ರ್ಯೂಸ್ ಕೊರಿಯಾ ಅವರ ಚೊಚ್ಚಲ ಚಿತ್ರ ‘ದಿ ಹಂಟ್ರೆಸ್’ ಮೆಕ್ಸಿಕೋದ ಸಿಯುಡಾಡ್ ಜುವಾರೆಜ್ನಲ್ಲಿ ಮಹಿಳೆಯರ ಮೇಲಿನ ನೈಜ ಹಿಂಸಾಚಾರದಿಂದ ಪ್ರೇರಿತವಾದ ಸ್ಪ್ಯಾನಿಷ್ ಭಾಷೆಯ ಥ್ರಿಲ್ಲರ್. ಆಡ್ರಿಯಾನಾ ಪಾಜ್ ನಟಿಸಿರುವ ಈ ಚಿತ್ರವು ಹಲ್ಲೆಯಿಂದ ಬದುಕುಳಿದ ಕಾರ್ಖಾನೆ ಕಾರ್ಮಿಕೆಯೊಬ್ಬಳು ಸಹಾಯಕ್ಕಾಗಿ ಮಾಡಿದ ಮನವಿಗಳಿಗೆ ಸ್ಪಂದನೆ ಸಿಗದ ಬಳಿಕ ನ್ಯಾಯಕ್ಕಾಗಿ ಹೋರಾಡುವ ಕಥೆಯನ್ನು ಹೊಂದಿದೆ.
ಮೆಕ್ಸಿಕೊ-ಟೆಕ್ಸಾಸ್ ಗಡಿಯಲ್ಲಿ 24 ಗಂಟೆಗಳ ಅವಧಿಯಲ್ಲಿ ನಡೆಯುವ ಈ ಕಥೆ, 2013ರ ‘ಡಯಾನಾ, ಬಸ್ ಚಾಲಕರ ಬೇಟೆಗಾರ’ ಪ್ರಕರಣದಿಂದ ಪ್ರೇರಿತವಾಗಿದೆ. ಮಹಿಳೆಯರ ಮೇಲಿನ ಹಿಂಸಾಚಾರದ ವಿರುದ್ಧ ನ್ಯಾಯ ಮತ್ತು ಬದಲಾವಣೆಗೆ ಈ ಚಿತ್ರ ಕರೆ ನೀಡುತ್ತದೆ ಎಂದು ಕೊರಿಯಾ ಹೇಳಿದರು. ಚಿತ್ರ ಪೂರ್ಣಗೊಳಿಸಲು 10 ವರ್ಷಗಳು ಬೇಕಾದವು ಎಂದ ಅವರು, ವಿಭಿನ್ನ ಸಂಸ್ಕೃತಿಗಳ ಪ್ರೇಕ್ಷಕರಿಗೂ ನಾಯಕಿಯ ಭಾವನೆಗಳು ತಲುಪಿರುವುದು ಸಿನಿಮಾದ ಸಾರ್ವತ್ರಿಕ ಶಕ್ತಿಯನ್ನು ತೋರಿಸುತ್ತದೆ ಎಂದು ತಿಳಿಸಿದರು.


Comments (0)