ಜಾಲಿ ಎಲ್‌ಎಲ್‌ಬಿ 3 ಬಿಡುಗಡೆಗೆ ತಡೆ ಕೋರಿ ಪಿಐಎಲ್ ಸಲ್ಲಿಸಿದ್ದ ವಕೀಲೆಗೆ ವಿಧಿಸಿದ್ದ ₹50 ಸಾವಿರ ದಂಡ ಮನ್ನಾ ಮಾಡಿದ ಹೈಕೋರ್ಟ್

ಬೆಂಗಳೂರು: ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನಿಸಲಾಗಿದೆ ಎಂದು ಆರೋಪಿಸಿ ‘ಜಾಲಿ ಎಲ್‌ಎಲ್‌ಬಿ 3’ ಚಲನಚಿತ್ರ ಬಿಡುಗಡೆಗೆ ತಡೆ ಕೋರಿ ಪಿಐಎಲ್ ಸಲ್ಲಿಸಿದ್ದ ಯುವ ವಕೀಲೆಗೆ ವಿಧಿಸಿದ್ದ 50 ಸಾವಿರ ರೂ. ದಂಡವನ್ನು ಹೈಕೋರ್ಟ್ ಮನ್ನಾ ಮಾಡಿದೆ. ಅರ್ಜಿದಾರರು ಬೇಷರತ್‌ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸಿ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ಹಿಂಪಡೆದಿದೆ.

ಬಾಲಿವುಡ್ ಚಲನಚಿತ್ರ ಜಾಲಿ ಎಲ್‌ಎಲ್‌ಬಿ 3 ಬಿಡುಗಡೆಗೆ ತಡೆಯಾಜ್ಞೆ ಕೋರಿ ಬೆಂಗಳೂರಿನ ಮಂಜುನಾಥ ನಗರದ ಸಯೀದಾ ನಿಲೋಫರ್‌ (27) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೆಪ್ಟೆಂಬರ್ 18ರಂದು ವಜಾಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ, ನ್ಯಾಯಾಲಯದ ಸಮಯ ವ್ಯರ್ಥಪಡಿಸಿದ್ದಕ್ಕಾಗಿ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿತ್ತು.

ಜತೆಗೆ, ದಂಡದ ಮೊತ್ತವನ್ನು 2 ವಾರಗಳ ಒಳಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಠೇವಣಿ ಇಟ್ಟು, ಅದರ ಪುರಾವೆಯನ್ನು ಹೈಕೋರ್ಟ್ ರಿಜಿಸ್ಟ್ರಿಗೆ ಸಲ್ಲಿಸಬೇಕು. ತಪ್ಪಿದರೆ, ಅರ್ಜಿದಾರರ ವಿರುದ್ಧ ಮುಂದಿನ ಕ್ರಮ ಜರುಗಿಸುವ ಸಲುವಾಗಿ ಈ ಅರ್ಜಿಯನ್ನು ಮತ್ತೆ ನ್ಯಾಯಾಲಯದ ಮುಂದೆ ಸಲ್ಲಿಸಬೇಕು ಎಂದು ರಿಜಿಸ್ಟ್ರಿಗೆ ಸೂಚಿಸಿತ್ತು.

ಶುಕ್ರವಾರ (ಅಕ್ಟೋಬರ್ 31) ನ್ಯಾಯಪೀಠದ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲರು, ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದಕ್ಕಾಗಿ ಅರ್ಜಿದಾರೆ ಬೇಷರತ್‌ ಕ್ಷಮೆ ಯಾಚಿಸಲಿದ್ದಾರೆ. ವಕೀಲರಾಗಿರುವ ಅವರು ಇತ್ತೀಚೆಗಷ್ಟೇ ವೃತ್ತಿಗೆ ಸೇರಿದ್ದಾರೆ. ಇಂಥ ಅರ್ಜಿ ಸಲ್ಲಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿರಲಿಲ್ಲ. ತಂದೆಯನ್ನು ಕಳೆದುಕೊಂಡಿರುವ ಅರ್ಜಿದಾರೆ ಮಾನಸಿಕ ತೊಂದರೆಗಳಿಂದ ಬಳಲುತ್ತಿದ್ದಾರೆ. ದಂಡವನ್ನು ಮನ್ನಾ ಮಾಡುವಂತೆ ನ್ಯಾಯಾಲಯದ ಮುಂದೆ ಮರುಪರಿಶೀಲನಾ ಅರ್ಜಿಯನ್ನೂ ಸಲ್ಲಿಸಲಾಗಿದೆ. ಆದ್ದರಿಂದ, ಅರ್ಜಿದಾರೆಗೆ ವಿಧಿಸಿರುವ ದಂಡವನ್ನು ಮನ್ನಾ ಮಾಡಬೇಕು ಎಂದು ಕೋರಿದರು.

ಇದನ್ನು ಆಲಿಸಿದ ನ್ಯಾಯಪೀಠ, ದಂಡವನ್ನು ಮನ್ನಾ ಮಾಡಲು ನ್ಯಾಯಾಲಯ ಒಲವು ತೋರದಿದ್ದರೂ, ವಕೀಲರು ಉಲ್ಲೇಖಿಸಿದಂತೆ ಅರ್ಜಿದಾರರ ಪರಿಸ್ಥಿತಿ ಹಾಗೂ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಿಧಿಸಲಾಗಿದ್ದ 50 ಸಾವಿರ ರೂ. ದಂಡವನ್ನು ಮನ್ನಾ ಮಾಡಲಾಗುತ್ತಿದೆ ಎಂದು ಆದೇಶಿಸಿತು.

ಪ್ರಕರಣವೇನು?
ಜಾಲಿ ಎಲ್‌ಎಲ್‌ಬಿ 3 ಚಲನಚಿತ್ರದಲ್ಲಿ ತೋರಿಸಲಾಗಿರುವ ಸಂಭಾಷಣೆಯು ಮಾನಹಾನಿಕಾರವಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆಯಾಗಿದೆ. ಆದ್ದರಿಂದ, ಕಲಾವಿದರು ಮತ್ತು ಚಿತ್ರ ತಯಾರಕರು ರಾಷ್ಟ್ರಮಟ್ಟದಲ್ಲಿ ಪ್ರಸರಣ ಹೊಂದಿರುವ ಪತ್ರಿಕೆಗಳಲ್ಲಿ ಬೇಷರತ್‌ ಕ್ಷಮೆ ಕೋರಲು ನಿರ್ದೇಶಿಸಬೇಕು. ಪ್ರಕರಣದ ತನಿಖೆ ನಡೆಸಿ, ನಟರು, ಸಿನಿಮಾ ತಯಾರಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಕ್ರಮಕೈಗೊಳ್ಳಲು ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ನ್ಯಾಯಾಲಯದ ದೃಶ್ಯಗಳನ್ನು ಚಿತ್ರದಲ್ಲಿ ತೋರಿಸುವ ಮೂಲಕ ಹಾಸ್ಯಪ್ರಜ್ಞೆಯಿಂದ ಪ್ರೇಕ್ಷಕರನ್ನು ಆಕರ್ಷಿಸಲು ಉದ್ದೇಶಿಸಿದಂತೆ ತೋರುತ್ತದೆ. ಆದರೆ, ಅರ್ಜಿದಾರರನ್ನು ಆ ಹಾಸ್ಯ ಪ್ರಜ್ಞೆಯು ಆಕರ್ಷಿಸಿಲ್ಲ. ಆ ಕಾರಣಕ್ಕೆ ಸೃಜನಶೀಲತೆ ಹತ್ತಿಕ್ಕುವುದು, ಮತ್ತೆ ಸೆನ್ಸಾರ್‌ ಮಾಡುವಂತೆ ಆದೇಶ ನೀಡಲು ಸಾಧ್ಯವಿಲ್ಲ. ಈ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ನ್ಯಾಯಾಲಯದ ಅಮೂಲ್ಯವಾದ ಸಮಯ ವ್ಯರ್ಥ ಮಾಡುತ್ತವೆ ಎಂದು ಅಭಿಪ್ರಾಯಪಟ್ಟು ಪಿಐಎಲ್ ವಜಾಗೊಳಿಸಿತ್ತಲ್ಲದೆ, ಅರ್ಜಿದಾರೆಗೆ 50 ಸಾವಿರ ರೂ. ದಂಡ ವಿಧಿಸಿತ್ತು.

Related Articles

Comments (0)

Leave a Comment