ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಮ್ಯಾಜಿಸ್ಟ್ರೇಟ್‌ ಪೂರ್ವಾನುಮತಿ ಕಡ್ಡಾಯ ಸಲ್ಲ; ಹೈಕೋರ್ಟ್

ಬೆಂಗಳೂರು: ಆನ್‌ಲೈನ್ ಆರ್ಥಿಕ ವಂಚನೆ ಮತ್ತು ಸೈಬರ್ ಅಪರಾಧಗಳ ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಅಥವಾ ನಿರ್ದಿಷ್ಟ ಆಸ್ತಿಗಳನ್ನು ಜಪ್ತಿ ಮಾಡಲು ಮ್ಯಾಜಿಸ್ಟ್ರೇಟ್ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಜೆಎಆರ್ ಗೋಲ್ಡ್ ರಿಟೇಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಬ್ಯಾಂಕ್ ಖಾತೆಗಳನ್ನು ಡಿ-ಫ್ರೀಜ್ (ಮರುಚಾಲನೆಗೊಳಿಸಲು) ಮಾಡಲು ಹಾಗೂ ಕಂಪನಿಯಿಂದ ವಶಪಡಿಸಿಕೊಂಡಿದ್ದ 2,489 ಕೆ.ಜಿ ಚಿನ್ನ ಹಾಗೂ ಬೆಳ್ಳಿ ಗಟ್ಟಿಗಳನ್ನು ಬಿಡುಗಡೆ ಮಾಡಲು ಸೂಚಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೋರಮಂಗಲ ಠಾಣೆ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರು 2026ರ ಏಪ್ರಿಲ್‌ 4ರಂದು ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎಸ್‌ಎಸ್‌ಎಸ್‌) ಸೆಕ್ಷನ್ 106‌ರ ಪ್ರಕಾರ ಮೊದಲು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಅಥವಾ ಆಸ್ತಿಗಳನ್ನು ಜಪ್ತಿ ಮಾಡಲು ಮತ್ತು ನಂತರ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡುವ ಸ್ಪಷ್ಟ ಅಧಿಕಾರವನ್ನು ಪೊಲೀಸರಿಗೆ ನೀಡುತ್ತದೆ. ಇಂತಹ ಪ್ರಕರಣಗಳಲ್ಲಿ, ಸಂತ್ರಸ್ತರ ಹಣವನ್ನು ರಕ್ಷಿಸಲು ಸೆಕೆಂಡುಗಳು ಅಥವಾ ನಿಮಿಷಗಳ ಅವಧಿಯಲ್ಲಿಯೇ ಖಾತೆಯನ್ನು ತಕ್ಷಣವೇ ಸ್ಥಗಿತಗೊಳಿಸುವುದು ಅತ್ಯಗತ್ಯವಾಗಿರುತ್ತದೆ ಎಂದು ಹೇಳಿದೆ.

ಬಿಎನ್‌ಎಸ್‌ಎಸ್‌ ಸೆಕ್ಷನ್ 106(3)ರ ಅಡಿಯಲ್ಲಿ, ಪೊಲೀಸರು ಮೊದಲು ನಿರ್ಬಂಧಾಜ್ಞೆ ಹೊರಡಿಸಿ, ನಂತರ ಆ ಕ್ರಮದ ಬಗ್ಗೆ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ಗೆ ತಕ್ಷಣವೇ ವರದಿ ಮಾಡಬಹುದು. ಇದರಿಂದ, ಕಾನೂನು ನಿಯಮಗಳ ಪಾಲನೆಯಾಗುತ್ತದೆ. ಹಣದ ಪರಿಣಾಮಕಾರಿ ರಕ್ಷಣೆಯೂ ಆಗುತ್ತದೆ ಎಂದು ಪೀಠ ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಆನ್‌ಲೈನ್ ಆರ್ಥಿಕ ವಂಚನೆಯ ಆದಾಯವು ಬಹುಬ್ಯಾಂಕ್ ಖಾತೆಗಳು, ಸೈಬರ್ ಅಪರಾಧಿಗಳು ಆನ್‌ಲೈನ್ ವಂಚನೆ ಮೂಲಕ ಕದ್ದ ಹಣವನ್ನು ವರ್ಗಾಯಿಸಲು ಮತ್ತು ಅದರ ಮೂಲವನ್ನು ಮುಚ್ಚಿಹಾಕಲು ಬಳಸುವ ಮೂರನೇ ವ್ಯಕ್ತಿಯ ಬ್ಯಾಂಕ್ ಖಾತೆಯಾಗಿದೆ. ಪಾವತಿ ವ್ಯವಸ್ಥೆಗಳು ಸೆಕೆಂಡುಗಳಲ್ಲಿ ಚಲಿಸಿಬಿಡುತ್ತದೆ. ಆದ್ದರಿಂದ, ಸಂತ್ರಸ್ತರ ಹಣವನ್ನು ಸಂರಕ್ಷಿಸಲು ಖಾತೆಯನ್ನು ಸೆಕೆಂಡುಗಳು ಅಥವಾ ನಿಮಿಷಗಳಲ್ಲಿ ಸ್ಥಗಿತಗೊಳಿಸುವ ಅಗತ್ಯವಿರುತ್ತದೆ. ಮೊದಲು ಹಣ ಸಂರಕ್ಷಿಸಬೇಕು. ನಂತರ ತಕ್ಷಣವೇ ನ್ಯಾಯಾಲಯಕ್ಕೆ ವರದಿ ಮಾಡಬೇಕು ಎಂದು ನ್ಯಾಯಪೀಠ ವಿವರಿಸಿದೆ.

ನ್ಯಾಯಾಲಯದ ಪೂರ್ವಾನುಮತಿ ಪಡೆಯಲು ಕಾದು ಕುಳಿತರೆ, ಕಳವಾದ ಹಣವು ಹಲವಾರು ಖಾತೆಗಳ ಮೂಲಕ ವರ್ಗಾವಣೆಯಾಗಬಹುದು, ಇತರ ರೂಪಗಳಾಗಿ ಪರಿವರ್ತನೆಗೊಳ್ಳಬಹುದು‌. ಇಲ್ಲವೇ ಸಂಪೂರ್ಣವಾಗಿ ಕಣ್ಮರೆಯಾಗಬಹುದು. ಅಂತಿಮವಾಗಿ ಸಂತ್ರಸ್ತರಿಗೆ ಉಳಿಯುವುದು ಕೇವಲ ‘ಖಾಲಿ ಖಾತೆಯ ಮೇಲಿನ ಜಪ್ತಿ ಆದೇಶ’. ಆದ್ದರಿಂದ, ಆರ್ಥಿಕ ವಂಚನೆ ಮತ್ತು ಸೈಬರ್ ಅಪರಾಧಗಳ ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಅಥವಾ ನಿರ್ದಿಷ್ಟ ಆಸ್ತಿಗಳನ್ನು ಜಪ್ತಿ ಮಾಡಲು ಮ್ಯಾಜಿಸ್ಟ್ರೇಟ್ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಆದೇಶದಲ್ಲ ವಿವರಿಸಿದೆ.

Related Articles

Comments (0)

Leave a Comment