ಎಫ್ಐಆರ್ ರದ್ದು ಕೋರಿ ಎಂ.ಡಿ. ಸಮೀರ್ ಸಲ್ಲಿಸಿರುವ ಅರ್ಜಿ; ವಿಚಾರಣಾ ವ್ಯಾಪ್ತಿ ಬಗ್ಗೆ ಸ್ಪಷ್ಟನೆ ಕೇಳಿದ ಹೈಕೋರ್ಟ್

ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾ ಕೊಲೆ ವಿಚಾರವಾಗಿ ಶ್ರೀಕ್ಷೇತ್ರ ಧರ್ಮಸ್ಥಳ, ಅದರ ಧರ್ಮಾಧಿಕಾರಿ ಮತ್ತವರ ಕುಟುಂಬದ ವಿರುದ್ಧ ಪರೋಕ್ಷವಾಗಿ ಆರೋಪಗಳನ್ನು ಮಾಡಿ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋ ಪ್ರಸಾರ ಮಾಡಿದ ಪ್ರಕರಣ ಸಂಬಂಧ ಎಂ.ಡಿ. ಸಮೀರ್ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣಾ ವ್ಯಾಪ್ತಿ ಕುರಿತು ಸ್ಪಷ್ಟನೆ ನೀಡಲು ರಿಜಿಸ್ಟ್ರಾರ್ ಜನರಲ್ ಕಚೇರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಬಳ್ಳಾರಿಯ ಕೌಲ್ ಬಜಾರ್ ಪೋಲಿಸ್ ಠಾಣೆಯಲ್ಲಿ 2025ರ ಮಾರ್ಚ್ ತಿಂಗಳಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಯೂಟ್ಯೂಬರ್ ಎಂ.ಡಿ. ಸಮೀರ್ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು.

ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿಯ ವಿಚಾರಣಾ ಮಾನ್ಯತೆ ಬಗ್ಗೆ ಆಕ್ಷೇಪವಿದೆ. ಏಕೆಂದರೆ, ಎಫ್ಐಆರ್ ದಾಖಲಾಗಿರುವುದು ಬಳ್ಳಾರಿಯಲ್ಲಿ, ಅದು ಧಾರವಾಡ ಹೈಕೋರ್ಟ್ ಪೀಠದ ವಿಚಾರಣಾ ವ್ಯಾಪ್ತಿಗೆ ಬರಲಿದೆ ಎಂದರು.

ಬೆಂಗಳೂರು ಹೈಕೋರ್ಟ್ ಪ್ರಧಾನ ಪೀಠದಲ್ಲಿ ಅರ್ಜಿ ಸಲ್ಲಿಸಿರುವುದನ್ನು ಸಮರ್ಥಿಸಿಕೊಂಡ ಸಮೀರ್ ಪರ ವಕೀಲರು, ಇಡೀ ಘಟನಾವಳಿಗಳು ನಡೆದದ್ದು ಬೆಂಗಳೂರಿನಲ್ಲಿ. ನೋಟಿಸ್ ನೀಡಿರುವುದೂ ಸಹ ಬೆಂಗಳೂರು ವಿಳಾಸದಲ್ಲಿ. ಮಹಾರಾಷ್ಟ್ರದ ಪ್ರಕರಣವೊಂದರಲ್ಲಿ ವಿಚಾರಣಾ ವ್ಯಾಪ್ತಿಯ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಅದರಂತೆ, ಬೆಂಗಳೂರು ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಹಕ್ಕು ಇದೆ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರು ಉಲ್ಲೇಖಿಸಿರುವ ಸುಪ್ರೀಂಕೋರ್ಟ್ ಆದೇಶ ಎರಡು ರಾಜ್ಯಗಳ ನಡುವಿನ ಪ್ರಕರಣದ್ದಾಗಿದೆ. ಆದರೆ, ಇಲ್ಲಿ ಒಂದೇ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ಆದ್ದರಿಂದ, ಬಳ್ಳಾರಿಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣಾ ವ್ಯಾಪ್ತಿ ಧಾರವಾಡ ಹೈಕೋರ್ಟ್ ಹೊಂದಿದೆ ಎಂದು ಅಭಿಪ್ರಾಯಪಟ್ಟಿತಲ್ಲದೆ, ಈ ಸಂಬಂಧ ಸ್ಪಷ್ಟಣೆ ನೀಡುವಂತೆ ರಿಜಿಸ್ಟ್ರಾರ್ ಜನರಲ್ ಕಚೇರಿಗೆ ಸೂಚನೆ ‌ನೀಡಿತು.

ಇದೇ ವೇಳೆ ಪ್ರಕರಣವನ್ನು ಧಾರವಾಡ ಪೀಠಕ್ಕೆ ವರ್ಗಾಯಿಸುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಅರ್ಜಿದಾರ ಹಾಗೂ ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿತು.

Related Articles

Comments (0)

Leave a Comment