ಲೋಕಸಭಾ ಕ್ಷೇತ್ರಗಳ ಸಂಖ್ಯೆ 816ಕ್ಕೆ ಏರಿಕೆ; ಕರ್ನಾಟಕಕ್ಕೆ 40 ಸ್ಥಾನ ಸಾಧ್ಯತೆ: ಪ್ರಲ್ಹಾದ್ ಜೋಶಿ
- by Legal Samachar
- November 28, 2026
- 10 Views
ನವದೆಹಲಿ: ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹಾಲಿ 543ರಿಂದ 816ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆಯಿಂದ ಎಲ್ಲ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಶೇ.50ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರಂತೆ ಕರ್ನಾಟಕದ ಕ್ಷೇತ್ರಗಳು 28ರಿಂದ 40ಕ್ಕೆ ಹಾಗೂ ಉತ್ತರ ಪ್ರದೇಶದ ಕ್ಷೇತ್ರಗಳು 80ರಿಂದ 120ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಜಾಪ್ರಭುತ್ವ ಬಲಪಡಿಸುವ ಐತಿಹಾಸಿಕ ಹೆಜ್ಜೆಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದ್ದು, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಬದ್ಧವಾಗಿದೆ ಎಂದು ಜೋಶಿ ಹೇಳಿದ್ದಾರೆ.

ಮಹಿಳಾ ಮೀಸಲಾತಿ ಕೇವಲ ಸಬಲೀಕರಣವಲ್ಲ; ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳಾ ನಾಯಕತ್ವಕ್ಕೆ ಅವಕಾಶ ಕಲ್ಪಿಸುವ ಕ್ರಮವಾಗಿದೆ ಎಂದಿದ್ದಾರೆ.
ಹಿಂದಿನ ಕ್ಷೇತ್ರ ಹಂಚಿಕೆ ಸೂತ್ರದ ಆಧಾರದಲ್ಲೇ ಪುನರ್ವಿಂಗಡಣೆ ನಡೆಯಲಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇದೇ ಸೂತ್ರ ಅನುಸರಿಸಿದ್ದಾಗ ತಪ್ಪಾಗಿರಲಿಲ್ಲ ಎಂದಾದರೆ ಈಗ ಹೇಗೆ ತಪ್ಪಾಗುತ್ತದೆ ಎಂದು ಕಾಂಗ್ರೆಸ್ಗೆ ಪ್ರಶ್ನಿಸಿದ್ದಾರೆ.
ಪುನರ್ವಿಂಗಡಣೆಯಿಂದ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುವುದಿಲ್ಲ. ಎಲ್ಲ ರಾಜ್ಯಗಳಿಗೂ ಸಂಸತ್ತಿನಲ್ಲಿ ಹೆಚ್ಚಿನ ಪ್ರಾತಿನಿಧ್ಯ ದೊರೆಯಲಿದೆ ಎಂದು ಅವರು ಎಕ್ಸ್ನಲ್ಲಿ ತಿಳಿಸಿದ್ದಾರೆ.


Comments (0)