ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನ್ಯಾಯಾಂಗ ದಾರಿದೀಪ – ಹೈಕೋರ್ಟ್ ಸಿಜೆ ಎನ್.ವಿ ಅಂಜಾರಿಯಾ
- by Jagan Ramesh
- August 15, 2024
- 64 Views
ಬೆಂಗಳೂರು: ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನ್ಯಾಯಾಂಗದ ಸ್ಥಾನವು ಬಹುಮುಖ್ಯವಾಗಿದ್ದು, ಸರ್ವರಿಗೂ ನ್ಯಾಯ ಕಲ್ಪಿಸಲು ಸಮಾನತೆ ಹಾಗೂ ಸುಸ್ಥಿತರತೆಯಂತಹ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ದಾರಿದೀಪವಾಗುವ ಪಾತ್ರವನ್ನು ಅದು ನಿಭಾಯಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಅವರು ತಿಳಿಸಿದರು.
78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೈಕೋರ್ಟ್ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮೊದಲಿನಿಂದಲೂ ಕರ್ನಾಟಕ ಹೈಕೋರ್ಟ್ ರಾಜ್ಯದ ಜನತೆಗೆ ಸಮರ್ಥ ನ್ಯಾಯದಾನ ವ್ಯವಸ್ಥೆ ಕಲ್ಪಿಸಿಕೊಂಡು ಬಂದಿದ್ದು, ಲೋಕ-ಅದಾಲತ್ ಹಾಗೂ ಮಧ್ಯಸ್ಥಿಕೆಯಂತಹ ಪರ್ಯಾಯ ವ್ಯಾಜ್ಯ ಪರಿಹಾರ ಕಾರ್ಯವಿಧಾನಗಳನ್ನು ಉತ್ತೇಜಿಸುತ್ತಿದೆ. ಅಂತರ್ಜಾಲ ಕ್ರಾಂತಿಯ ಯುಗದಲ್ಲಿ ನ್ಯಾಯಾಂಗ ಸಹ ತಂತ್ರಜ್ಞಾನದ ಬಳಕೆಯಿಂದ ದೂರ ಉಳಿಯಲು ಸಾಧ್ಯವಿಲ್ಲ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಅಳವಡಿಕೆಯು ತ್ವರಿತ ಹಾಗೂ ಪಾರದರ್ಶಕ ನ್ಯಾಯದಾನ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನ ಅಳವಡಿಕೆ – ಮುಂಚೂಣಿಯಲ್ಲಿ ಕರ್ನಾಟಕ ಹೈಕೋರ್ಟ್:
ತಂತ್ರಜ್ಞಾನ ಬಳಕೆ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ಸಾಕಷ್ಟು ದೂರ ಕ್ರಮಿಸಿದೆ. ಇ-ಮೂಲ ಸೌಕರ್ಯ, ನಾಗರಿಕ ಕೇಂದ್ರಿಕೃತ ಇ-ಸೇವಾ ಕೇಂದ್ರಗಳು ಮುಂತಾದ ವ್ಯವಸ್ಥೆಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಮಹತ್ವದ ಹೆಜ್ಜೆ ಇರಿಸಿದೆ. ಹೈಕೋರ್ಟ್ ಒದಗಿಸಿರುವ “ಆನ್‌ಲೈನ್ ಡಿಜಿಟಲ್ ಕೇಸ್ ಡೈರಿ” ಮೂಲಕ ವಕೀಲರು, ಕಕ್ಷಿದಾರರು ಹಾಗೂ ಸರ್ಕಾರಿ ಇಲಾಖೆಗಳು ತಮ್ಮ ಪ್ರಕರಣಗಳ ಸ್ಥಿತಿಗತಿಯ ಬಗ್ಗೆ ಗಮನವಿರಿಸಲು ಸಹಕಾರಿಯಾಗುತ್ತಿದೆ. ಇದರಿಂದ, ಕಾಗದದ ಬಳಕೆಯೂ ನಿರ್ಮೂಲನೆ ಕಾಣುತ್ತದೆ. ಮುಂದಿನ ದಿನಗಳಲ್ಲಿ ಇ-ಫೈಲಿಂಗ್, ಕೋರ್ಟ್ ದಾಖಲೆಗಳ ಡಿಜಿಟಲೀಕರಣ ಸೇರಿ ಇನ್ನಿತರ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿರುವುದಾಗಿ ಮಾಹಿತಿ ನೀಡಿದರು.
ಪ್ರಕರಣಗಳ ಹೊರೆ ಇಳಿಕೆಗೆ ಕ್ರಮ:
ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಪೀಠಗಳಲ್ಲಿ ಬಾಕಿ ಪ್ರಕರಣಗಳ ಹೊರೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಲೋಕ ಅದಲಾತ್ ನಲ್ಲಿ ಹೈಕೋರ್ಟ್‌ನ ಕಾರ್ಯಕ್ಷಮತೆ ತೃಪ್ತಿದಾಯಕವಾಗಿದೆ. 2024ರ ಜುಲೈ 13ರಂದು ರಾಜ್ಯಾದ್ಯಂತ ಆಯೋಜಿಸಲಾಗಿದ್ದ ಲೋಕ ಅದಾಲತ್‌ನಲ್ಲಿ ಕೈಗೆತ್ತಿಕೊಳ್ಳಲಾಗಿದ್ದ 44,64,209 ಪ್ರಕರಣಗಳಲ್ಲಿ 40,02,785 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ನ್ಯಾಯಾಂಗ ಆಡಳಿತ ವಿಭಾಗದಲ್ಲಿ 78 ನ್ಯಾಯಾಂಗ ಅಧಿಕಾರಿಗಳು ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಪಡೆದಿದ್ದಾರೆ. 84 ಅಧಿಕಾರಿಗಳು ಹಿರಿಯ ಸಿವಿಲ್ ನ್ಯಾಯಾಧೀಶರಾಗಿದ್ದಾರೆ. ಹಲವು ಜಿಲ್ಲಾ ಹಾಗೂ ಸಿವಿಲ್ ನ್ಯಾಯಾಧೀಶರ ತರಬೇತಿ ಅವಧಿ ಪೂರ್ಣಗೊಂಡಿದೆ. ಹೈಕೋರ್ಟ್‌ನಲ್ಲಿ ವಿವಿಧ ಶ್ರೇಣಿಗಳ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋರ್ಟ್ ಕಟ್ಟಡಗಳು, ನ್ಯಾಯಾಂಗ ಅಧಿಕಾರಿಗಳ ವಸತಿ ಗೃಹಗಳು, ವಕೀಲರ ಸಂಘಗಳು ಸೇರಿ ಹಲವು ಮೂಲ ಸೌಕರ್ಯ ಯೋಜನೆಗಳು ಪೂರ್ಣಗೊಂಡಿವೆ. ಕರ್ನಾಟಕ ನ್ಯಾಯಾಂಗ ಅಕಾಡೆಮಿ ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಳಿಸಿ, ರಜತ ಮಹೋತ್ಸವ ಸಂಭ್ರಮದಲ್ಲಿದೆ ಎಂದು ಸಿಜೆ ಮಾಹಿತಿ ನೀಡಿದರು.
ಹೊಸದಾಗಿ ಜಾರಿಗೆ ಬಂದಿರುವ “ಭಾರತೀಯ ನ್ಯಾಯ ಸಂಹಿತೆ”, “ಭಾರತೀಯ ನಾಗರಿಕ ಸಂರಕ್ಷಾ ಸಂಹಿತೆ” ಮತ್ತು “ಭಾರತೀಯ ಸಾಕ್ಷ್ಯ ಅಧಿನಿಯಮ” ಕುರಿತಂತೆ ಕೇವಲ ನ್ಯಾಯಾಂಗ ಅಧಿಕಾರಿಗಳು, ವಕೀಲರಿಗೆ ಮಾತ್ರವಲ್ಲದೇ ಹೈಕೋರ್ಟ್ ನ್ಯಾಯಮೂರ್ತಿಗಳಿಗೂ ಸಹ ನ್ಯಾಯಾಂಗ ಅಕಾಡೆಮಿ ಇತ್ತೀಚೆಗೆ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಸಹ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕಾವೇರಿ ಭವನದಲ್ಲಿ ಕಚೇರಿಗಳು, ಬೋರ್ಡ್ ರೂಂ, ಸಭಾಂಗಣ, ಕಾನ್ಫರೆನ್ಸ್ ರೂಂ ಮತ್ತು ಅತಿಥಿ ಗೃಹಗಳಿರುವ 1,21,210 ಚದರ ಅಡಿ ವಿಸ್ತೀರ್ಣದ ಜಾಗವು ಸದ್ಯದಲ್ಲೇ ಹೈಕೋರ್ಟ್‌ಗೆ ಲಭ್ಯವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು, ಅಡ್ವೊಕೇಟ್ ಜನರಲ್, ಶಶಿಕಿರಣ್ ಶೆಟ್ಟಿ, ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ ರಘು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)