ಸರಳವಾಸ್ತು ಚಂದ್ರಶೇಖರ ಗುರೂಜಿ ಹಂತಕನಿಗಿಲ್ಲ ಜಾಮೀನು
- by LegalSamachar
- August 10, 2024
- 52 Views
ಬೆಂಗಳೂರು: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಅಂಗಡಿ ಗುರೂಜಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಮಹಂತೇಶ ಶಿರೂರ್ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಜಾಮೀನು ಕೋರಿ ಮಹತೇಂಶ್ ಶಿರೂರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಪೀಠ, ಚಂದ್ರಶೇಖರ ಗುರೂಜಿಯನ್ನು ಅರ್ಜಿದಾರನೇ ಕೊಲೆ ಮಾಡಿರುವುದು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ದಾಖಲೆಗಳಿಂದ ಕಂಡುಬಂದಿರುವ ಕಾರಣ ಆರೋಪಿಯು ಜಾಮೀನು ಪಡೆಯಲು ಅರ್ಹನಾಗಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
ಹೈಕೋರ್ಟ್ ಆದೇಶದಲ್ಲೇನಿದೆ?
ಹಳೆಯ ದ್ವೇಷದಿಂದ ಅರ್ಜಿದಾರ ಆರೋಪಿಯು ಚಂದ್ರಶೇಖರ ಗುರೂಜಿಯನ್ನು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿರುವ ರೀತಿ ನೋಡಿದರೆ, ಗುರೂಜಿ ಮೇಲೆ ಆರೋಪಿ ಎಷ್ಟು ದ್ವೇಷ ಬೆಳೆಸಿಕೊಂಡಿದ್ದ ಎನ್ನುವುದನ್ನು ಸೂಚಿಸುತ್ತದೆ. ಗುರೂಜಿ ಹತ್ಯೆ ಪೂರ್ವಯೋಜಿತ ಕೃತ್ಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಅರ್ಜಿದಾರ ಮಾರಾಕಾಸ್ತ್ರಗಳೊಂದಿಗೆ ಗುರೂಜಿಯನ್ನು ಭೇಟಿಯಾಗಿ, ಚಾಕುವಿನಿಂದ 56 ಬಾರಿ ಇರಿದು ಕೊಲೆ ಮಾಡಿದ್ದಾರೆ. ಅರ್ಜಿದಾರನ ಕೃತ್ಯ ಸಮಾಜದಲ್ಲಿ ಸಂಚಲನ ಮೂಡಿಸಿರುವುದಲ್ಲದೆ, ಅಪಾರ ಪ್ರಮಾಣದಲ್ಲಿ ಭಯವನ್ನೂ ಸೃಷ್ಟಿಸಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮೃತ ಗುರೂಜಿಯ ಕುಟುಂಬದ ಸದಸ್ಯರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಜಾಮೀನು ಅರ್ಜಿ ತೀರ್ಮಾನಿಸುವಾಗ ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಆದರೆ, ವೈಯಕ್ತಿಕ ಸ್ವಾತಂತ್ರ ನಿರಂಕುಶವಾಗಿರುವುದಿಲ್ಲ. ಅದನ್ನು ನ್ಯಾಯಯುತವಾದ ಕಾರಣಗಳಿಂದ ನಿರ್ಬಂಧಿಸಹುದು. ವ್ಯಕ್ತಿಯು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದಾಗ ವೈಯಕ್ತಿ ಸ್ವಾತಂತ್ರವ್ಯನ್ನು ನಿರ್ಬಂಧಿಸಬಹುದು. ಓರ್ವ ವ್ಯಕ್ತಿಯಿಂದ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಸಮಾಜ ನಿರೀಕ್ಷಿಸುತ್ತದೆ. ಪ್ರಜೆಯು ಕಾನೂನು ಪಾಲಿಸಬೇಕಾಗುತ್ತದೆ. ಸಮಾಜದ ನಿಯಮಗಳಿಗೆ ಗೌರವ ತೋರಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಲಾಗಿದೆ.
ವಾದ-ಪ್ರತಿವಾದ:
ವಿಚಾರಣೆ ವೇಳೆ ವಾದ ಮಂಡಿಸಿದ್ದ ಆರೋಪಿಯ ಪರ ವಕೀಲರು, ಅರ್ಜಿದಾರ ಅಮಾಯಕನಾಗಿದ್ದು, ಆತನನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಘಟನೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳಲ್ಲಿಯೂ ಸಹ ಅರ್ಜಿದಾರನ ಗುರುತು ಪತ್ತೆಯಾಗುವುದಿಲ್ಲ. ಆತನ ವಿರುದ್ಧ ಸಾಕ್ಷ್ಯಗಳು ಇಲ್ಲವಾಗಿದ್ದು, ಜಾಮೀನು ಮಂಜೂರು ಮಾಡಬೇಕೆಂದು ಕೋರಿದ್ದರು.
ಈ ವಾದವನ್ನು ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಗುರೂಜಿ ಮೇಲೆ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಿಸಿಟಿವಿ ದೃಶ್ಯಗಳಿಂದ ಸಾಬೀತಾಗಿದೆ. ಗುರೂಜಿ ಅವರ ಪತ್ನಿ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಿ, ಅರ್ಜಿದಾರನ ಗುರುತು ಪತ್ತೆ ಹಚ್ಚಿದ್ದಾರೆ. ಅರ್ಜಿದಾರ ಕೃತ್ಯ ಎಸಗಿರುವುದನ್ನು ಹಲವು ಪ್ರತ್ಯಕ್ಷದರ್ಶಿಗಳು ಕಂಡಿದ್ದಾರೆ. ಗುರೂಜಿಯ ದೇಹದಲ್ಲಿ 56 ಗಾಯಗಳಿದ್ದು, ಇದು ಅರ್ಜಿದಾರನ ಬರ್ಬರ ಮತ್ತು ಹೀನ ಕೃತ್ಯವನ್ನು ತೋರಿಸುತ್ತದೆ. ಅರ್ಜಿದಾರನಿಗೆ ಜಾಮೀನು ನೀಡಿದರೆ ಮೃತರ ಕುಟುಂಬ ಸದಸ್ಯರಿಗೆ ಮತ್ತು ಇತರ ಸಾಕ್ಷಿಗಳ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಈ ಭಯಾನಕ ಹತ್ಯೆಯನ್ನು ಗಮನದಲ್ಲಿರಿಸಿಕೊಂಡು ಆರೋಪಿಗೆ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಪ್ರಕರಣವೇನು?
ಸರಳ ವಾಸ್ತು ಸಂಸ್ಥೆಯ ಉದ್ಯೋಗಿಯಾಗಿದ್ದ ಅರ್ಜಿದಾರ ಮಹಂತೇಶ್ನನ್ನು ಕಾರಣಾಂತರದಿಂದ ತೆಗೆದುಹಾಕಿದ್ದರು. ಈ ಹಿನ್ನೆಲೆಯಲ್ಲಿ ಗುರೂಜಿಯ ಮೇಲೆ ಮಹಂತೇಶ್ಗೆ ದ್ವೇಷ ಮೂಡಿತ್ತು ಎನ್ನಲಾಗಿದೆ. ಈ ಮಧ್ಯೆ ಕಾರ್ಯಕ್ರಮವೊಂದಕ್ಕೆ ಹಾಜರಾಗಲು ಬೆಳಗಾವಿಗೆ ಬಂದಿದ್ದ ಗುರೂಜಿಯನ್ನು ಖಾಸಗಿ ಹೋಟೆಲ್ನಲ್ಲಿ ಭೇಟಿಯಾಗಿದ್ದ ಆರೋಪಿ ಆಶೀರ್ವಾದ ಪಡೆಯುವ ನೆಪದಲ್ಲಿ ಗುರೂಜಿ ಬಳಿಗೆ ತೆರಳಿ ಚಾಕುವಿನಿಂದ ಬರ್ಬರವಾಗಿ ಇರಿದು ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಗುರೂಜಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಧಾರವಾಡದ ವಿದ್ಯಾನಗರ ಠಾಣಾ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ನಂತರ ತನಿಖೆ ನಡೆಸಿ ಕೊಲೆ ಪ್ರಕರಣದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜಾಮೀನು ಕೋರಿ ಮಹಂತೇಶ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ.
Related Articles
Thank you for your comment. It is awaiting moderation.
Comments (0)