ಹುಬ್ಬಳ್ಳಿಯಲ್ಲಿ ವಲಸೆ ಕಾರ್ಮಿಕನ ಎನ್‌ಕೌಂಟರ್; ವಸ್ತುಸ್ಥಿತಿ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಕಳೆದ ಏಪ್ರಿಲ್‌ನಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಆರೋಪ ಎದುರಿಸುತ್ತಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕನ ಪೊಲೀಸ್ ಎನ್‌ಕೌಂಟರ್‌ಗೆ ಸಂಬಂಧಿಸಿದ ವಸ್ಥುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ವಲಸೆ ಕಾರ್ಮಿಕ ರಿತೇಶ್ ಕುಮಾರ್ ಎನ್‌ಕೌಂಟರ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಬೇಕು ಎಂದು ಕೋರಿ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ (ಪಿಯುಸಿಎಲ್‌) ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲೆ ನಿಲೋಫರ್ ಅಕ್ಬರ್ ಹಾಜರಾಗಿ, ಪ್ರಕರಣದ ಕುರಿತು ಸಿಐಡಿ ವಿಚಾರಣೆ ನಡೆಸುತ್ತಿದೆ. ಅರ್ಜಿಯಲ್ಲಿನ ಮನವಿಗಳನ್ನು ಗಮನಿಸಿದರೆ, ಸದ್ಯ ಅರ್ಜಿ ವಿಚಾರಣೆ ಮುಂದುವರಿಸಲು ಏನೂ ಉಳಿದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಮೃತ ರಿತೇಶ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೇ ಹೊರತು, ಆತನನ್ನು ಎನ್‌ಕೌಂಟರ್ ನಡೆಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ ಎಂದು ತಿಳಿಸಿದರಲ್ಲದೆ, ಅರ್ಜಿ ಸಂಬಂಧ ಹಿರಿಯ ವಕೀಲರು ವಾದ ಮಂಡಿಸಲಿದ್ದು, ವಿಚಾರಣೆ ಮುಂದೂಡಬೇಕೆಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ತನಿಖೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಿತು.

ಅರ್ಜಿದಾರರ ಮನವಿ ಏನು?
• ಎನ್‌ಕೌಂಟರ್‌ಗೆ ಬಲಿಯಾದ ಕಾರ್ಮಿಕ ರಿತೇಶ್ ಕುಮಾರ್ ಹಾಗೂ ಆತನಿಂದ ಅತ್ಯಾಚಾರಕ್ಕೀಡಾಗಿ ಕೊಲೆಯಾಗಿದ್ದಾಳೆನ್ನಲಾದ ಬಾಲಕಿಯ ಮೃತದೇಹಗಳನ್ನು ಸಂರಕ್ಷಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು.

• ಎರಡೂ ಮೃತದೇಹಗಳ ಸ್ವತಂತ್ರ ಪರಿಶೀಲನೆ ನಡೆಸಲು ಕರ್ನಾಟಕ ಹೊರತುಪಡಿಸಿ ಬೇರಾವುದೇ ರಾಜ್ಯದ ವಿಧಿವಿಜ್ಞಾನ ತಜ್ಞರು, ಶವಪರೀಕ್ಷೆ ತಜ್ಞರನ್ನೊಳಗೊಂಡ ವಿಶೇಷ ತಂಡ ರಚಿಸಲು ನಿರ್ದೇಶಿಸಬೇಕು.

• ಪ್ರಕರಣದ ಎಫ್‌ಐಆರ್, ಘಟನೆ ನಡೆದ ದಿನದ ಸಂಬಂಧಪಟ್ಟ ಪೊಲೀಸ್ ಠಾಣೆಯ ಡೈರಿ, ವೈರ್‌ಲೆಸ್ ಕರೆ ದಾಖಲೆಗಳ ವಿವರ, ಎನ್‌ಕೌಂಟರ್‌ನಲ್ಲಿ ಭಾಗಿಯಾದ ಎಲ್ಲ ಪೊಲೀಸ್ ಅಧಿಕಾರಿಗಳು ಬಳಸಿದ ಸರ್ಕಾರಿ ವಾಹನಗಳ ವಿವರ, ಪೊಲೀಸ್ ಅಧಿಕಾರಿಗಳ ಮೊಬೈಲ್ ಫೋನ್‌ಗಳ ಸಿಡಿಆರ್ ಸೇರಿ ಇನ್ನಿತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲು ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಸಮಿತಿ ರಚಿಸಬೇಕು.

• ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶಿಸಬೇಕು. ಎಲ್ಲ ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂಬುದೂ ಸೇರಿ ಇನ್ನಿತರ ಮನವಿಗಳನ್ನು ಅರ್ಜಿದಾರ ಸಂಸ್ಥೆ ಮಾಡಿದೆ.

Related Articles

Comments (0)

Leave a Comment