ಓಲಾ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ; ಆಂತರಿಕ ದೂರು ಸಮಿತಿಯ ನಡೆಗೆ ಹೈಕೋರ್ಟ್ ಅಸಮಾಧಾನ
- by Jagan Ramesh
- August 18, 2024
- 71 Views
ಬೆಂಗಳೂರು: ಓಲಾ ಕ್ಯಾಬ್ ಚಾಲಕನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಬಗ್ಗೆ ಯುವತಿಯೊಬ್ಬರು ದೂರು ನೀಡಿ 6 ವರ್ಷಗಳೇ ಕಳೆದರೂ ಕ್ರಮ ಕೈಗೊಳ್ಳದ ಸಂಸ್ಥೆಯ ಆಂತರಿಕ ದೂರು ಸಮಿತಿಯ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಪ್ರಕರಣವು ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿದೆ ಎಂದು ತೀಕ್ಷ್ಣವಾಗಿ ನುಡಿದಿದೆ.
ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯ್ದೆ-2013ರ ಸೆಕ್ಷನ್‌ಗಳ ಅನ್ವಯ ಓಲಾ ಕ್ಯಾಬ್ಸ್‌ನ ಮಾತೃಸಂಸ್ಥೆ ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಆಂತರಿಕ ದೂರು ಸಮಿತಿಗೆ 2018ರಲ್ಲಿ ನೀಡಿರುವ ದೂರಿನ ತನಿಖೆ ನಡೆಸಲು ನಿರ್ದೇಶಿಸುವಂತೆ ಕೋರಿ 22 ವರ್ಷದ ಯುವತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಪೀಠ ಪೀಠ ವಿಚಾರಣೆ ನಡೆಸಿತು.
ಗಂಭೀರ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಮುಖ ಸ್ಥಾನದಲ್ಲಿರುವರು, ಶಾಸನಬದ್ಧ ಅಧಿಕಾರ ಹೊಂದಿರುವವರು ಉದ್ದೇಶಪೂರ್ವಕವಾಗಿ ಎಸಗಿರುವ ಕರ್ತವ್ಯ ಲೋಪ ಮತ್ತು ಬೇಜವಾಬ್ದಾರಿತನ ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದ್ದು, ಇದು ನ್ಯಾಯಾಲಯದ ಆತ್ಮಸಾಕ್ಷಿಗೇ ಘಾಸಿ ಉಂಟು ಮಾಡಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ವಿಶೇಷ ಕಾಯ್ದೆಯಲ್ಲಿ ಅವಕಾಶವಿದ್ದರೂ ಎಎನ್ಐ ಟೆಕ್ನಾಲಜಿಯ ಆಂತರಿಕ ದೂರು ಸಮಿತಿಯು ಯುವತಿಯ ದೂರು ಪರಿಗಣಿಸದೇ ಇರುವುದರಿಂದ ಆಕೆ ಅಸಹಾಯಕತೆಯಿಂದ ನ್ಯಾಯಾಲಯದ ಕದತಟ್ಟುವಂತಾಗಿದೆ. ಓಲಾ ಕಂಪನಿಗೆ ಸೇರಿದ ಕ್ಯಾಬ್ ಚಾಲಕ ಅರ್ಜಿದಾರೆಗೆ ಕಿರುಕುಳ ನೀಡಿದ್ದಾರೆ. ಆದರೆ, ಹೊರಗಿನ ಕಾನೂನು ಸಲಹೆಗಾರರು ನೀಡಿದ ಸಲಹೆ ಆಧರಿಸಿ ಆಂತರಿಕ ದೂರು ಸಮಿತಿಯು ತನಿಖೆ ನಡೆಸಲು ನಿರಾಕರಿಸಿದೆ. ಹೊರಗಿನ ಕಾನೂನು ಸಲಹೆಗಾರರಿಗೆ ಈ ವಿಚಾರದ ಬಗ್ಗೆ ಮಾಹಿತಿ ಪಡೆಯುವ ವ್ಯಾಪ್ತಿ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜತೆಗೆ, ತನಿಖೆ ನಿರಾಕರಿಸಿರುವುದಕ್ಕೆ ಆಂತರಿಕ ದೂರು ಸಮಿತಿ ಯಾವುದೇ ಕಾರಣವನ್ನೂ ನೀಡಿಲ್ಲ. ಮತ್ತೊಂದೆಡೆ, ಅಗ್ರಿಗೇಟರ್ಸ್, ಮೋಟಾರು ವಾಹನಗಳು, ಚಾಲಕರು, ಟ್ಯಾಕ್ಸಿ ಇತ್ಯಾದಿಗಳ ಆಡಳಿತಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಿರುವ ರಾಜ್ಯ ಸಾರಿಗೆ ಇಲಾಖೆಯೂ ಈ ಪ್ರಕರಣದಲ್ಲಿ ಯಾವುದೇ ನಿಲುವು ಕೈಗೊಂಡಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
ಮಾಹಿತಿ ಕೇಳಿದ ಕೋರ್ಟ್:
ಎಎನ್‌ಐ ಟೆಕ್ನಾಲಜೀಸ್ ಮತ್ತದರ ಆಂತರಿಕ ದೂರು ಸಮಿತಿ ಯಾರ ಸಲಹೆ ಮೇರೆಗೆ ಅರ್ಜಿದಾರೆಯ ದೂರನ್ನು ಪರಿಗಣಿಸಲು ನಿರಾಕರಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಸಲ್ಲಿಸಬೇಕು. ಆಂತರಿಕ ದೂರು ಸಮಿತಿಯ ಅಧ್ಯಕ್ಷರು, ಸದಸ್ಯರ ಮಾಹಿತಿಯನ್ನು ಸಲ್ಲಿಸಬೇಕು. 2016ರ ಏ.2ರಂದು ಹೊರಡಿಸಿರುವ ಅಗ್ರಿಗೇಟರ್ಸ್ ನಿಯಮಗಳ ಅಧಿಸೂಚನೆಯ ಅನುಪಾಲನೆ ಜವಾಬ್ದಾರಿ ಹೊಂದಿರುವ ಅಧಿಕಾರಿಯ ಮಾಹಿತಿಯನ್ನು ರಾಜ್ಯ ಸಾರಿಗೆ ಪ್ರಾಧಿಕಾರ ನ್ಯಾಯಾಲಯಕ್ಕೆ ಒದಗಿಸಬೇಕು ಎಂದು ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಆ. 20ಕ್ಕೆ ಮುಂದೂಡಿದೆ.
Related Articles
Thank you for your comment. It is awaiting moderation.
Comments (0)