ಸಿಜೆಐಗೆ ಶೂ ಎಸೆತ ಖಂಡಿಸಿ ಎಎಬಿ ಪ್ರತಿಭಟನೆ; ಕಪ್ಪುಚುಕ್ಕೆ ಎಂದು ವಿವೇಕ್ ರೆಡ್ಡಿ ವಿಷಾದ

ಬೆಂಗಳೂರು: ತೆರೆದ ನ್ಯಾಯಾಲಯದಲ್ಲಿ ಕಲಾಪದ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ವಕೀಲ ರಾಕೇಶ್‌ ಕಿಶೋರ್ ಶೂ ಎಸೆಯಲು ಯತ್ನಿಸಿದ ಕೃತ್ಯವನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘ ಬುಧವಾರ ಹೈಕೋರ್ಟ್‌ನ ‘ಗೋಲ್ಡನ್‌ ಗೇಟ್‌’ ಮುಂಭಾಗ ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ, ನ್ಯಾಯಾಂಗವು ಪ್ರಜಾಪ್ರಭುತ್ವದ ಅಡಿಗಲ್ಲು. ವಕೀಲರೊಬ್ಬರು ಸಿಜೆಐ ಅವರತ್ತ ವಕೀಲರು ತೂರಿರುವ ಕೃತ್ಯವು ಪ್ರಜಾಪ್ರಭುತ್ವದ ಕಂಬಗಳನ್ನು ಅಲ್ಲಾಡಿಸುವ ಅಪಾಯಕಾರಿ ಪ್ರಯತ್ನವಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಯಾರು ಏನೇ ಹೇಳಿದರೂ ಈ ಘಟನೆ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯುತ್ತದೆ ಎಂದು ವಿಷಾದಿಸಿದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ಮಾತನಾಡಿ, ನ್ಯಾಯಾಂಗವನ್ನು ದುರ್ಬಲಗೊಳಿಸಲು ನ್ಯಾಯಾಂಗದ ಮೇಲೆ ಅನೇಕ ಬಾರಿ ಹಲ್ಲೆಗಳು ನಡೆದಿವೆ. ಅಧಿಕಾರಸ್ಥರು ಸ್ವತಂತ್ರ ನ್ಯಾಯಾಂಗದ ಗಟ್ಟಿ ವ್ಯವಸ್ಥೆಯನ್ನು ಯಾವತ್ತೂ ಸಹಿಸುವುದಿಲ್ಲ. ಇಂಥದನ್ನಲ್ಲ ನಾವು ಗಟ್ಟಿಯಾಗಿ ನಿಂತು ಎದುರಿಸಬೇಕು. ಶೂ ಎಸೆದ ವಕೀಲರನ್ನು ಕೂಡಲೇ ಬಂಧಿಸಿ ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಎಎಬಿ ಪ್ರಧಾನ ಕಾರ್ಯದರ್ಶಿ ಎಚ್.ವಿ. ಪ್ರವೀಣ್‌ ಗೌಡ, ಉಪಾಧ್ಯಕ್ಷ ಸಿ.ಎಸ್‌. ಗಿರೀಶ್‌ ಕುಮಾರ್, ಖಜಾಂಚಿ ಶ್ವೇತಾ ರವಿಶಂಕರ್, ಸಂಘದ ಪದಾಧಿಕಾರಿಗಳಾದ ಎಸ್‌.ರಾಜು, ಎಂ.ಚಾಮರಾಜ, ಆತ್ಮ ವಿ. ಹಿರೇಮಠ, ತಮ್ಮಯ್ಯ ಮತ್ತು ಹಿರಿಯ ವಕೀಲ ಡಿ.ಎಲ್‌.ಜಗದೀಶ್‌, ಜಿ.ಆರ್.ಮೋಹನ್‌, ವೆಂಕಟೇಶ ದೊಡ್ಡೇರಿ, ಮುನಿಗಂಗಪ್ಪ, ಕೆ. ಚಂದ್ರಕಾಂತ ಪಾಟೀಲ ಸೇರಿ 40ಕ್ಕೂ ಅಧಿಕ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related Articles

Comments (0)

Leave a Comment