ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಜಾರಿ ಬೇಡ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ
- by LegalSamachar
- August 14, 2024
- 73 Views
ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿ ಬೆಟ್ಟ, ದೇವಸ್ಥಾನದ ಅಭಿವೃದ್ಧಿ ಹಾಗೂ ನಿರ್ವಹಣೆಯಲ್ಲಿ ರಾಜಮನೆತನದವರ ಅಧಿಕಾರ ಮೊಟಕುಗೊಳಿಸಿರುವ ‘ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ-2024’ ಪ್ರಾಧಿಕಾರ ಜಾರಿಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
‘ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ -2024’ರ ವಿವಿಧ ಸೆಕ್ಷನ್ಗಳನ್ನು ಪ್ರಶ್ನಿಸಿ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಕಾಯ್ದೆಯನ್ನು ಆ.22ರವರೆಗೆ ಜಾರಿಗೊಳಿಸದಂತೆ ಸರ್ಕಾರಕ್ಕೆ ಮಧ್ಯಂತರ ನಿರ್ದೇಶನ ನೀಡಿದೆ. ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮೈಸೂರು ಅರಮನೆ ಮುಜರಾಯಿ ಸಂಸ್ಥೆಯ ಮುಖ್ಯಸ್ಥರೂ ಆದ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಪ್ರಕರಣವೇನು?
ಕಾಯ್ದೆ ಪ್ರಕಾರ ಚಾಮುಂಡೇಶ್ವರಿ ಬೆಟ್ಟ ಅಭಿವೃದ್ಧಿ, ದೇವಸ್ಥಾನದ ಆಡಳಿತ ನಿರ್ವಹಣೆ, ಪೂಜಾ ಕೈಕಂರ್ಯ ನಡೆಸಲು ಪ್ರಾಧಿಕಾರ ರಚನೆ ಮಾಡಲಾಗುತ್ತದೆ. ಆ ಪ್ರಾಧಿಕಾರದ ರಚನೆಯ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಸೇರಿರುತ್ತದೆ. ಮುಖ್ಯಮಂತ್ರಿ ಪ್ರಾಧಿಕಾರದ ಅಧ್ಯಕ್ಷರಾಗಲಿದ್ದಾರೆ. ಪದಾಧಿಕಾರಿಗಳಾಗಿ ಸ್ಥಳೀಯ ಶಾಸಕರು, ಸಚಿವರು, ಸಂಸದರು ಹಾಗೂ ಅಧಿಕಾರಿಗಳು ಇರಲಿದ್ದಾರೆ.
ದೇವಸ್ಥಾನಕ್ಕೆ ಅರ್ಚಕರನ್ನು ನೇಮಕ ಮಾಡುವ ಅಧಿಕಾರವನ್ನು ಸರ್ಕಾರ ಹೊಂದಿರುತ್ತದೆ. ಪ್ರಾಧಿಕಾರದ ತೀರ್ಮಾನಗಳನ್ನು ಜಾರಿ ಮಾಡುವ ಹೊಣೆ ಕಾರ್ಯದರ್ಶಿಗೆ ನೀಡಲಾಗಿದೆ. ಆ ಮೂಲಕ ದೇವಸ್ಥಾನದ ನಿರ್ವಹಣೆ, ಜವಾಬ್ದಾರಿಗಳಲ್ಲಿ ಮೈಸೂರು ರಾಜಮನೆತನದವರು ಹೊಂದಿದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.
ಇದನ್ನು ಪ್ರಶ್ನಿಸಿರುವ ಪ್ರಮೋದಾದೇವಿ, ಚಾಮುಂಡೇಶ್ವರಿಯು ಮೈಸೂರು ರಾಜ ಮನೆತನದ ದೇವತೆ. ಮೈಸೂರು ಮಹಾರಾಜರು ದೇವಸ್ಥಾನದ ಅಭಿವೃದ್ಧಿ, ನಿರ್ವಹಣೆ ಮತ್ತು ಪೂಜಾ ಕಾರ್ಯಗಳಲ್ಲಿ ಸದಾ ಪಾಲುದಾರರಾಗಿದ್ದಾರೆ. ಬೆಟ್ಟ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ. ದೇವಸ್ಥಾನಕ್ಕೆ ಆಭರಣ, ಭೂಮಿ ನೀಡಿದ್ದಾರೆ. ಹೀಗಿದ್ದರೂ, ಆಡಳಿತದಿಂದ ರಾಜಮನೆತನ ಹೊಂದಿರುವ ಅಧಿಕಾರ ಮೊಟಕುಗೊಳಿಸಲು ಸರ್ಕಾರ ರೂಪಿಸಿರುವ ಕಾಯ್ದೆ ಸಂವಿಧಾನಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
Related Articles
Thank you for your comment. It is awaiting moderation.
Comments (0)