ವಸೂಲಿ ಮಾಡಿರುವ ಸಾಲಕ್ಕೆ ಬಡ್ಡಿ ವಿಧಿಸುವುದನ್ನು ಬ್ಯಾಂಕ್‌ಗಳು ನಿಲ್ಲಿಸಬೇಕು; ಹೈಕೋರ್ಟ್‌ನಲ್ಲಿ ವಿಜಯ್ ಮಲ್ಯ ವಕೀಲರ ವಾದ

ಬೆಂಗಳೂರು: ಯುನೈಟೆಡ್‌ ಬ್ರಿವರೀಸ್‌ ಹೋಲ್ಡಿಂಗ್‌ ಲಿಮಿಟೆಡ್‌ (ಯುಬಿಎಚ್‌ಎಲ್‌) ಒಡೆತನದಲ್ಲಿದ್ದ ಕಿಂಗ್‌‌ಫಿಷರ್‌ ಏರ್‌ಲೈನ್ಸ್‌ನಲ್ಲಿ ತಾವು ಹಾಗೂ ತಮ್ಮ ಕಂಪನಿ ಉಳಿಸಿಕೊಂಡಿರುವ ಸಾಲವನ್ನು ಸಂಪೂರ್ಣವಾಗಿ ತೀರಿಸಿದ್ದರೂ ಸಹ ಬ್ಯಾಂಕ್‌ಗಳು ಮರುಪಾವತಿ ಮಾಡಿರುವ ಸಾಲದ ಮೊತ್ತಕ್ಕೂ ಬಡ್ಡಿ ವಿಧಿಸುತ್ತಿರುವುದನ್ನು ಕೂಡಲೇ ಸ್ಥಗಿತಗೊಳಿಸಲು ಆದೇಶಿಬೇಕೆಂದು ವಿಜಯ್‌ ಮಲ್ಯ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.

ಬ್ಯಾಂಕ್‌ಗಳಿಂದ ಬಾಕಿ ಸಾಲದ ಮಾಹಿತಿ ಕೋರಿ ಮದ್ಯದ ದೊರೆ ವಿಜಯ್ ಮಲ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಕಂಪನಿ ಕೋರ್ಟ್‌ಗೆ ಅರ್ಜಿ ಏಕೆ ಸಲ್ಲಿಸಿಲ್ಲ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಮಲ್ಯ ಪರ ಹಿರಿಯ ವಕೀಲ ಸಜನ್‌ ಪೂವಯ್ಯ, ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್‌ ಅಧೀನದಲ್ಲಿ ಬರುತ್ತದೆ. ಬ್ಯಾಂಕ್‌ನವರು ಒಂದು ಹೇಳುತ್ತಾರೆ, ಅಧಿಕೃತ ಬರ್ಖಾಸ್ತುದಾರರು (ಅಫಿಷಿಯಲ್‌ ಲಿಕ್ವಿಡೇಟರ್‌) ಮತ್ತೊಂದು ಹೇಳುತ್ತಾರೆ. ಒಂದು ಕಾಲದಲ್ಲಿ ಯುಬಿಎಚ್‌ಎಲ್‌ ಕಂಪನಿ ವಿಶ್ವದಲ್ಲಿ ಪ್ರಸಿದ್ಧ ಕಂಪನಿಯಾಗಿತ್ತು. ಡಾ. ವಿಜಯ್‌ ಮಲ್ಯ ನಿರ್ದೇಶಕರಾಗಿದ್ದರು. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಅವರ ಸಾಂವಿಧಾನಿಕ ಹಕ್ಕು ಎಂದರು.

ಆಗ ನ್ಯಾಯಪೀಠ, ಸುಪ್ರೀಂಕೋರ್ಟ್‌ನ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಲ್ಯ ಹಾಜರಾಗಿಲ್ಲ. ದೇಶದ ವಿವಿಧೆಡೆ ನಡೆದಿರುವ ಕೋರ್ಟ್‌ ವಿಚಾರಣೆಗೆ ಮಲ್ಯ ಹಾಜರಾಗಿಲ್ಲ. ಹೀಗಿರುವಾಗ, ನೀವು ರಿಟ್‌ ಸಲ್ಲಿಸುವ ಹಕ್ಕನ್ನು ಹೇಗೆ ಮಂಡಿಸುತ್ತೀರಿ ಎಂದು ಪ್ರಶ್ನಿಸಿತು.

ಅದಕ್ಕೆ ಪ್ರತಿಕ್ರಿಯಿಸಿದ ಪೂವಯ್ಯ, ವಿಜಯ್‌ ಮಲ್ಯ ಲಂಡನ್‌ ಕೋರ್ಟ್‌‌ನ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. ಮಲ್ಯ 6,200 ಕೋಟಿ ಸಾಲ ಪಾವತಿಸಬೇಕಿತ್ತು. 14,000 ಕೋಟಿ ವಸೂಲಿ ಆಗಿದೆ ಎಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ 10,200 ಕೋಟಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಆದ್ದರಿಂದಲೇ, ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದರು.

ಬೇಕಾದಾಗಷ್ಟೇ ಕೋರ್ಟ್‌ಗೆ ಬರುತ್ತಾರೆ:
ಬ್ಯಾಂಕ್‌ಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ, ಮಲ್ಯ ದೇಶ ತೊರೆದು ದೇಶಭ್ರಷ್ಟರಾಗಿದ್ದಾರೆ. ಅವರು ಮುಗ್ಧರಾದರೆ ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ತಮಗೆ ಬೇಕಾದಾಗ ಮಾತ್ರ ಕೋರ್ಟ್‌ ಮುಂದೆ ಬರುತ್ತಾರೆ. ಕಳೆದ 10-15 ವರ್ಷಗಳಲ್ಲಿ ನಡೆದಿರುವುದನ್ನು ನೋಡಿದರೆ ಅರ್ಜಿದಾರರು ಹೇಳುವಂತೆ ಯಾವುದೂ ಅಷ್ಟು ಸರಳವಾಗಿಲ್ಲ. ಬ್ಯಾಂಕ್‌ಗಳು ಶಾಸನಕ್ಕೆ ಬದ್ಧವಾಗಿವೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಧಿಕೃತ ಬರ್ಖಾಸ್ತುದಾರರ ಪರ ವಾದ ಮಂಡಿಸಿದ ವಕೀಲೆ ಕೃತಿಕಾ ರಾಘವನ್, ಮಲ್ಯ ಕೇವಲ ಸಾಲದ ಮಾಹಿತಿ ಬಹಿರಂಗಪಡಿಸಬೇಕೆಂದು ಬಯಸಿದರೆ, ಅದನ್ನು ಕಂಪನಿ ನ್ಯಾಯಾಲಯದ ಮುಂದೆ ಕೋರಬೇಕು. ಲಿಕ್ವಿಡೇಟರ್‌ಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಕಂಪನಿ ಪುನರುಜ್ಜೀವನಗೊಳಿಸಲು ಯಾವುದೇ ಪ್ರಯತ್ನ ಮಾಡಲಾಗಿಲ್ಲ. ಇದೀಗ ಏಕಾಏಕಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಕಂಪನಿ ನಿರ್ದೇಶಕರ ವಿರುದ್ಧ ಬಾಕಿ ಇರುವ ಎಲ್ಲ ಪ್ರಕ್ರಿಯೆಗಳ ವಿವರಗಳನ್ನೊಳಗೊಂಡ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅಂತಿಮವಾಗಿ, ನವೆಂಬರ್ 10ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಿ, ಅದರ ಪ್ರತಿಯನ್ನು ಅರ್ಜಿದಾರರ ಪರ ವಕೀಲರಿಗೂ ಒದಗಿಸುವಂತೆ ಅಧಿಕೃತ ಲಿಕ್ವಿಡೇಟರ್‌ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.

Related Articles

Comments (0)

Leave a Comment