- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 5
ಮುಡಾ ಹಗರಣದಲ್ಲಿ ಸಿಎಂಗೆ ತಾತ್ಕಾಲಿಕ ರಿಲೀಫ್; ಆ.29ರವರೆಗೆ ಆತುರದ ಕ್ರಮ ಬೇಡವೆಂದ ಹೈಕೋರ್ಟ್
- by Jagan Ramesh
- August 19, 2024
- 131 Views
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯನ್ನು ಆ.29ಕ್ಕೆ ಮುಂದೂಡಿರುವ ಹೈಕೋರ್ಟ್, ಅಲ್ಲಿಯವರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದೆ. ಇದರಿಂದ, ಸಿದ್ದರಾಮಯ್ಯ ಅವರು ತಕ್ಷಣಕ್ಕೆ ನಿರಾಳರಾದಂತಾಗಿದೆ.
ರಾಜ್ಯಪಾಲರ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ಕಚೇರಿಯ ವಿಶೇಷ ಕಾರ್ಯದರ್ಶಿ ಹಾಗೂ ಮೂವರು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ, ವಿಚಾರಣೆಯನ್ನು ಆ.29ಕ್ಕೆ ಮುಂದೂಡಿತು.
ಇದೇ ವೇಳೆ, ಪ್ರಕರಣವು ಈ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, ವಾದ-ಪ್ರತಿವಾದ ಆಲಿಸಬೇಕಿದೆ. ಇಂತಹ ಸಂದರ್ಭದಲ್ಲಿ ವಿಶೇಷ ಕೋರ್ಟ್ ಯಾವುದೇ ಆದೇಶ ನೀಡಿದರೆ ಅದು ಈ ನ್ಯಾಯಾಲಯದ ವಿಚಾರಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಆದ್ದರಿಂದ, ಅರ್ಜಿಯ ಮುಂದಿನ ವಿಚಾರಣೆವರೆಗೆ ಸಂಬಂಧಪಟ್ಟ ನ್ಯಾಯಾಲಯ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ತನ್ನ ಪ್ರಕ್ರಿಯೆಯನ್ನು ಮುಂದೂಡಬೇಕು ಹಾಗೂ ಯಾವುದೇ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ನ್ಯಾಯಪೀಠ ಆದೇಶಿಸಿತು.
ಸಿಎಂ ಪರ ವಕೀಲರ ವಾದವೇನು?
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವಾದ ಮಂಡಿಸಿದ ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ. ಸಚಿವ ಸಂಪುಟದ ಶಿಫಾರಸನ್ನು ನಿರಾಕರಿಸಿರುವ ರಾಜ್ಯಪಾಲರು, ಯಾವ ಕಾರಣಕ್ಕೆ ಪ್ರಾಸಿಕ್ಯೂಷನ್ ಅನುಮತಿ ನೀಡಲಾಗಿದೆ ಎಂಬುದನ್ನು ವಿವರಿಸಿಲ್ಲ. ಕ್ಯಾಬಿನೆಟ್ ನಿರ್ಧಾರಗಳು ಸಿಕ್ಕಾಗ ಅದರಲ್ಲಿನ ಅಂಶಗಳನ್ನು ಕೂಲಂಕಶವಾಗಿ ಪರಿಗಣಿಸಬೇಕಾಗುತ್ತದೆ. ಅದ್ಯಾವುದನ್ನೂ ಮಾಡದೆ ಇಷ್ಟು ಆತುರದಲ್ಲಿ ಅನುಮತಿ ನೀಡಲಾಗಿದೆ. ಇದರ ಹಿಂದೆ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶವಿದೆ ಎಂದು ಆಕ್ಷೇಪಿಸಿದರು.
ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ ಟಿ.ಜೆ. ಅಬ್ರಹಾಂ ಅವರ ಅರ್ಜಿಯ ಆಧಾರದಲ್ಲಿ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ಸಚಿವ ಸಂಪುಟ ವಿಸ್ತೃತವಾದ ಸಲಹೆ ಮತ್ತು ಉತ್ತರವನ್ನು ಸಲ್ಲಿಸಿದೆ. ಮುಖ್ಯಮಂತ್ರಿಯವರೂ ಪ್ರತ್ಯೇಕವಾಗಿ ರಾಜ್ಯಪಾಲರ ಶೋಕಾಸ್ ನೋಟಿಸ್ಗೆ ಉತ್ತರಿಸಿದ್ದಾರೆ. ಆದರೆ, ಸಚಿವ ಸಂಪುಟದ ನಿರ್ಧಾರ ತಿರಸ್ಕರಿಸುವಾಗ ಉಳಿದ ಇಬ್ಬರು ದೂರುದಾರರ ಅರ್ಜಿಗಳ ಬಗ್ಗೆ ಉಲ್ಲೇಖಿಸಿ, ಪ್ರಾಸಿಕ್ಯೂಷನ್ಗೆ ಅನುಮತಿಸಲಾಗಿದೆ. ಆದರೆ, ಆ ಎರಡು ದೂರುಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ಅನ್ನೇ ಜಾರಿ ಮಾಡಲಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ಪ್ರಾಸಿಕ್ಯೂಷನ್ ಅನುಮತಿಯಲ್ಲಿ ರಾಜ್ಯಪಾಲರು, ಸಚಿವ ಸಂಪುಟದ ನಿರ್ಧಾರಕ್ಕೆ ತಾವು ಬದ್ಧರಾಗಿರಬೇಕಿಲ್ಲ. ಆದ್ದರಿಂದ, ಅನುಮತಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಕ್ಯಾಬಿನೆಟ್ ನಿರ್ಧಾರ ತಿರಸ್ಕರಿಸಿದರೂ, ಯಾವ ಮೆರಿಟ್ ಆಧಾರದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗುತ್ತಿದೆ ಎಂಬ ಬಗ್ಗೆ ವಿವರಣೆ ಕೊಡಬೇಕು. ಆದರೆ, ರಾಜ್ಯಪಾಲರ ಆದೇಶದಲ್ಲಿ ಆ ಕುರಿತು ಒಂದೇ ಒಂದು ಸಾಲೂ ಇಲ್ಲ ಎಂದು ಸಿಂಘ್ವಿ ವಿವರಿಸಿದರು.
ಸಿಎಂ ಪಾತ್ರವೇ ಇಲ್ಲ:
ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವೇ ಇಲ್ಲ. ಅವರು ಯಾವುದೇ ಕಡತಗಳನ್ನು ಮುಟ್ಟಿಲ್ಲ. ಯಾವ ಶಿಫಾರಸನ್ನೂ ಮಾಡಿಲ್ಲ. ನಿವೇಶನಗಳ ಮರು ಹಂಚಿಕೆ ಪ್ರಕ್ರಿಯೆ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದಿದೆ. ಜತೆಗೆ, ಬಿಎನ್ಎಸ್ಎಸ್ ಸೆಕ್ಷನ್ 218ರ ಅಡಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ಆದರೆ, ಈ ಸೆಕ್ಷನ್ ಅಡಿಯಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕಾದಲ್ಲಿ ನಿರ್ದಿಷ್ಟ ಅಪರಾಧವನ್ನು ಒಳಗೊಂಡಿರಬೇಕು. ಆ ಅಪರಾಧ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ನಡೆದಿರಬೇಕು. ಆದರೆ, ಈ ಪ್ರಕರಣದಲ್ಲಿ ನಿವೇಶನ ಹಂಚಿಕ 1992ರಲ್ಲಿ ಮುಡಾ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು, 2010 ರಂದು ಸಿಎಂ ಪತ್ನಿಗೆ ಅವರ ಸಹೋದರ ದಾನಪತ್ರ ನೀಡಿದ್ದಾರೆ. ಇಷ್ಟು ಅವಧಿಯ ಬಹುತೇಕ ಸಂದರ್ಭಗಳಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿರಲಿಲ್ಲ ಎಂದರು.
ಅಬ್ರಹಾಂ ದೂರು ಸಲ್ಲಿಸಿದ ದಿನವೇ ರಾಜ್ಯಪಾಲರು ಮುಖ್ಯಮಂತ್ರಿಗಳಿಗ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಸೇರಿ ಹಲವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ಅರ್ಜಿಗಳು ಬಹಳ ವರ್ಷಗಳಿಂದ ರಾಜ್ಯಪಾಲರ ಮುಂದೆ ಬಾಕಿ ಇವೆ. ಆದರೆ, ಈ ಪ್ರಕರಣದಲ್ಲಿ ಮಾತ್ರ ಮಿಂಚಿನ ವೇಗದಲ್ಲಿ ಅನುಮತಿ ನೀಡಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆಕ್ಷೇಪಿಸಿದರು.
ತಡೆ ನೀಡದಂತೆ ಮನವಿ:
ರಾಜ್ಯಪಾಲರ ಕಚೇರಿಯ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯಪಾಲರ ಮುಂದೆ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿರುವ ಯಾವುದೇ ಅರ್ಜಿ ಬಾಕಿ ಉಳಿದಿಲ್ಲ. ಈ ಸಂಬಂಧ ಎಲ್ಲ ದಾಖಲೆಗಳು ಹಾಗೂ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದ ಕಡತಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು. ಸಿಎಂ ವಿರುದ್ಧ ಆರೋಪಿಸಲಾಗಿರುವ ಅಪರಾಧಗಳನ್ನು ತನಿಖೆ ನಡೆಸಲು ಅನುಮತಿಸಲಾಗಿದೆ. ಆದ್ದರಿಂದ, ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು ಎಂದು ಮನವಿ ಮಾಡಿದರು.
ಅರ್ಜಿಯಲ್ಲಿ 5ನೇ ಪ್ರತಿವಾದಿಯಾಗಿರುವ ದೂರುದಾರರಲ್ಲೊಬ್ಬರಾದ ಎಸ್.ಪಿ. ಪ್ರದೀಪ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ನೀಡಿರುವ ಅನುಮತಿಗೆ ಪ್ರತಿಬಂಧಕಾದೇಶ ಹೊರಡಿಸಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
Related Articles
Thank you for your comment. It is awaiting moderation.
Comments (0)