ಸಾಲ ಹಿಂಪಾವತಿ ಬಾಕಿ; ಮಾಜಿ ಎಂಎಲ್‌ಸಿ ನಸೀರ್ ಅಹ್ಮದ್ ಉದ್ದೇಶಪೂರ್ವಕ ಸುಸ್ತಿದಾರ ಎಂದು ಪ್ರಕಟಣೆ ಬೇಡವೆಂದ ಹೈಕೋರ್ಟ್

ಬೆಂಗಳೂರು: ಬ್ಯಾಂಕ್‌ಗಳಿಗೆ 1,454 ಕೋಟಿ ರೂ. ಸಾಲ ಮರುಪಾವತಿ ಬಾಕಿ ಪ್ರಕರಣದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ‘ಉದ್ದೇಶಪೂರ್ವಕ ಸುಸ್ತಿದಾರ’ (ವಿಲ್‌ಫುಲ್ ಡಿಫಾಲ್ಟರ್) ಎಂದು ಹೆಸರಿಸಿ ಅವರ ಫೋಟೋಗಳನ್ನು ಬ್ಯಾಂಕ್‌ನ ವೆಬ್‌ಸೈಟ್ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಿ 2026ರ ಫೆಬ್ರವರಿ 26ರಂದು ಐಡಿಬಿಐ ಬ್ಯಾಂಕ್ ಹೊರಡಿಸಿರುವ ಆದೇಶ ಹಾಗೂ ಮಾರ್ಚ್ 23ರಂದು ಜಾರಿಗೊಳಿಸಿದ ನೋಟಿಸ್ ಪ್ರಶ್ನಿಸಿ ನಸೀರ್ ಅಹ್ಮದ್ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ವಿಚಾರಣೆ ವೇಳೆ ನಸೀರ್ ಅಹ್ಮದ್ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಸಾಲಕ್ಕೆ ಖಾತ್ರಿದಾರರು ಆಗಿದ್ದಾರೆ. ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಅರ್ಜಿದಾರರನ್ನು ‘ದಿವಾಳಿ’ ಎಂದು ಘೋಷಿಸಿದೆ. ಇದನ್ನು ರಾಷ್ಟ್ರೀಯ ಕಂಪನಿ ಕಾನೂನುಗಳ ಮೇಲ್ಮನವಿ ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಎ‌ಟಿ) ಪ್ರಶ್ನಿಸಲಾಗಿದೆ. ರಾಜಿ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳುವಂತೆ ಎನ್‌ಸಿಎಲ್‌ಎಟಿ ಅವಕಾಶ ಕೊಟ್ಟಿದೆ. ಈ ಮಧ್ಯೆ, ಬ್ಯಾಂಕ್ ಸುಸ್ತಿದಾರ ಎಂದು ಘೋಷಿಸಿ ನೋಟಿಸ್ ನೀಡಿದ್ದು, ಅರ್ಜಿದಾರರ ಫೋಟೋ ವೆಬ್‌ಸೈಟ್ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಇದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಎನ್‌ಸಿ‌ಎಲ್ಎಟಿ ಮುಂದೆ ಪ್ರಕರಣ ಬಾಕಿ ಇರುವಾಗ ಮತ್ತು ಅದರ ಮುಂದಿನ ವಿಚಾರಣೆವರೆಗೆ ಸುಸ್ತಿದಾರ ಎಂದು ಹೆಸರಿಸಿ ಅರ್ಜಿದಾರರ ಫೋಟೋ ಬ್ಯಾಂಕ್‌ನ ವೆಬ್‌ಸೈಟ್ ಅಥವಾ ಪತ್ರಿಕೆಗಳಲ್ಲಿ ಪ್ರಕಟಿಸದಂತೆ ಐಡಿಬಿಐ ಬ್ಯಾಂಕ್‌ಗೆ ಮಧ್ಯಂತರ ನಿರ್ದೇಶನ ನೀಡಿತು. ಮುಂದಿನ ವಿಚಾರಣಾ ದಿನಾಂಕದೊಳಗೆ ಸಂಧಾನ ಆಗದಿದ್ದರೆ, ಮಧ್ಯಂತರ ಆದೇಶ ತೆರವುಗೊಳಿಸಲಾಗುವುದು ಎಂದೂ ಸಹ ನ್ಯಾಯಪೀಠ ಹೇಳಿತು. ಜತೆಗೆ, ಅರ್ಜಿ ಸಂಬಂಧ ಪ್ರತಿವಾದಿಗಳಾದ ಐಡಿಬಿಐ ಬ್ಯಾಂಕ್ ಲಿಮಿಟೆಡ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ಸೇವೆಗಳ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ವಿವಿಧ ಬ್ಯಾಂಕ್‌ಗಳಿಂದ 1,454 ಕೋಟಿ ರೂ. ಸಾಲ ಪಡೆದಿತ್ತು. ಈ ಸಾಲಕ್ಕೆ ನಸೀರ್ ಅಹ್ಮದ್ ವೈಯಕ್ತಿಕ ಖಾತ್ರಿದಾರ (ಗ್ಯಾರಂಟರ್) ಆಗಿದ್ದರು.

Related Articles

Comments (0)

Leave a Comment