- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 4
ಸರ್ಕಾರಿ ಇಲಾಖೆಗಳ ಹಗರಣಗಳ ಸಿಬಿಐ ತನಿಖೆಗೆ ಕೋರಿ ಅರ್ಜಿ
- by Jagan Ramesh
- August 14, 2024
- 79 Views
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೇರಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ನಡೆದಿದೆ ಎನ್ನಲಾಗಿರುವ ಅಂದಾಜು 50 ಸಾವಿರ ಕೋಟಿ ರೂ. ಮೊತ್ತದ ಅವ್ಯವಹಾರ ಪ್ರಕರಣಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ಮೈಸೂರಿನ ಕೆ.ಆರ್. ನಗರದ ವಕೀಲ ಸಿ.ಸಂತೋಷ್ ತಕರಾರು ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿ ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಬೇಕಿದೆ.
ಅರ್ಜಿಯಲ್ಲೇನಿದೆ?
2015ರಲ್ಲಿ ನೀರಾವರಿ ಯೋಜನೆ ಅಕ್ರಮದಲ್ಲಿ 40 ಕೋಟಿ ರೂ., 2019 ರಿಂದ 23ರ ಅವಧಿಯಲ್ಲಿ ಕಿಯೋನಿಕ್ಸ್ನಲ್ಲಿ 500 ಕೋಟಿ ರೂ., ಕೋವಿಡ್-19 ಹೆಸರಿನಲ್ಲಿ 40 ಸಾವಿರ ಕೋಟಿ ರೂ., ಪಿಎಸ್ಐ ನೇಮಕಾತಿಯಲ್ಲಿ 100 ಕೋಟಿ ರೂ., ಸರ್ಕಾರಿ ಗುತ್ತಿಗೆ ಮಂಜೂರಾತಿಯಲ್ಲಿ ಶೇ.40 ಕಮಿಷನ್ ನಿಂದ 2 ಸಾವಿರ ಕೋಟಿ ರೂ., 2020-21ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಲ್ಲಿ 200 ಕೋಟಿ ರೂ., ಎಪಿಎಂಸಿಯಲ್ಲಿ 47.16 ಕೋಟಿ ರೂ., ಭೋವಿ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ರೂ., ಗಂಗಾ ಕಲ್ಯಾಣ ಯೋಜನೆಯಲ್ಲಿ 430 ಕೋಟಿ ರೂ., ಬಿಟ್ಕಾಯಿನ್ ಹಗರಣದಲ್ಲಿ 1 ಸಾವಿರ ಕೋಟಿ ರೂ., ಬಿ.ಎಸ್.ಯಡಿಯೂರಪ್ಪ ಅಕ್ರಮ ಸಂಪಾದನೆ 750 ಕೋಟಿ ರೂ., ನಾಲ್ಕು ವೈದ್ಯಕೀಯ ಕಾಲೇಜು ಹಗರಣದಲ್ಲಿ 300 ಕೋಟಿ ರೂ., 2022-23ನೇ ಸಾಲಿನಲ್ಲಿ ದೇವರಾಜು ಅರಸ್ ಟ್ರಕ್ ಟರ್ಮಿನಲ್ ನಲ್ಲಿ 50 ಕೋಟಿ ರೂ ಮತ್ತು ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನಲ್ಲಿ ಕೋಟ್ಯಂತರ ಹಣದ ಅವ್ಯವಹಾರ ನಡೆದಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಹಣ ಅವ್ಯವಹಾರವಾಗಿದೆ. ಹಾಗೆಯೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಐದು ಸಾವಿರ ಕೋಟಿ ರೂ. ಹಗರಣದ ನಡೆದಿದೆ. ರಾಜ್ಯದ ವಿವಿಧ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದು, ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಈ ಕುರಿತು ವಿದ್ಯುನ್ಮಾನ ಮಾಧ್ಯಮಗಳು, ಪತ್ರಿಕೆ, ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾಜ್ಯ ಆಡಳಿತ ಪಕ್ಷದ ನಾಯಕರು ಹಾಗೂ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಖುದ್ದು ಮುಖ್ಯಮಂತ್ರಿಗಳು, ವಿವಿಧ ಇಲಾಖೆಗಳಲ್ಲಿ ಅವ್ಯವಹಾರ ನಡೆದಿದೆ ಎಂಬುದಾಗಿ ವಿಧಾನಮಂಡಲದ ಅಧಿವೇಶನದಲ್ಲಿ ಹೇಳಿದ್ದಾರೆ. ಆದರೆ, ಆ ಹಗರಣಗಳಲ್ಲಿ ಆಳ-ಅಗಲ ತಿಳಿಯಲು ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಈ ಹಗರಣಗಳ ಸಂಬಂಧ ಕಾನೂನು ಕ್ರಮ ಜರುಗಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ಎಲ್ಲ ಪ್ರಕ್ಷದ ಮುಖಂಡರು ಪರಸ್ಪರ ಆರೋಪ ಮಾಡುವ ಮೂಲಕ ಹಗರಣಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅವ್ಯವಹಾರಗಳ ಸತ್ಯಾಸತ್ಯತೆ ತಿಳಿಯಲು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವ ಅಗತ್ಯವಿದೆ. ತಪ್ಪಿತಸ್ಥರು ಕಂಡುಬಂದಲ್ಲಿ ಅವರನ್ನು ಶಿಕ್ಷಿಸಬೇಕಿದೆ. ಅವ್ಯವಹಾರದಿಂದ ದೋಚಿರುವ ಸಾರ್ವಜನಿಕ ಹಣ ಹಾಗೂ ಆಸ್ತಿಯನ್ನು ಮರಳಿ ಸರ್ಕಾರದ ಸುಪರ್ದಿಗೆ ಪಡೆಯಬೇಕಿದೆ. ಹಗರಣಗಳನ್ನು ತಡೆಯದೆ ಹಾಗೂ ಪರಿಶೀಲಿಸದೆ ಹೋದರೆ ರಾಜ್ಯದ ಅಮಾಯಕ ಪ್ರಜೆಗಳಿಗೆ ದೊಡ್ಡ ನಷ್ಟ ಉಂಟಾಗಲಿದೆ. ಸಿಬಿಐ ತನಿಖೆ ನಡೆಸಿದರೆ ಭವಿಷ್ಯದಲ್ಲಿ ಸರ್ಕಾರದ ಸಂಪತ್ತು ರಕ್ಷಣೆಯಾಗಲಿದೆ. ಆದ್ದರಿಂದ, ಈ ಎಲ್ಲ ಹಗರಣಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)