ಅಂತಿಮ ಆಯ್ಕೆ ಪಟ್ಟಿ ಹೊರಡಿಸಿದ 6 ತಿಂಗಳೊಳಗಷ್ಟೇ ಹೆಚ್ಚುವರಿ ಪಟ್ಟಿ ಕೋರಲು ಅವಕಾಶ – ಹೈಕೋರ್ಟ್
- by Jagan Ramesh
- August 18, 2024
- 220 Views
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ನೇಮಕಾತಿ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂತಿಮ ನೇಮಕ ಪಟ್ಟಿ ಹೊರಡಿಸಿದ ನಂತರದ 6 ತಿಂಗಳ ಅವಧಿಯೊಳಗೆ ಮಾತ್ರ ಹೆಚ್ಚುವರಿ ಆಯ್ಕೆ ಪಟ್ಟಿ ಒದಗಿಸುವಂತೆ ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್ಸಿ) ಕೋರಲು ನೇಮಕಾತಿ ಪ್ರಾಧಿಕಾರಕ್ಕೆ ಅವಕಾಶವಿದೆ ಎಂದು ಸ್ಪಷ್ಟಪಡಿಸಿ ಹೈಕೋರ್ಟ್ ಆದೇಶಿಸಿದೆ.
2016-2018ರ ಅವಧಿಯಲ್ಲಿ ನಡೆದಿದ್ದ ಎಸ್ಡಿಎ/ಎಫ್ಡಿಎ ಉದ್ಯೋಗಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ ಸಿದ್ಧಪಡಿಸಲು ಕೋರಿ ಆ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯದ ಅಭ್ಯರ್ಥಿ ಬೆಳಗಾವಿಯ ಪ್ರಶಾಂತ್ ಬೋರಪ್ಪ ಚಿನಕೋಟಿ ಸಲ್ಲಿಸಿದ್ದ ಮನವಿಯನ್ನು ಕೆಪಿಎಸ್ಸಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪ್ರಶಾಂತ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ನೇತೃತ್ವದ ವಿಭಾಗೀಯ ಪೀಠ, ಪ್ರಕರಣದಲ್ಲಿ ಕೆಪಿಎಸ್ಸಿ 2016ರ ಡಿ.6ರಂದು ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. 2018ರ ನ.19ರಂದು ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. 2019ರ ಜು.29ರಂದು ಹೆಚ್ಚುವರಿ ಪಟ್ಟಿ ಸಿದ್ಧಪಡಿಸಲು ನೇಮಕಾತಿ ಪ್ರಾಧಿಕಾರ ಮನವಿ ಸಲ್ಲಿಸಿದೆ. ಆ ವೇಳೆಗಾಗಲೇ ಆಯ್ಕೆ ಪಟ್ಟಿ ಪ್ರಕಟಗೊಂಡು 6 ತಿಂಗಳು ಪೂರ್ಣಗೊಂಡಿತ್ತು. ಆಯ್ಕೆ ಪಟ್ಟಿ ಪ್ರಕಟಗೊಂಡ 6 ತಿಂಗಳೊಳಗೆ ಮಾತ್ರ ಹೆಚ್ಚುವರಿ ಆಯ್ಕೆ ಪಟ್ಟಿ ಸಿದ್ಧಪಡಿಸುವಂತೆ ಮನವಿ ಸಲ್ಲಿಸಲು ಅವಕಾಶವಿದೆ. ಆದ್ದರಿಂದ, ಹೆಚ್ಚುವರಿ ಆಯ್ಕೆಪಟ್ಟಿ ಸಿದ್ಧಪಡಿಸಲು ಸಲ್ಲಿಕೆಯಾದ ಮನವಿಯ ಮೇಲೆ ಕ್ರಮ ಜರುಗಿಸದ ಕೆಪಿಎಸ್ಸಿ ನಡೆ ಸೂಕ್ತವಾಗಿದ್ದು, ಅದರಲ್ಲಿ ಯಾವುದೇ ದೋಷ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ತಿದ್ದುಪಡಿ ಪೂರ್ವಾನ್ವಯವಾಗುವುದಿಲ್ಲ:
ಕರ್ನಾಟಕ ನಾಗರಿಕ ಸೇವೆಗಳು (ಸಚಿವಾಲಯದ ಹುದ್ದೆಗಳಿಗೆ ನೇಮಕಾತಿ) ಅಧಿನಿಯಮಗಳು-1978ಕ್ಕೆ ತಿದ್ದುಪಡಿ ತಂದು, 2019ರ ಸೆ.26ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ಸಕ್ಷಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ಆಧಾರದ ಮೇಲೆ ಚಾಲ್ತಿಯಲ್ಲಿರುವ ನಿಯಮಗಳು ಅಥವಾ ಮೀಸಲು ಅನುಸಾರ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಲು ಅವಕಾಶ ಕಲ್ಪಿಸಲಾಗಿತ್ತು. ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿರುವ ಒಟ್ಟು ಸಂಖ್ಯೆಯ ಶೇ.30 ಅಭ್ಯರ್ಥಿಗಳನ್ನು ಹೆಚ್ಚುವರಿ ಪಟ್ಟಿಯಲ್ಲಿ ಹೆಸರಿಸಲು ಸಾಧ್ಯವಿತ್ತು. ಅಧಿಸೂಚನೆ ಪ್ರಕಟವಾದ ದಿನಾಂಕದಲ್ಲಿ ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗೆ ಈ ನಿಯಮಗಳೇ ಅನ್ವಯಿಸುತ್ತವೆ. ಆದರೆ, ಈ ತಿದ್ದುಪಡಿ ಅಧಿನಿಯಮಗಳು ಈ ಮೊದಲೇ ಆರಂಭವಾಗಿರುವ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಗೆ ಪೂರ್ವಾನ್ವಯವಾಗುವುದಿಲ್ಲ. ಅರ್ಜಿದಾರ ಪ್ರಶಾಂತ್ ಬೋರಪ್ಪ ಆಕಾಂಕ್ಷಿಯಾಗಿದ್ದ ಎಸ್ಡಿಎ ಉದ್ಯೋಗದ ನೇಮಕಾತಿ ಪ್ರಕ್ರಿಯೆ ನಡೆಯುವಾಗ 2019ರ ತಿದ್ದುಪಡಿ ಜಾರಿಯಲ್ಲಿ ಇರಲಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣವೇನು?
ಕರ್ನಾಟಕ ನಾಗರಿಕ ಸೇವೆಗಳು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಖಾಲಿಯಿದ್ದ 381 ಎಫ್ಡಿಎ ಮತ್ತು ಎಸ್ಡಿಎ ಉದ್ಯೊಗಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ 2016ರ ಡಿ.6ರಂದು ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿತ್ತು. ಅರ್ಜಿದಾರ ಪ್ರಶಾಂತ್ 2017ರ ಜ.7ರಂದು ಎಸ್ಡಿಎ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.
ಅದೇ ವರ್ಷ ಆ.17ರಂದು ಪ್ರಕಟಿಸಲಾಗಿದ್ದ ಪ್ರಾಥಮಿಕ ಆಯ್ಕೆಪಟ್ಟಿಯಲ್ಲಿ ಅರ್ಜಿದಾರನ ಹೆಸರಿತ್ತು. 2018ರ ಸೆ.1ರಂದು ಸಂಭಾವ್ಯ ಹಾಗೂ 2018ರ ನ.19ರಂದು ಅಂತಿಮ ಪಟ್ಟಿ ಪ್ರಕಟಿಸಲಾಗಿತ್ತು. ಅದರಲ್ಲಿ ಅರ್ಜಿದಾರರ ಹೆಸರು ಇರಲಿಲ್ಲ. ಇದರಿಂದ, ಕೆಪಿಎಸ್ಸಿಗೆ ಮನವಿ ಸಲ್ಲಿಸಿದ್ದ ಆತ, ಅಂತಿಮ ನೇಮಕ ಪಟ್ಟಿ ಪ್ರಕಟವಾದ ನಂತರವೂ ಖಾಲಿ ಉದ್ಯೋಗಗಳು ಲಭ್ಯವಿರುವುದರಿಂದ ಹೆಚ್ಚುವರಿ ಪಟ್ಟಿ ಸಿದ್ಧಪಡಿಸಬೇಕು. ಅದರಲ್ಲಿ ತಮ್ಮ ಹೆಸರು ಸೇರಿಸಿ, ಉದ್ಯೋಗಕ್ಕೆ ನೇಮಕ ಮಾಡಬೇಕು ಎಂದು ಕೋರಿದ್ದರು.
ಅದನ್ನು ಕೆಪಿಎಸ್ಸಿ ಪರಿಗಣಿಸದ ಕಾರಣ ಕೆಎಟಿ ಮೆಟ್ಟಿಲೇರಿದ್ದರು. ಕೆಎಟಿಯೂ ಮನವಿ ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೇ ವೇಳೆ ನೇಮಕಾತಿ ಪ್ರಾಧಿಕಾರವೂ ಸಹ ಹೆಚ್ಚುವರಿ ಪಟ್ಟಿ ಸಿದ್ಧಪಡಿಸುವಂತೆ ಕೆಪಿಎಸ್ಸಿಗೆ 2019ರ ಜು.29ರಂದು ಮನವಿ ಮಾಡಿತ್ತು. ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ 6 ತಿಂಗಳ ಒಳಗೆ ಮನವಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಎಸ್ಡಿಎ ಉದ್ಯೋಗಕ್ಕೆ ಹೆಚ್ಚುವರಿ ಪಟ್ಟಿ ಸಿದ್ಧಪಡಿಸುವಂತೆ ನೇಮಕಾತಿ ಪ್ರಾಧಿಕಾರ ಮಾಡಿದ್ದ ಮನವಿಯನ್ನು ಕೆಪಿಎಸ್ಸಿ 2019ರ ಸೆ.6ರಂದು ತಿರಸ್ಕರಿಸಿತ್ತು.
Related Articles
Thank you for your comment. It is awaiting moderation.
Comments (0)