ಸಾರ್ವಜನಿಕ ಸ್ಥಳಗಳಲ್ಲಿ ಜನರ ಜಮಾವಣೆಗೆ ನಿರ್ಬಂಧ; ಸರ್ಕಾರದ ಮೇಲ್ಮನವಿ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು/ಧಾರವಾಡ: ರಸ್ತೆ, ಉದ್ಯಾನ, ಆಟದ ಮೈದಾನ ಸೇರಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ 10ಕ್ಕೂ ಅಧಿಕ ಮಂದಿ ಗುಂಪು ಸೇರಿದರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಸಂಬಂಧ ಹೊರಡಿಸಲಾಗಿದ್ದ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಕುರಿತ ಆದೇಶವನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಸೇರಿ ಯಾವುದೇ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2025ರ ಅಕ್ಟೋಬರ್ 18ರಂದು ಹೊರಡಿಸಿದ್ದ ಆದೇಶಕ್ಕೆ ತಡೆ ‌ನೀಡಿ ಧಾರವಾಡದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಅಕ್ಟೋಬರ್ 28ರಂದು ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ಕುರಿತು ಮಂಗಳವಾರ ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್‌.ಜಿ. ಪಂಡಿತ್‌ ಹಾಗೂ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಆದೇಶ ಕಾಯ್ದಿರಿಸಿತು.

ಕ್ರಮ ಸಮರ್ಥಿಸಿಕೊಂಡ ಸರ್ಕಾರ:
ವಿಚಾರಣೆ ವೇಳೆ, ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಸರ್ಕಾರ ತನ್ನ ಆಸ್ತಿ ಮತ್ತು ಸಾರ್ವಜನಿಕರ ಹಕ್ಕು ರಕ್ಷಣೆ ಮಾಡಲು 10ಕ್ಕೂ ಅಧಿಕ ಮಂದಿ ರಸ್ತೆ, ಮೈದಾನದಲ್ಲಿ ಸಮಾವೇಶ/ರ‌್ಯಾಲಿ ನಡೆಸುವುದನ್ನು ಕಾನೂನುಬಾಹಿರ ಎಂದಿದ್ದು, ಭಾರತೀಯ ನ್ಯಾಯ ಸಂಹಿತೆ ಅಡಿ ಅಪರಾಧ ಕೃತ್ಯ ಎಂದು ಆದೇಶ ಮಾಡಿದೆ. ಇದು ಸಕಾರಾತ್ಮಕ ಆದೇಶವಾಗಿದೆ ಎಂದರು.

ಏಕಸದಸ್ಯ ನ್ಯಾಯಪೀಠದ ಆದೇಶದಿಂದ ಸರ್ಕಾರದ ಹಕ್ಕು ಮೊಟಕಾಗಿದೆ. ಅನುಮತಿ ಪಡೆಯದೆ ಖಾಸಗಿ ಸಂಸ್ಥೆಗಳು ಸರ್ಕಾರದ ಆಸ್ತಿಯಲ್ಲಿ ಏನು ಬೇಕಾದರೂ ಮಾಡಲಾಗದು. ಜನರು ಪಾರ್ಕ್‌ನಲ್ಲಿ ಓಡಾಟ ಮಾಡುವುದರ ಬಗ್ಗೆ ಸರ್ಕಾರದ ಆದೇಶ ಮಾತನಾಡುತ್ತಿಲ್ಲ. ಅರ್ಜಿದಾರರು ಪಾರ್ಕ್‌ನಲ್ಲಿ ಓಡಾಟ ಮಾಡಬೇಕು ಎಂದು ಹೇಳುತ್ತಿಲ್ಲ. ಪಾರ್ಕ್‌ನಲ್ಲಿ ಬೋಧನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ವಿಚಾರ ಸಂಕಿರಣವನ್ನು ಅರ್ಜಿದಾರರು ಸಭಾಂಗಣದಲ್ಲಿ ನಡೆಸಬಹುದು ಎಂದು ಹೇಳಿದರು.

ಉದ್ಯಾನ, ಆಟದ ಮೈದಾನಕ್ಕೆ ಸ್ಪಷ್ಟ ವ್ಯಾಖ್ಯಾನವಿದೆ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ರಸ್ತೆಯಲ್ಲಿ ಮೆರವಣಿಗೆ/ರ‌್ಯಾಲಿ/ಸಮಾವೇಶ ನಡೆಸುವುದರಿಂದ ಸಾರ್ವಜನಿಕರಿಗೆ ಸರಾಗವಾಗಿ ಓಡಾಡಲು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ಅನುಮತಿ ಪಡೆಯುವುದು ಕಡ್ಡಾಯಗೊಳಿಸಿ, ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರಲ್ಲದೆ, ಯಾವುದೇ ಚಟುವಟಿಕೆ ನಡೆಸಲು ಅನುಮತಿ ಕೋರಿದರೆ ಮೂರು ದಿನದಲ್ಲಿ ನೀಡಲಾಗುವುದು. ಈ ಸಂಬಂಧ ಸರ್ಕಾರ ಮಾರ್ಗಸೂಚಿ ರೂಪಿಸಿದೆ. ಸರ್ಕಾರದ ಆಸ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಈ ಮಧ್ಯೆ ನ್ಯಾಯಪೀಠ, ಮಧ್ಯಂತರ ಆದೇಶ ತೆರವಿಗೆ ಕೋರಿ ಏಕಸದಸ್ಯ ನ್ಯಾಯಪೀಠದ ಮುಂದೆ ಮೆಮೊ ಸಲ್ಲಿಸಬಹುದಲ್ಲವೇ? ಎಂದು ಪ್ರಶ್ನಿಸಿತು. ಇದಕ್ಕೆ ಎಜಿ ಅವರು, ಏಕಸದಸ್ಯ ನ್ಯಾಯಪೀಠ ಮಧ್ಯಂತರ ಪರಿಹಾರ ನೀಡಬಹುದಿತ್ತು. ಆದರೆ, ತಡೆಯಾಜ್ಞೆ ನೀಡಿದೆ. ಆದ್ದರಿಂದ, ಮುಂದಿನ ನ್ಯಾಯಾಲಯಕ್ಕೆ ಹೋಗಬೇಕೆ ಹೊರತು ಅಲ್ಲಿಗೆ ಹೋಗಲಾಗದು ಎಂದು ವಿವರಿಸಿದರು.

ಮೇಲ್ಮನವಿಗೆ ಮೂಲ ಅರ್ಜಿದಾರರ ಆಕ್ಷೇಪ:
ಮೂಲ ರಿಟ್‌ ಅರ್ಜಿದಾರರಾಗಿರುವ ಪುನಃಶ್ಚೇತನ ಸೇವಾ ಟ್ರಸ್ಟ್ ಪರ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು, ಆಟದ ಮೈದಾನ, ಸಾರ್ವಜನಿಕ ಸ್ಥಳಗಳು ತನಗೆ ಸೇರಿದ್ದು, ಅವುಗಳನ್ನು ಜನರು ಬಳಕೆ ಮಾಡಲು ಹಕ್ಕು ಹೊಂದಿಲ್ಲ ಎಂದು ಸರ್ಕಾರ ಭಾವಿಸಿದೆ. ಇದು ಸರಿಯಾದ ರೀತಿಯ ಕಾನೂನಿನ ವ್ಯಾಖ್ಯಾನವಲ್ಲ. ಏಕಸದಸ್ಯ ನ್ಯಾಯಪೀಠದ ಮುಂದೆ ಮಧ್ಯಂತರ ಆದೇಶ ತೆರವು ಕೋರುವುದಿಲ್ಲ, ಅದಕ್ಕಾಗಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ ಎಂದರು.

ಆಟದ ಮೈದಾನದಲ್ಲಿ ಗುಂಪೊಂದು ಕ್ರಿಕೆಟ್‌ ಆಡಬೇಕಾದರೆ ಸರ್ಕಾರದ ಬಳಿ ದಿನಂಪ್ರತಿ ಅನುಮತಿ ಪಡೆಯಬೇಕೆ? ಇದರಲ್ಲಿ ಸಕಾರಾತ್ಮಕವಾದ ವಿಚಾರವೇನಿದೆ? ಸಂವಿಧಾನದ 19(ಬಿ) ವಿಧಿಯಡಿ ಶಾಂತಿಯುತವಾಗಿ ಜತೆಗೂಡುವುದನ್ನು ನಿರ್ಬಂಧಿಸಲಾಗದು. ಇದಕ್ಕಿಂತ ಸ್ವೇಚ್ಛೆಯ ಆದೇಶ ಇನ್ನೊಂದಿಲ್ಲ ಎಂದು ಆಕ್ಷೇಪಿಸಿದರು.

ಪ್ರತಿಯೊಂದು ಮೈದಾನ, ರಸ್ತೆ ನಮಗೆ ಸೇರಿರುವುದರಿಂದ ಅದನ್ನು ನಿರ್ಬಂಧಿಸುವ ಅಧಿಕಾರ ನಮಗೆ ಇದೆ ಎಂದು ಸರ್ಕಾರ ಹೇಳಲಾಗದು. ಉದ್ಯಾನಕ್ಕೆ ಹೋಗುವವರಿಗೆ ಅನುಮತಿ ಪಡೆಯಬೇಕು ಎಂದು ಸರ್ಕಾರ ಹೇಳಲಾಗದು. ಅಕ್ರಮ ಕೂಟ ನಿರ್ಬಂಧಿಸಲು ಹಲವು ಅಪರಾಧಿಕ ಸೆಕ್ಷನ್‌ಗಳು ಈಗಾಗಲೇ ಚಾಲ್ತಿಯಲ್ಲಿವೆ. ಸಾರ್ವಜನಿಕ ಉದ್ಯಾನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಲಿದ್ದು, ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸುವ ವಿಚಾರ ನಗರ ಸ್ಥಳೀಯ ಸಂಸ್ಥೆಗಳಿಗೆ ಬರುತ್ತದೆ. ಇಲ್ಲಿ ಪೊಲೀಸ್‌ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳು ಬರುತ್ತವೆ. ಇಲ್ಲಿ ಸರ್ಕಾರಕ್ಕೆ ಯಾವುದೇ ಕೆಲಸ ಇಲ್ಲ. ಅದಾಗ್ಯೂ, ಸರ್ಕಾರ ಮೂಗು ತೂರಿಸಬೇಕು ಎಂದಾದರೆ ಅವರು ಕಾಯ್ದೆ ರೂಪಿಸಬೇಕೇ ಹೊರತು ಕಾರ್ಯಕಾರಿ ಆದೇಶದ ಮೂಲಕ ಜನರ ಹಕ್ಕನ್ನು ಕಸಿಯಲಾಗದು ಎಂದರು.

ಏಕಸದಸ್ಯ ಪೀಠದ ಆದೇಶವೇನು?
ಪುನಃಶ್ಚೇತನ ಸೇವಾ ಟ್ರಸ್ಟ್ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿ ಕುರಿತು ಅಕ್ಟೋಬರ್ 28ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಅಧಿಕ ಮಂದಿ ಗುಂಪು ಸೇರುವುದನ್ನು‌ ನಿರ್ಬಂಧಿಸಿ ಸರ್ಕಾರ ಹೊರಡಿಸಿರುವ ಆದೇಶವು ಮೇಲ್ನೋಟಕ್ಕೆ ಸಂವಿಧಾನದ ಪರಿಚ್ಛೇದ 19(1)(ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಹಾಗೂ 19(1)(ಬಿ) (ಶಸ್ತ್ರಾಸ್ತ್ರರಹಿತವಾಗಿ, ಶಾಂತಿಯುತವಾಗಿ ಒಟ್ಟುಗೂಡುವ) ಅಡಿಯಲ್ಲಿ ಸಾರ್ವಜನಿಕರಿಗೆ ದೊರೆತಿರುವ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ. ಸಂವಿಧಾನ ಪ್ರದತ್ತ ಹಕ್ಕನ್ನು ಕಾನೂನು ಜಾರಿಗೊಳಿಸುವ ಮೂಲಕ ಕಸಿದುಕೊಳ್ಳಬಹುದೇ ಹೊರತು ಸರ್ಕಾರಿ ಆದೇಶ ಹೊರಡಿಸುವ ಮೂಲಕವಲ್ಲ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು.

ಒಂದೊಮ್ಮೆ, ಸರ್ಕಾರದ ಆದೇಶವನ್ನು ಹೀಗೇ ಬಿಟ್ಟರೆ, ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಕಾರ್ಯಗತಗೊಳಿಸಲು ಅನುಮತಿಸಲು ಸಾಧ್ಯವಿಲ್ಲ. ಸರ್ಕಾರದ ಆದೇಶವು ಸಂವಿಧಾನದ ಪರಿಚ್ಛೇದ 13(2) (ಸಂವಿಧಾನದಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ಸಂಕ್ಷೇಪಿಸುವ ಯಾವುದೇ ಕಾನೂನನ್ನು ರಾಜ್ಯ ರಚಿಸಬಾರದು) ಉಲ್ಲಂಘಿಸುವ ಹಿನ್ನೆಲೆಯಲ್ಲಿ, ಅಕ್ಟೋಬರ್ 18ರ ಸರ್ಕಾರದ ಆದೇಶ ಹಾಗೂ ಆ ನಂತರದ ಎಲ್ಲ ಆದೇಶಗಳಿಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿತ್ತು.

Related Articles

Comments (0)

Leave a Comment