ಕಸಾಪ ಆರ್ಥಿಕ ಅವ್ಯವಹಾರದ ತನಿಖೆಗೆ ಆಡಳಿತಾಧಿಕಾರಿಯಿಂದ ಸಹಾಯ; ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದ್ದು, 2023-24ನೇ ಸಾಲಿನ ಆರ್ಥಿಕ ವಹಿವಾಟಿನಲ್ಲಿ ಅಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಗೆ ಆಡಳಿತಾಧಿಕಾರಿ ಸಹಾಯ ಮಾಡಲಿದ್ದಾರೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಕಸಾಪಗೆ ಸೆಪ್ಟೆಂಬರ್‌ 30ರಂದು ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಕೆ ಮಾಡಲು ಮಹೇಶ್‌ ಜೋಶಿಗೆ ಕಾಲಾವಕಾಶ ನೀಡಿತಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ವಾದಾಂಶಗಳನ್ನು ಹಂಚಿಕೊಳ್ಳುವಂತೆ ಎಲ್ಲ ಪಕ್ಷಕಾರರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಅಕ್ಟೋಬರ್‌ 30ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಜೋಶಿ ಪರ ಹಿರಿಯ ವಕೀಲ ಜಯಕುಮಾರ್‌ ಪಾಟೀಲ್‌ ವಾದ ಮಂಡಿಸಿ, ಸೆಪ್ಟೆಂಬರ್‌ 22ರಂದು ತನಿಖೆಗೆ ಹಾಜರಾಗಲು ಜಿಲ್ಲಾ ಸಹಕಾರ ಉಪನಿಬಂಧಕರು ಸೂಚಿಸಿದ್ದರು. ಅಂದು ಸಂಬಂಧಿಯೊಬ್ಬರು ನಿಧನರಾಗಿದ್ದರಿಂದ ಜೋಶಿ ಅವರು ಕಾಲಾವಕಾಶ ಕೇಳಿದ್ದರು. ಈ ನಡುವೆ, ಸರ್ಕಾರ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಸೆಪ್ಟೆಂಬರ್‌ 30ರಂದು ಆಡಳಿತಾಧಿಕಾರಿ ನೇಮಕ ಮಾಡಿದೆ. ತನಿಖೆಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡಲು ಜೋಶಿ ಸಿದ್ಧರಿದ್ದಾರೆ. ಸೆಪ್ಟೆಂಬರ್‌ 22ರಂದು ತನಿಖೆಗೆ ಹಾಜರಾಗಿಲ್ಲ ಎಂದು ಆಡಳಿತಾಧಿಕಾರಿ ನೇಮಕ ಮಾಡಿದ್ದಾರೆ. ಇದನ್ನು ಅರ್ಜಿಯಲ್ಲಿ ಪ್ರಶ್ನಿಸಿ ತಿದ್ದುಪಡಿ ಮಾಡಲಾಗುವುದು ಎಂದರು.

ಅದಕ್ಕೆ ನ್ಯಾಯಪೀಠ, ಇದು ಮಾಡುವವರೆಗೆ ನೀವು ಯಾವುದೇ ಸಭೆ ನಡೆಸಲಾಗದು. ಈಗಾಗಲೇ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿರುವುದರಿಂದ ಅವರು ಕಸಾಪ ನಡೆಸುತ್ತಾರೆ ಎಂದಿತಲ್ಲದೆ, ತನಿಖಾಧಿಕಾರಿಯ ಮುಂದೆ ಯಾವಾಗ ಹಾಜರಾಗುತ್ತೀರಿ ಎಂದು ಜೋಶಿ ಪರ ವಕೀಲರನ್ನು ಪ್ರಶ್ನಿಸಿತು. ಅದಕ್ಕೆ ವಕೀಲರು, ನ್ಯಾಯಾಲಯ ನಿರ್ದೇಶಿಸುವ ಯಾವುದೇ ದಿನ ಜೋಶಿ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಲಿದ್ದಾರೆ ಎಂದರು.

ಇದಕ್ಕೆ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಈಗ ಆಡಳಿತಾಧಿಕಾರಿ ನೇಮಕ ಮಾಡಿದ್ದು, ಅವರು ಕಸಾಪ ಆಡಳಿತವನ್ನು ಕೈಗೆ ತೆಗೆದುಕೊಳ್ಳಲಿದ್ದಾರೆ. ಜೋಶಿ ನಡೆಸಿರುವ ಅಕ್ರಮದ ಬಗ್ಗೆ ತನಿಖೆ ನಡೆಸಲಾಗುತ್ತದೆ. ಯಾವ ದಿನ ತನಿಖೆಗೆ ಹಾಜರಾಗಬೇಕು ಎಂಬುದಕ್ಕೆ ಹೊಸ ದಿನಾಂಕವನ್ನು ತನಿಖಾಧಿಕಾರಿ ನೀಡಲಿದ್ದಾರೆ. ತನಿಖಾಧಿಕಾರಿ ಬಿಟ್ಟು ಎಲ್ಲರಿಗೂ ದಾಖಲೆಗಳನ್ನು ಜೋಶಿ ನೀಡಿದ್ದಾರೆ. ಈ ಕಾರಣಕ್ಕಾಗಿ ಆಡಳಿತಾಧಿಕಾರಿ ನೇಮಕ ಮಾಡಬೇಕಾಗಿ ಬಂದಿತ್ತು. ಸಂಬಂಧಿಯೊಬ್ಬರು ಮೃತಪಟ್ಟ ಕಾರಣ ತನಿಖೆಗೆ ಹಾಜರಾಗಲು 15 ದಿನ ಕಾಲಾವಕಾಶ ನೀಡಬೇಕು ಎಂದು ಜೋಶಿ ಪತ್ರ ಬರೆದಿದ್ದಾರೆ. ಇದು ಅವರ ನಡತೆಯನ್ನು ತೋರಿಸುತ್ತದೆ ಎಂದರು.

ನೀವು ತನಿಖೆ ನಡೆಸುತ್ತೀರೋ ಅಥವಾ ಆಡಳಿತಾಧಿಕಾರಿಯು ಕಸಾಪದ ಲೆಕ್ಕ ಪತ್ರಗಳನ್ನು ತೆಗೆದುಕೊಳ್ಳುತ್ತಾರೋ? ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಅಡ್ವೊಕೇಟ್ ಜನರಲ್, ಆಡಳಿತಾಧಿಕಾರಿಯು ತನಿಖೆಗೆ ಸಹಾಯ ಮಾಡಲಿದ್ದಾರೆ ಎಂದರು. ಆಗ ನ್ಯಾಯಪೀಠ, ಜೋಶಿ ಅವರು ತನಿಖಾಧಿಕಾರಿ ಮುಂದೆ ಹಾಜರಾಗಿ ಸಾಕ್ಷಿ ನುಡಿಯುವುದು ಬೇಡವೇ? ಎಂದು ಕೇಳಿತು. ಇದಕ್ಕೆ ಎಜಿ, ತನಿಖೆಯಲ್ಲಿ ಸಾಕ್ಷಿ ಏನಾದರೂ ಒದಗಿಸಬೇಕು ಅಥವಾ ಸ್ಪಷ್ಟನೆ ನೀಡಬೇಕು ಎಂಬ ಸೀಮಿತ ಪ್ರಶ್ನೆಗೆ ಉತ್ತರಿಸಲು ಜೋಶಿ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕಾಗುತ್ತದೆ ಎಂದರು.

ಇದನ್ನು ಆಲಿಸಿದ ನ್ಯಾಯಪೀಠ, ಎಲ್ಲರಿಗೂ ವಾದಾಂಶಗಳನ್ನು ಹಂಚಿಕೊಳ್ಳುವಂತೆ ಸೂಚಿಸಿ, ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment