ಪರೋಲ್ ಷರತ್ತು ಉಲ್ಲಂಘನೆ; ಪರಿಣಾಮದ ಬಗ್ಗೆ ಕೈದಿಗಳಿಗೆ ಅರಿವು ಮೂಡಿಸಲು ಕಾರಾಗೃಹ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ
- by Jagan Ramesh
- October 20, 2025
- 8 Views

ಬೆಂಗಳೂರು: ಅಪರಾಧ ಪ್ರಕಣಗಳಲ್ಲಿ ಜೈಲು ಶಿಕ್ಷೆಗೊಳಗಾಗಿರುವ ಕೈದಿಗಳು ಪರೋಲ್ ಮೇಲೆ ಬಿಡುಗಡೆಯಾದ ಬಳಿಕ ಷರತ್ತುಗಳು ಉಲ್ಲಂಘಿಸಿ ಶರಣಾಗದಿದ್ದಲ್ಲಿ ಎದುರಾಗಬಹುದಾದ ಪರಿಣಾಮ ಮತ್ತು ವಿಧಿಸಬಹುದಾದ ಶಿಕ್ಷೆಗೆ ಸಂಬಂಧಿಸಿದಂತೆ ಕೈದಿಗಳಲ್ಲಿಜಾಗೃತಿ ಮೂಡಿಸುವಂತೆ ಕಾರಾಗೃಗಳ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಜತೆಗೆ, ಪರೋಲ್ ಮಂಜೂರಾದ ಬಳಿಕ ಷರತ್ತು ಉಲ್ಲಂಘಿಸಿದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಮತ್ತು ಪರೋಲ್ ಮೇಲೆ ಬಿಡುಗಡೆಯಾದ ಕೈದಿಗಳ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತ ಕಿರು ಹೊತ್ತಿಗೆಯನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಸಹಯೋಗದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮುದ್ರಿಸಿ ಕೈದಿಗಳು ಮತ್ತವರ ಕುಟುಂಬದವರಿಗೆ ಹಂಚಬೇಕು ಎಂದು ಬಂಧೀಖಾನೆ ಇಲಾಖೆಗೆ ನ್ಯಾಯಾಲಯ ಸೂಚಿಸಿದೆ.
ಪೋಕ್ಸೊ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ, ಪರೋಲ್ ಮೇಲೆ ಬಿಡುಗಡೆಗೊಂಡು ನಿಗದಿತ ಸಮಯದೊಳಗೆ ಮತ್ತೆ ಜೈಲು ಅಧಿಕಾರಿಗಳ ಮುಂದೆ ಶರಣಾಗದ ಹಿನ್ನೆಲೆಯಲ್ಲಿ ಮೂಲ ಶಿಕ್ಷೆಯ ಜತೆಗೆ ಹೆಚ್ಚುವರಿ 2 ವರ್ಷ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಹೇಳಿದ್ದೇನು?
ಪರೋಲ್ ಷರತ್ತುಗಳನ್ನು ಉಲ್ಲಂಘಿಸಿ ನಿಗದಿತ ಸಮಯದಲ್ಲಿ ಶರಣಾಗದ ಆರೋಪದಲ್ಲಿ ಅಪರಾಧಿಯನ್ನು ಅವರನ್ನು ಮತ್ತೆ ವಿಚಾರಣೆಗೊಳಪಡಿಸುವುದಕ್ಕೆ ಅವಕಾಶವಿರಲಿದೆ. ಪರೋಲ್ ನಿಯಮಗಳ ಉಲ್ಲಂಘನೆ ಅಶಿಸ್ತು ಮತ್ತು ಕಾನೂನುಬದ್ಧ ಬಂಧನವನ್ನು ಉಲ್ಲಂಘಿಸುವ ವಿಶಿಷ್ಟ ಅಪರಾಧವಾಗಿದೆ. ಆದ್ದರಿಂದ, ಅಪರಾಧಿಗಳಿಗೆ ವಿಧಿಸಿರುವ ಮೂಲ ಶಿಕ್ಷೆ ಮುಗಿದ ಬಳಿಕ ಪರೋಲ್ ಉಲ್ಲಂಘಿಸಿದ ಆರೋಪದ ಶಿಕ್ಷೆ ಅನುಭವಿಸಬೇಕಾಗುತ್ತದೆ. ಜತೆಗೆ, ಮೂಲ ಶಿಕ್ಷೆ ಮತ್ತು ಪರೋಲ್ ಉಲ್ಲಂಘನೆ ಶಿಕ್ಷೆ ಪ್ರತ್ಯೇಕವಾಗಿರಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಕೈದಿಗಳನ್ನು ಪರೋಲ್ ಮೇಲೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಜೈಲು ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ನೀಡಿರುವ ನ್ಯಾಯಪೀಠ, ಜೈಲು ಅಧಿಕಾರಿಗಳು, ಪರೋಲ್ ಮೇಲೆ ಬಿಡುಗಡೆಯಾಗುವ ಕೈದಿಗಳಿಗೆ ಅರ್ಥವಾಗುವ ಭಾಷೆಯಲ್ಲಿ ಷರುತ್ತುಗಳನ್ನು ವಿವರಿಸಬೇಕು. ಪರೋಲ್ ಮೇಲೆ ಬಿಡುಗಡೆಯಾಗಿ ಮತ್ತೆ ಶರಣಾಗದಿದ್ದಲ್ಲಿ ಎದುರಿಸಬೇಕಾದ ಪರಿಣಾಮಗಳನ್ನು ಅವರಿಗೆ ತಿಳಿಸಬೇಕು. ಆ ಅಂಶಗಳು ಅರ್ಥವಾಗಿದೆ ಎಂಬುದನು ಖಾತ್ರಿಪಡಿಸಿಕೊಳ್ಳಲು ಕೈದಿಗಳಿಂದ ಲಿಖಿತ ಹೇಳಿಕೆ ದಾಖಲಿಸಿಕೊಳ್ಳಬೇಕುಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು?
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿಯ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಬಾಗಲಕೋಟೆ ಜಿಲ್ಲೆಯ ರೇವೂರು ಗ್ರಾಮದ ಮಹಿಳೆ 2022ರ ಮಾರ್ಚ್ 9ರಂದು ಪರೋಲ್ ಮೇಲೆ 1 ತಿಂಗಳ ಅವಧಿಗೆ ಬಿಡುಗಡೆಯಾಗಿದ್ದರು. ಬಳಿಕ ಪರೋಲ್ ಅವಧಿ 30 ದಿನಗಳ ಕಾಲ ವಿಸ್ತರಣೆ ಮಾಡಲಾಗಿತ್ತು. ಅದರಂತೆ, 2022ರ ಜೂನ್ 8ರಂದು ಮಹಿಳೆ ಮತ್ತೆ ವಿಯಪುರದ ಕಾರಾಗೃಹಕ್ಕೆ ಶರಣಾಗಬೇಕಾಗಿತ್ತು. ಆದರೆ, ಆಕೆ ಶರಣಾಗದೆ ಪರೋಲ್ ಷರತ್ತುಗಳನ್ನು ಉಲ್ಲಂಘಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಮ್ಯಾಜಿಸ್ಪ್ರೇಟ್ ನ್ಯಾಯಾಲಯ 2023ರ ಆಗಸ್ಟ್‌ನಲ್ಲಿ ಮಹಿಳೆಗೆ ಹೆಚ್ಚುವರಿ 2 ವರ್ಷಗಳ ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಿತ್ತು. ಆ ಆದೇಶವನ್ನು ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿತ್ತು. ಇದನ್ನು ಮಹಿಳೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
Related Articles
Thank you for your comment. It is awaiting moderation.
Comments (0)