ಬಿಎಸ್‌ವೈ ವಿರುದ್ಧದ ಪೋಕ್ಸೊ ಪ್ರಕರಣ; ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾಗಿದೆ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ‌ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣವು ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾಗಿದೆ ಎಂದು ಹೈಕೋರ್ಟ್‌ ಬುಧವಾರ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಪೋಕ್ಸೊ ಪ್ರಕರಣ ಸಂಬಂಧ ಹೊಸದಾಗಿ ಕಾಗ್ನೈಜೆನ್ಸ್ (ವಿಚಾರಣೆಗೆ ಪರಿಗಣಿಸಿದ) ತೆಗೆದುಕೊಂಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಬಿ.ಎಸ್‌. ಯಡಿಯೂರಪ್ಪ ಎರಡನೇ ಬಾರಿ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆಯ ಒಂದು ಹಂತದಲ್ಲಿ ಯಡಿಯೂರಪ್ಪ ಪರ ವಕಾಲತ್ತು ಹಾಕಿರುವ ವಕೀಲ ಸಂದೀಪ್‌ ಪಾಟೀಲ್‌ ಅವರನ್ನು ಕುರಿತು ನ್ಯಾಯಪೀಠ, ಮೇಲ್ನೋಟಕ್ಕೆ ಇದು ವಿಚಾರಣೆಗೆ ಅರ್ಹವಾದ ಪ್ರಕರಣ. ನಿಮ್ಮ ವಾದ ಆಲಿಸಲಾಗುವುದು. ಅರ್ಜಿದಾರರಿಗೆ ಇಷ್ಟು ವಯಸ್ಸಾಗಿದೆ. ಅನಗತ್ಯವಾಗಿ ಸಮನ್‌ ಮಾಡಬಾರದು ಎಂದು ಕೇಳಿದರೆ ಏನಾದರೂ ಮಾಡಬಹುದು. ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿದ್ದಾರೆ. ಅನಗತ್ಯವಾಗಿ ಕಿರುಕುಳ ನೀಡುವ ಸಾಧ್ಯತೆ ಇದೆ. ಕಿರುಕುಳ ತಪ್ಪಿಸಿ, ನ್ಯಾಯಯುತ ವಿಚಾರಣೆಗೆ ಸಂಬಂಧಿಸಿದಂತೆ ರಕ್ಷಣೆಗೆ ಮನವಿ ಮಾಡಬಹುದು. ಅಂಥ ಅಂಶವನ್ನು ಉಲ್ಲೇಖಿಸಿ, ಮೆರಿಟ್‌ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿತು.

ಈ ಹಿಂದೆ ಸಲ್ಲಿಕೆ ಮಾಡಿದ್ದ ಅರ್ಜಿಯಲ್ಲಿ ನ್ಯಾಯಾಲಯ ಉಲ್ಲೇಖಿಸಿರುವ ವಿಚಾರಗಳ ಬಗ್ಗೆ ನಿಮ್ಮ ಆತಂಕ ಇರಬಹುದು. ನಿಮ್ಮ ಹಿರಿಯ ವಕೀಲರನ್ನು ಕೇಳಿ. ಇದು ಪೂರ್ಣಪ್ರಮಾಣದ ವಿಚಾರಣೆಗೆ ಅರ್ಹವಾದ ಪ್ರಕರಣ. ಆರೋಪವೇ ಇಲ್ಲ ಎನ್ನುವಂಥ ಪ್ರಕರಣ ಇದಲ್ಲ. ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯೊಂದೇ ಆರೋಪಿಗೆ ಶಿಕ್ಷೆ ವಿಧಿಸಲು ಕೆಲವೊಮ್ಮ ಸಾಕಾಗುತ್ತದೆ. ಸಂತ್ರಸ್ತೆಯ ಹೇಳಿಕೆಯನ್ನು ಪರಿಶೀಲನೆಗೆ ಒಳಪಡಿಸಬೇಕಿದೆ. ಸಂತ್ರಸ್ತೆ ಮತ್ತವರ ತಾಯಿಯ ಬಗ್ಗೆ ನಿಮ್ಮ ಯಾವುದೇ ವಾದವಿದ್ದರೂ, ಇವೆಲ್ಲವೂ ಈ ಪ್ರಕರಣವನ್ನು ವಿಚಾರಣೆಗೆ ಅರ್ಹವಾದ ಪ್ರಕರಣವನ್ನಾಗಿಸಿವೆ. ಇದಕ್ಕೆ ಕನಿಷ್ಠ ಐದು ದಿನಗಳ ಮಧ್ಯಾಹ್ನದ ಸಂಪೂರ್ಣ ಕಲಾಪ ಬೇಕಾಗುತ್ತದೆ ಎಂದು ನುಡಿಯಿತು.

ಪ್ರಾಯೋಗಿಕವಾಗಿ ಮಾತನಾಡುವುದರಾದರೆ, ನಿಮ್ಮ ಆತಂಕಗಳೇನು, ಎಲ್ಲಿ ನಿಮಗೆ ಕಿರುಕುಳ ನೀಡಬಹುದು, ಪ್ರಕ್ರಿಯೆ ಕಿರುಕುಳಕ್ಕೆ ಸಂಬಂಧಿಸಿದಂತೆ ನಿಮಗೆ ಯಾವ ರೀತಿಯ ಅಬ್ಸರ್ವೇಶನ್‌ ಬೇಕು. ಅದಕ್ಕೆ ಸಲಹೆ ನೀಡಿದರೆ ಅದನ್ನು ತೀರ್ಪಿನಲ್ಲಿ ಸೇರಿಸಬಹುದು. ಆಗ ಅರ್ಧ ಗಂಟೆಯಲ್ಲೇ ಪ್ರಕರಣ ಮುಗಿಯುತ್ತದೆ. ನಾವು ವಾದಿಸುತ್ತೇವೆ ಎಂದರೆ ಅದನ್ನು ಕೇಳಬೇಕಾಗುತ್ತದೆ. ಮುಕ್ತ ಮನಸ್ಸಿನಿಂದ ಇದನ್ನು ಹೇಳುತ್ತಿದ್ದೇನೆ. ಪ್ರಕರಣ ರದ್ದತಿ ಆಗಿಯೇ ಆಗುತ್ತದೆ ಎಂಬ ಸ್ಪಷ್ಟತೆ ನಿಮಗೆ ಇದ್ದರೆ, ವಾದ ಮುಂದುವರಿಸಬಹುದು. ಕಡತವನ್ನು ನೋಡಿ ನಾನು ಹೇಳುತ್ತಿರುವುದು. ಇದು ನನ್ನ ಪ್ರಾಮಾಣಿಕ ಅಭಿಪ್ರಾಯವಾಗಿದೆ. ಅನಗತ್ಯವಾಗಿ ಎಲ್ಲರ ಸಮಯ ವ್ಯರ್ಥವಾಗುವುದು ಬೇಡ ಎಂದು ನ್ಯಾಯಮೂರ್ತಿಗಳು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಸಂದೀಪ್ ಪಾಟೀಲ್‌, ನ್ಯಾಯಾಲಯದ ಅಭಿಪ್ರಾಯ ಏನಿದೆ ಎಂಬುದು ನಮಗೆ ಅರ್ಥವಾಗುತ್ತದೆ. ಈ ಕುರಿತು ಚರ್ಚಿಸಿ, ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಶಿವಾನಂದ ತಗಡೂರು ಹೇಳಿಕೆಯ ಮೆಮೊ ಸಲ್ಲಿಕೆ:
ಇದಕ್ಕೂ ಮುನ್ನ, ಬೆಳಗಿನ ಅವಧಿಯಲ್ಲಿ ವಾದ ಮಂಡಿಸಿದ್ದ ಯಡಿಯೂರಪ್ಪ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ನೀಡಿರುವ ಹೇಳಿಕೆಗಳನ್ನು ಆರೋಪ ಪಟ್ಟಿಯಲ್ಲಿ ಕೈಬಿಡಲಾಗಿದೆ. ಇದನ್ನು ನ್ಯಾಯಾಲಯ ತರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದರು.

ಭೋಜನ ವಿರಾಮದ ಬಳಿಕ ಪ್ರಕರಣವನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಂಡಾಗ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 161ರ ಅಡಿಯಲ್ಲಿ ತನಿಖಾಧಿಕಾರಿ ದಾಖಲಿಸಿಕೊಂಡಿರುವ ಶಿವಾನಂದ ತಗಡೂರು ಅವರು 2024ರ ಏಪ್ರಿಲ್ 6 ಹಾಗೂ ಏಪ್ರಿಲ್ 29ರಂದು ನೀಡಿದ್ದ ಹೇಳಿಕೆಗಳನ್ನು ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು ಮೆಮೊದೊಂದಿಗೆ ಸಲ್ಲಿಸಿದರು. ಇದನ್ನು ನ್ಯಾಯಾಲಯ ದಾಖಲೆಯಲ್ಲಿ ಸ್ವೀಕರಿಸಿತು.

Related Articles

Comments (0)

Leave a Comment