ಅಶ್ಲೀಲ ವೆಬ್‌ಸೈಟ್ ನಿಷೇಧಕ್ಕೆ ಮನವಿ; ಸುಪ್ರೀಂ‌ನಲ್ಲಿ ಅರ್ಜಿ ಬಾಕಿ ಹಿನ್ನೆಲೆ ಪಿಐಎಲ್ ವಿಲೇವಾರಿ ಮಾಡಿದ ಹೈಕೋರ್ಟ್

ಬೆಂಗಳೂರು: ನಗ್ನತೆ ಹಾಗೂ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸುವ (Pornography) ಕೆಲ ಅಪ್ಲಿಕೇಷನ್‌ಗಳು (ಆ್ಯಪ್) ಹಾಗೂ ವೆಬ್‌ಸೈಟ್‌ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

‘ಲೀಗಲ್‌ ಅಟಾರ್ನೀಸ್‌ ಮತ್ತು ಬ್ಯಾರಿಸ್ಟರ್ಸ್‌ ಲಾ ಫರ್ಮ್‌’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಇದೇ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಹೈಕೋರ್ಟ್‌ ಯಾವುದೇ ಆದೇಶಗಳನ್ನು ಹೊರಡಿಸಲಾಗದು. ಆದ್ದರಿಂದ, ಅರ್ಜಿ ವಿಲೇವಾರಿ ಮಾಡುತ್ತಿರುವುದಾಗಿ ಆದೇಶಿಸಿತು.

ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಪರ ಹಾಜರಾದ ಡೆಪ್ಯೂಟಿ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿಭೂಷಣ್‌, ಇದೇ ವಿಚಾರ ಕುರಿತ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ. ಒಂದು ಅರ್ಜಿಯಲ್ಲಿ 18 ವರ್ಷದೊಳಗಿನವರಿಗೆ ಪೋರ್ನೋಗ್ರಫಿ ನಿಷೇಧಿಸಬೇಕೆಂಬ ಮನವಿಯೂ ಇದೆ ಎಂದರು.

ಇದನ್ನು ಪರಿಗಣಿಸಿದ ನ್ಯಾಯಾಲಯ, ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವ ಕಾರಣ, ಇಲ್ಲಿ ಯಾವುದೇ ಆದೇಶ ನೀಡಲಾಗದು ಎಂದು ತಿಳಿಸಿ, ಪಿಐಎಲ್ ವಿಲೇವಾರಿ ಮಾಡಿತು.

ಅರ್ಜಿದಾರರ ಮನವಿ ಏನು?
ಅಶ್ಲೀಲ ಹಾಗೂ ನಗ್ನ ಚಿತ್ರಗಳನ್ನು ಪ್ರದರ್ಶಿಸುವ ಕೆಲ ಆ್ಯಪ್‌ ಮತ್ತು ವೆಬ್‌ಸೈಟ್‌ಗಳನ್ನು ನಿಷೇಧಿಸಬೇಕು. ಅಂತಹ ವೆಬ್‌ಸೈಟ್‌ ಮತ್ತು ಆ್ಯಪ್‌ಗಳು ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದ ಅವುಗಳ ವಿರುದ್ಧ ದಂಡನಾ ಕ್ರಮ ಜರುಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು.

ಸುಪ್ರೀಂನಲ್ಲಿ ವಿಚಾರಣೆ ಬಾಕಿ:
ಅಶ್ಲೀಲ ವೆಬ್‌ಸೈಟ್‌ಗಳ ನಿಷೇಧಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ವಿಚಾರ ಅತ್ಯಂತ ಗಂಭೀರವಾಗಿದೆ. ಜತೆಗೆ, ಇದು ಸರ್ಕಾರದ ನೀತಿ ಆಯಾಮದ ವ್ಯಾಪ್ತಿಗೆ ಒಳಪಡಲಿದ್ದು, ಸುದೀರ್ಘ ವಿಚಾರಣೆ ಅಗತ್ಯವಿದೆ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿಗಳ ವಿಚಾರಣೆ ಮುಂದೂಡಿತ್ತು.

Related Articles

Comments (0)

Leave a Comment