ಮುನಿರತ್ನ ವಿರುದ್ಧದ ಸಾಮೂಹಿಕ ಅತ್ಯಾಚಾರ ಪ್ರಕರಣ: ಬಿ ರಿಪೋರ್ಟ್ ಸಲ್ಲಿಕೆ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್
- by LegalSamachar
 - September 17, 2025
 - 111 Views
 
                            ಬೆಂಗಳೂರು: ಶಾಸಕ ಮುನಿರತ್ನ ಮತ್ತಿತರರ ವಿರುದ್ಧದ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣಾ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಿರುವುದನ್ನು ಪರಿಗಣಿಸಿದ ಹೈಕೋರ್ಟ್, ಪ್ರಕರಣ ರದ್ದು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.
ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಆರೋಪಿಗಳಾದ ಮುನಿರತ್ನ, ವಸಂತ ಕುಮಾರ್, ಸಿ. ಚನ್ನಕೇಶವ ಹಾಗೂ ಕಮಲ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಎಸ್‌ಐಟಿ ಪರವಾಗಿ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರದೀಪ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯು ವಿಚಾರಣಾ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಕೀಲರು, ಬಿ ವರದಿಯನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಿರುವ ಬಗ್ಗೆ ಮಾಹಿತಿ ಇಲ್ಲ. ವಿಶೇಷ ಸರ್ಕಾರಿ ಅಭಿಯೋಜಕರ ಹೇಳಿಕೆಯ ಆಧರಿಸಿ, ಅರ್ಜಿ ವಜಾಗೊಳಿಸಬಹುದು ಎಂದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯಕ್ಕೆ ಎಸ್‌ಐಟಿ ಬಿ ರಿಪೋರ್ಟ್ ಸಲ್ಲಿಸಿದ್ದು, ನ್ಯಾಯಾಲಯ ಅದನ್ನು ಅಂಗೀಕರಿಸಿದೆ. ಇದರಿಂದಾಗಿ, ಅರ್ಜಿಗಳು ಅಸ್ತಿತ್ವ ಕಳೆದುಕೊಂಡಿದ್ದು, ಅವುಗಳನ್ನು ವಜಾ ಮಾಡಲಾಗಿದೆ ಎಂದು ಆದೇಶಿಸಿತು.
ಪ್ರಕರಣವೇನು?
ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ತೆರಳಿ ಬಿಜೆಪಿ ಶಾಸಕ ಮುನಿರತ್ನ ಮತ್ತಿತರರ ವಿರುದ್ಧ ದೂರು ನೀಡಿದ್ದ 40 ವರ್ಷದ ಮಹಿಳೆಯೊಬ್ಬರು, 2023ರ ಜೂನ್ 11ರಂದು ತಮ್ಮನ್ನು ವಿವಸ್ತ್ರಗೊಳಿಸಿ, ಸಹಚರರಿಂದ ಅತ್ಯಾಚಾರ ಮಾಡಿಸಿದ್ದಲ್ಲದೆ, ವೈರಸ್ ತಗುಲುವ ಚುಚ್ಚುಮದ್ದು ನೀಡಲಾಗಿದೆ ಎಂದು ಆರೋಪಿಸಿದ್ದರು.
ಈ ಮಧ್ಯೆ, ಮುನಿರತ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಮುನಿರತ್ನ ವಿರುದ್ಧ ಕಗ್ಗಲಿಪುರ ಠಾಣೆಯಲ್ಲಿ ದಾಖಲಾಗಿದ್ದ ಆತ್ಯಾಚಾರ ಪ್ರಕರಣ, ವೈಯಾಲಿಕಾವಲ್ ಠಾಣೆಯಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣಗಳು ಎಸ್‌ಐಟಿಗೆ ವರ್ಗವಾಗಿದ್ದವು. ಆನಂತರ, ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನೂ ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿತ್ತು. ಪ್ರಕರಣದ ಸಂಬಂಧ ಎಸ್‌ಐಟಿ ತನಿಖೆ ನಡೆಸಿತ್ತು.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)