- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 9
ಡಿಕೆಶಿ ವಿರುದ್ಧದ ಸಿಬಿಐ ತನಿಖೆ ವಾಪಸ್ ಪ್ರಕರಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್
- by Jagan Ramesh
- August 14, 2024
- 789 Views
ಬೆಂಗಳೂರು: ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.
ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರ ಪೀಠ ವಿಚಾರಣೆ ನಡೆಸಿತು.
ಸಿಬಿಐ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್, ರಾಜ್ಯ ಸರ್ಕಾರ ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದರೂ ಸಿಬಿಐ ಎಫ್ಐಆರ್ ಬಾಕಿ ಉಳಿಯಲಿದೆ. ಇದು ಪ್ರಮುಖ ವಿಚಾರವಾಗಿದೆ. ಇನ್ನು ಸಿಬಿಐ ಎಫ್ಐಆರ್ ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಒಮ್ಮೆ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿ ಅದನ್ನು ಹಿಂಪಡೆದರೆ ತನಿಖೆ ಮೊಟಕಾಗಲಿದೆಯೇ ಎಂಬುದು ನ್ಯಾಯಾಲಯದ ಮುಂದಿರುವ ಪ್ರಶ್ನೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಪರಾಧದ ತನಿಖೆ ನಡೆಸುವ ಸಿಬಿಐ ಸಂಪೂರ್ಣ ಸ್ವತಂತ್ರವಾಗಿರುತ್ತದೆ. ಒಮ್ಮೆ ಸಿಬಿಐ ಪ್ರಕರಣ ದಾಖಲಿಸಿದ ನಂತರ ಅದು ತಾರ್ಕಿಕ ಅಂತ್ಯ ಕಾಣಬೇಕು. ಸಿಬಿಐ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ವಜಾ ಮಾಡಬೇಕು. ಇದರಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ ಎಂದರು.
ಮೌಖಿಕ ಆದೇಶವಷ್ಟೇ ನೀಡಲಾಗಿತ್ತು:
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಿಬಿಐ ಕೇಂದ್ರ ಸರ್ಕಾರದ ಒಂದು ಘಟಕ. ಅದು ಸ್ವತಂತ್ರ ಸಂಸ್ಥೆಯಲ್ಲ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಡಿ ಬರುವ ಸಿಬಿಐಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಮುಂದೆ ಡಿ.ಕೆ. ಶಿವಕುಮಾರ್ ಅವರು ಎಫ್ಐಆರ್ ರದ್ದುಪಡಿಸುವಂತೆ ಕೋರಿದ್ದರು. ಇಲ್ಲಿ ರಾಜ್ಯ ಸರ್ಕಾರದ ಪಾತ್ರ ಇರಲಿಲ್ಲ. ಸಿಬಿಐ ಮತ್ತು ಶಿವಕುಮಾರ್ ಪಕ್ಷಗಾರರಾಗಿದ್ದರು. ಅಲ್ಲಿ ಸಿಬಿಐ ತನಿಖೆಗೆ ಅನುಮತಿ ನೀಡಿದ್ದು ಪ್ರಕರಣದ ವಿಚಾರವಾಗಿರಲಿಲ್ಲ ಎಂದರು.
ಸಿಬಿಐಗೆ ಅನುಮತಿ ನೀಡುವ ವಿಚಾರದಲ್ಲಿ ಈ ಪ್ರಕರಣದಲ್ಲಿ ಸರ್ಕಾರ ವಂಚಿಸಿದೆ. ಹಿಂದಿನ ಬಿಜೆಪಿ ಸರ್ಕಾರ ಮೌಖಿಕ ನಿರ್ದೇಶನದ ಮೂಲಕ ಸಿಬಿಐ ತನಿಖೆಗೆ ಅನುಮತಿಸಿತ್ತು. ಈಗ ಸರ್ಕಾರ ಬದಲಾಗಿದ್ದು, ನ್ಯಾಯಾಲಯದ ಮುಂದೆ ಬಂದಿದೆ. ಎಫ್ಐಆರ್ ರದ್ದತಿ ವಿಚಾರದಲ್ಲಿ ಹೈಕೋರ್ಟ್ ಆದೇಶವು ಶಿವಕುಮಾರ್‌ಗೆ ಅನ್ವಯಿಸುತ್ತದೆಯೇ ವಿನಃ ರಾಜ್ಯ ಸರ್ಕಾರಕ್ಕಲ್ಲ. ಸಿಬಿಐಗೆ ವಾಸ್ತವಿಕ ವಿಚಾರಗಳು ನ್ಯಾಯಾಲಯದ ಮುಂದೆ ಬರುವುದು ಬೇಕಿಲ್ಲ ಎಂದು ಆಕ್ಷೇಪಿಸಿದರು.
ಸಿಬಿಐ ಒಪ್ಪಿಗೆ ವಿಚಾರದಲ್ಲಿ ನ್ಯಾಯಾಲಯಕ್ಕೆ ಸರ್ಕಾರ ವಂಚಿಸಿದೆ. ಇಲ್ಲಿ ಅನುಮತಿ ಪಡೆದಿರುವುದು ಪ್ರಶ್ನೆಯಲ್ಲ. ಒಪ್ಪಿಗೆ ಕಾನೂನುಬಾಹಿರವಾಗಿ ನೀಡಿರುವುದು ವಿಚಾರವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸರ್ಕಾರ ಕಾನೂನನ್ನು ಈ ರೀತಿ ಬಳಕೆ ಮಾಡಲು ಸಾಧ್ಯವಿಲ್ಲ. ಜತೆಗೆ, ದೆಹಲಿ ವಿಶೇಷ ಪೊಲೀಸ್ ಕಾಯ್ದೆ ಸೆಕ್ಷನ್ 3ರ ಅಡಿ ಇಲ್ಲಿ ಸಾಮಾನ್ಯ ಒಪ್ಪಿಗೆ ಪಡೆಯಲಾಗಿಲ್ಲ. ರಾಜ್ಯ ಸರ್ಕಾರ ಸಾಮಾನ್ಯ ಒಪ್ಪಿಗೆ ನೀಡಿಲ್ಲ. ಈ ಪ್ರಕರಣದಲ್ಲಿ ವಿಶೇಷ ಒಪ್ಪಿಗೆ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಶಿವಕುಮಾರ್ ವಾದವೇನು?
ಡಿ.ಕೆ. ಶಿವಕುಮಾರ್ ಪರ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವುದನ್ನು ಸಿಬಿಐ ಪ್ರಶ್ನಿಸಿದೆ. ಇಲ್ಲಿ ಸಿಬಿಐ ಮತ್ತು ರಾಜ್ಯ ಸರ್ಕಾರ ಪಕ್ಷಗಾರರಾಗಿದ್ದು, ಡಿ.ಕೆ. ಶಿವಕುಮಾರ್ ಖಾಸಗಿ ವ್ಯಕ್ತಿಯಾಗಿದ್ದಾರೆ. ಕೇಂದ್ರ ಸರ್ಕಾರದ ಪರ್ಯಾಯ ವ್ಯಕ್ತಿತ್ವದಂತೆ ಸಿಬಿಐ ವರ್ತಿಸುತ್ತದೆ. ಬೆಂಗಳೂರಿಗೆ ಹೋಗಬೇಕೆ ಅಥವಾ ಅಲ್ಲಿ ಯಾವ ರಸ್ತೆಗೆ ಹೋಗಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಸಾಮಾನ್ಯ/ವಿಶೇಷ ಒಪ್ಪಿಗೆ ವಿಚಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದೆ. ನಮ್ಮ ಪ್ರಕರಣದಲ್ಲಿ ಸಾಮಾನ್ಯ ಒಪ್ಪಿಗೆ ನೀಡಲಾಗಿಲ್ಲ, ನಿರ್ದಿಷ್ಟ ಒಪ್ಪಿಗೆ ನೀಡಲಾಗಿದೆ. ಇದು ಕಾನೂನುಬಾಹಿರ. ಈ ಪ್ರಕರಣವನ್ನು ರಾಜ್ಯ ಪೊಲೀಸರು ಅಥವಾ ಲೋಕಾಯುಕ್ತ ಏಕೆ ತನಿಖೆ ನಡೆಸಲಿಲ್ಲ. ಇನ್ನು ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದಿರುವುದಕ್ಕೂ ಸಿಬಿಐ ಎಫ್ಐಆರ್ ರದ್ದತಿ ಅರ್ಜಿ ವಜಾ ಮಾಡಿದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಸುದೀರ್ಘ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು. ಕೆಲ ತಿಂಗಳ ಹಿಂದೆಯೇ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತಾದರೂ, ಕೆಲ ವಿಚಾರಗಳಿಗೆ ಸ್ಪಷ್ಟನೆ ಬಯಸಿ ಮತ್ತೆ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Related Articles
Thank you for your comment. It is awaiting moderation.
Comments (0)