ಮಾಲೂರು ಶಾಸಕ ಕೆ.ವೈ. ನಂಜೇಗೌಡ ಆಯ್ಕೆ ಅಸಿಂಧು: 4 ವಾರದಲ್ಲಿ ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ
- by Jagan Ramesh
- September 16, 2025
- 58 Views

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವೈ. ನಂಜೇಗೌಡ ಅವರು ಶಾಸಕರಾಗಿ ಆಯ್ಕೆಯಾಗಿರುವುದನ್ನು ರದ್ದುಪಡಿಸಿರುವ ಹೈಕೋರ್ಟ್, ನಾಲ್ಕು ವಾರಗಳಲ್ಲಿ ಹೊಸದಾಗಿ ಮತ ಎಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.
ಆದರೆ, ಆದೇಶ ಪ್ರಕಟಿಸಿದ ಬೆನ್ನಲ್ಲೇ ಕೆ.ವೈ. ನಂಜೇಗೌಡ ಪರ ವಕೀಲರ ಮನವಿ ಮೇರೆಗೆ ಸುಪ್ರಿಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ತನ್ನ ಆದೇಶಕ್ಕೆ 30 ದಿನಗಳವರೆಗೆ ತಡೆಯಾಜ್ಞೆ ನೀಡಿದೆ. ಇದರಿಂದ, ಹೈಕೋರ್ಟ್ ಆದೇಶದಂತೆ ಕೆ.ವೈ. ನಂಜೇಗೌಡ ಅವರ ಆಯ್ಕೆ ಅಸಿಂಧುವಾದರೂ, 30 ದಿನಗಳ ಕಾಲ ಅವರು ಶಾಸಕರಾಗಿಯೇ ಮುಂದುವರಿಯಬಹುದಾಗಿದೆ. ಒಂದು ವೇಳೆ, ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದರೂ, ಅವರ ಶಾಸಕ ಸ್ಥಾನ ಸದ್ಯಕ್ಕೆ ಅಬಾಧಿತವಾಗಿರಲಿದೆ.
ಮಾಲೂರು ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು, ತಮ್ಮನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕು ಹಾಗೂ ಮತಗಳ ಮರು ಎಣಿಕೆಗೆ ಆದೇಶಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಮಾಲೂರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ ಅವರು ಆಯ್ಕೆಯಾಗಿರುವುದಾಗಿ 2023ರ ಮೇ 13ರಂದು ಪ್ರಕಟಿಸಲಾಗಿದ್ದ ಚುನಾವಣಾ ಫಲಿತಾಂಶವನ್ನು ರದ್ದುಪಡಿಸಿರುವ ಹೈಕೋರ್ಟ್, ನಾಲ್ಕು ವಾರದಲ್ಲಿ ಮರು ಮತ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು. ಫಲಿತಾಂಶದ ನಂತರದ ಎಲ್ಲ ಪ್ರಕ್ರಿಯೆಗಳನ್ನು ಕಾನೂನು ಪ್ರಕಾರ ಪಾಲಿಸಬೇಕು. ಮತ ಎಣಿಕೆಯ ವಿಡಿಯೊ ರೆಕಾರ್ಡಿಂಗ್ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸದೆ ಕರ್ತವ್ಯ ಲೋಪ ಎಸಗಿರುವ ಅಂದಿನ ಚುನಾವಣಾಧಿಕಾರಿಯ (ಜಿಲ್ಲಾಧಿಕಾರಿ) ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.
30 ದಿನಗಳ ವರೆಗೆ ಆದೇಶಕ್ಕೆ ತಡೆ:
ತೀರ್ಪು ಪ್ರಕಟಿಸಿದ ಬಳಿಕ ಕೆ.ವೈ.ನಂಜೇಗೌಡ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಅವರು, ನ್ಯಾಯಾಲಯವು ಮಾಲೂರು ವಿಧಾನಸಭಾ ಕ್ಷೇತ್ರದ ಫಲಿತಾಂಶವನ್ನು ರದ್ದುಪಡಿಸಿದೆ. ಆದರೆ, ಈ ಆದೇಶ ಪ್ರಶ್ನಿಸಿ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಆದ್ದರಿಂದ, 30 ದಿನಗಳ ಅವಧಿಗೆ ಈ ತೀರ್ಪಿಗೆ ತಡೆಯಾಜ್ಞೆ ನೀಡಬೇಕು. ಚುನಾವಣಾ ಫಲಿತಾಂಶ ರದ್ದುಪಡಿಸಿದ ಸಂದರ್ಭದಲ್ಲಿ ಆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ 30 ದಿನಗಳ ಕಾಲ ತೀರ್ಪಿನ ಜಾರಿಗೆ ತಡೆಯಾಜ್ಞೆ ನೀಡಲು ಕಾನೂನಿನಲ್ಲಿಯೇ ಅವಕಾಶವಿದೆ. ಆದ್ದರಿಂದ, ಈ ನಮ್ಮ ಮನವಿ ಪುರಸ್ಕರಿಸಬೇಕು ಎಂದು ಕೋರಿದರು.
ಅರ್ಜಿದಾರ ಮಂಜುನಾಥ್ ಪರ ಹಿರಿಯ ವಕೀಲ ಜಯಕುಮಾರ್ ಪಾಟೀಲ್, ನ್ಯಾಯಾಲಯ ಈಗಾಗಲೇ ಫಲಿತಾಂಶ ಪ್ರಕಟಿಸಿದೆ. ತೀರ್ಪಿನಂತೆ ಮತಗಳ ಮರು ಎಣಿಕೆ ಕಾರ್ಯ ನಡೆಸಲು ಅನುಮತಿ ನೀಡಬೇಕು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೆ.ವೈ. ನಂಜೇಗೌಡ ಅವರು ಹಾಲಿ ಶಾಸಕರಾಗಿದ್ದಾರೆ. ಅವರು ಸುಪ್ರಿಂಕೋರ್ಟ್ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ತೀರ್ಪಿನ ಜಾರಿಗೆ 30 ದಿನಗಳ ಕಾಲ ತಡೆಯಾಜ್ಞೆ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಅದರಂತೆ, ಇಂದಿನ ತೀರ್ಪಿಗೆ 30 ದಿನಗಳ ಕಾಲ ತಡೆಯಾಜ್ಞೆ ನೀಡುವುದು ಸೂಕ್ತ ಎಂದು ಆದೇಶಿಸಿತು.
ಹೈಕೋರ್ಟ್ ಆದೇಶದಲ್ಲೇನಿದೆ?
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ 15 ಸ್ಪರ್ಧಿಗಳ ಏಜೆಂಟರುಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಮತಗಳ ಎಣಿಕೆ ಒಂದೇ ಕೊಠಡಿಯಲ್ಲಿ ನಡೆಯಬೇಕಿತ್ತು. ಆದರೆ, ಎರಡು ಪ್ರತ್ಯೇಕ ಕೊಠಡಿಗಳಲ್ಲಿ ನಡೆದಿದೆ. ಮತ ಎಣಿಕೆ ಏಜೆಂಟರುಗಳ ಸಹಿಗಳು ಸಹ ಅಪರಿಚತ ವ್ಯಕ್ತಿಗಳಾಗಿದ್ದಾಗಿದೆ. ಇನ್ನು ಮತಗಳನ್ನು ಮರು ಎಣಿಕೆ ಮಾಡಲು ಆದೇಶಿಸಬೇಕು ಎಂದು ತಾವು ಕೋರಿದ ಅರ್ಜಿ ಕುರಿತು ಚುನಾವಣಾಧಿಕಾರಿ ಯಾವುದೇ ಆದೇಶ ಮಾಡಿಲ್ಲ. ಮತ ಎಣಿಕೆಯ ವಿಡಿಯೋಗಳು ಕಾಣೆಯಾಗಿದೆ. ಇದರಿಂದ ಚುನಾವಣೆ ಫಲಿತಾಂಶ ರದ್ದುಪಡಿಸಬೇಕು ಎಂದು ಅರ್ಜಿದಾರ ಮಂಜುನಾಥ್ ಕೋರಿದ್ದರು.
ಈ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ, ಮತ ಎಣಿಕೆ ಪ್ರಕ್ರಿಯೆಯಲ್ಲಿನ ವ್ಯತ್ಯಾಸಗಳ ಬಗ್ಗೆ ಅರ್ಜಿದಾರರು ಸಾಕಷ್ಟು ವಿವರಗಳನ್ನು ನೀಡಿದ್ದಾರೆ. ವಿವಿಧ ಫಾರ್ಮ್-17C ಭಾಗ -2 ದಾಖಲೆಗಳಲ್ಲಿ ಅರ್ಜಿದಾರರ ಎಣಿಕೆ ಏಜೆಂಟ್‌ಗಳ ಸಹಿಗಳು ಕಂಡುಬಂದಿಲ್ಲ. ಕೆಲವು ದಾಖಲೆಗಳಲ್ಲಿ, ಅರ್ಜಿದಾರರ ಎಣಿಕೆ ಏಜೆಂಟ್ ಅಲ್ಲದವರ ಸಹಿಗಳಿವೆ ಎಂದು ಆದೇಶದಲ್ಲಿ ತಿಳಿಸಿದೆ.
ಮರು ಎಣಿಕೆಗೆ ಕೋರಿದ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಹೊರಡಿಸಿದ ಆದೇಶದ ಪ್ರತಿ ಚುನಾವಣಾಧಿಕಾರಿ ಬಳಿ ಲಭ್ಯವಿಲ್ಲ. ಕೋರ್ಟ್‌ಗೆ ಹಾಜರುಪಡಿಸಿದ ಸ್ಟ್ರಾಂಗ್ ರೂಮಿನ ದಾಖಲೆಗಳೊಂದಿಗೆ ಅದು ಕಂಡುಬಂದಿಲ್ಲ. ಇದರಿಂದ, ಮತ ಎಣಿಕೆಯ ದಿನದಂದು ಚುನಾವಣಾಧಿಕಾರಿ ಮತಗಳ ಮರು ಎಣಿಕೆಗೆ ಆದೇಶ ಹೊರಡಿಸದೇ ಇರಬಹುದು ಎಂಬ ಸಂಶಯ ಕಾಡುತ್ತಿದೆ. ಮರು ಎಣಿಕೆ ಅರ್ಜಿಯ ಕುರಿತು ಚುನಾವಣಾಧಿಕಾರಿ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂಬುದು ನಿಜವೆಂದು ಕಂಡುಬಂದರೆ, ಚುನಾವಣಾಧಿಕಾರಿಯು ಕಾನೂನಿನ ನಿಬಂಧನೆ ಉಲ್ಲಂಘಿಸಿದ್ದಾರೆ ಎನ್ನಬಹುದು. ಅರ್ಜಿದಾರರು ಮರು ಎಣಿಕೆಗೆ ಅರ್ಜಿ ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಮತಗಳ ಮರು ಎಣಿಕೆಗೆ ಆದೇಶಿಸಿದೆ.
Related Articles
Thank you for your comment. It is awaiting moderation.
Comments (1)
[…] ಮಾಲೂರು ಶಾಸಕ ಕೆ.ವೈ. ನಂಜೇಗೌಡ ಆಯ್ಕೆ ಅಸಿಂಧ… […]
Reply