ರಾಜ್ಯದಲ್ಲಿ ಚಲನಚಿತ್ರಗಳಿಗೆ ಏಕರೂಪ ದರ ನಿಗದಿ ಪ್ರಶ್ನಿಸಿದ ಅರ್ಜಿ; ಮಧ್ಯಂತರ ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಬೆಂಗಳೂರು: ಮಲ್ಟಿಪ್ಲೆಕ್ಸ್‌ಗಳೂ ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂ. ಏಕರೂಪ ದರ ನಿಗದಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಬೇಕೆಂಬ ಮಧ್ಯಂತರ ಮನವಿ ಕುರಿತ ತೀರ್ಪನ್ನು ಹೈಕೋರ್ಟ್ ಸೆಪ್ಟೆಂಬರ್ 23ಕ್ಕೆ ಕಾಯ್ದಿರಿಸಿದೆ.

ಸೆಪ್ಟೆಂಬರ್ 12ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025’ ಅನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್ಟೈನ್ಮೆಂಟ್ ಹಾಗೂ ವಿ.ಕೆ. ಫಿಲ್ಮ್ಸ್ ಸಲ್ಲಿಸಿರುವ ಪ್ರತ್ಯೇಕ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ರಿಟ್ ಅರ್ಜಿ ಇತ್ಯರ್ಥವಾಗುವವರೆಗೆ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂಬ ಮಧ್ಯಂತರ ಮನವಿಗೆ ಸಂಬಂಧಿಸಿದಂತೆ ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮಧ್ಯಂತರ ತೀರ್ಪನ್ನು ಸೆಪ್ಟೆಂಬರ್ 23ಕ್ಕೆ ಕಾಯ್ದಿರಿಸಿತು.

ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಪರ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ವಾದ ಮಂಡಿಸಿ, ಸಿನಿಮಾ ವೀಕ್ಷಕರು ಮತ್ತು ಸಿನಿಮಾ ಪ್ರದರ್ಶಕರ ಆಯ್ಕೆಯ ಹಕ್ಕಿನ ವಿಚಾರ ಇಲ್ಲಿದೆ. 2017ರಲ್ಲಿ ರಾಜ್ಯ ಸರ್ಕಾರ ಇಂಥದ್ದೇ ಆದೇಶ ಮಾಡಿ, ಆದೇಶ ಹಿಂಪಡೆದಿತ್ತು. ಈಗ ನಿಯಮಗಳಿಗೆ ತಿದ್ದುಪಡಿ ಮಾಡಿ ಸಿನಿಮಾ ದರ ನಿಗದಿಪಡಿಸಲಾಗಿದ್ದು, ಇತಿಹಾಸ ಮರುಕಳಿಸಿದೆ. ಸಿನಿಮಾ ಹಾಲ್‌ಗಳನ್ನು ನಿರ್ಮಿಸಲು ಕೋಟ್ಯಂತರ ರೂ. ವೆಚ್ಚ ಮಾಡಲಾಗಿದೆ. ಇಲ್ಲಿ 200 ರೂ. ಅಥವಾ ಇಂತಿಷ್ಟೇ ದರಕ್ಕೆ ಟಿಕೆಟ್‌ ಮಾರಾಟ ಮಾಡಬೇಕು ಎಂದು ಸರ್ಕಾರ ಹೇಳಲಾಗದು. ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು-2025 ಅಡಿ ದರ ನಿಗದಿಯು ಕಾನೂನುಬಾಹಿರ ಕ್ರಮವಾಗಿದೆ ಎಂದರು.

ಹೊಂಬಾಳೆ ಫಿಲ್ಮ್ಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ಅರ್ಜಿದಾರರು ಕಾಂತಾರದಂತಹ ಚಲನಚಿತ್ರ ನಿರ್ಮಿಸಿದ್ದಾರೆ. ಜಿಎಸ್‌ಟಿ ಹೊರತುಪಡಿಸಿ ಟಿಕೆಟ್‌ ದರ 200 ರೂ. ನಿಗದಿಪಡಿಸಲಾಗಿದೆ. ಇದು ವಿವೇಚನೆಯಿಲ್ಲದೇ ಸರ್ಕಾರ ಕೈಗೊಂಡ ನಿರ್ಧಾರವಾಗಿದೆ. ಸಿನಿಮಾ ನಿರ್ಮಿಸಲು ಎಷ್ಟೆಲ್ಲ ಶ್ರಮ, ಬಂಡವಾಳ ಬೇಕಾಗುತ್ತದೆ. ಅಂಕಿ ಅಂಶ ಸಂಗ್ರಹಿಸದೇ ಸರ್ಕಾರದ ಸ್ವೇಚ್ಚೆಯ ನಿರ್ಧಾರ ಕೈಗೊಂಡಿದೆ. ಆದ್ದರಿಂದ, ಟಿಕೆಟ್‌ ದರ ಮಿತಿ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.

ಇತರ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಉದಯ್‌ ಹೊಳ್ಳ ಹಾಗೂ ಡಿ.ಆರ್. ರವಿಶಂಕರ್ ಅವರು, 2017ರಲ್ಲೂ ಸರ್ಕಾರ 200 ರೂ. ದರ ನಿಗದಿಪಡಿಸಿತ್ತು, ಬಳಕ ಆದೇಶ ಹಿಂಪಡೆದಿತ್ತು. ಇದೀಗ 8 ವರ್ಷಗಳ ಬಳಿಕವೂ ಮತ್ತೆ 200 ರೂ. ದರ ನಿಗದಿ ಪಡಿಸಿದೆ. ಯಾವುದೇ ದತ್ತಾಂಶ ಮತ್ತು ಕಾನೂನಿನ ನೆರವು ಇಲ್ಲದೇ ಸರ್ಕಾರ ಟಿಕೆಟ್‌ ದರ ಮಿತಿ ಹೇರಿದೆ. ಇದು ಸ್ವೇಚ್ಛೆಯ ಕ್ರಮವಾಗಿದ್ದು, ಅರ್ಜಿದಾರರ ಹಕ್ಕನ್ನು ಕಸಿಯಲಾಗಿದೆ ಎಂದು ಆಕ್ಷೇಪಿಸಿದರು.

ಕ್ರಮ ಸಮರ್ಥಿಸಿಕೊಂಡ ಸರ್ಕಾರ:
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಇಸ್ಮಾಯಿಲ್‌ ಜಬೀವುಲ್ಲಾ, ಸಾರ್ವಜನಿಕರ ಹಿತದೃಷ್ಟಿಯಿಂದ ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಇದನ್ನು ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ದರ ನಿಗದಿ ಕುರಿತ ಕರಡು ಅಧಿಸೂಚನೆಗೆ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಅರ್ಜಿದಾರರಲ್ಲಿ ಕೆಲವರು ಸಹ ಆಕ್ಷೇಪಣೆ ಸಲ್ಲಿಸಿದ್ದರು. ಎಲ್ಲ ಆಕ್ಷೇಪಣೆಗಳನ್ನು ಪರಿಗಣಿಸಿ ತೀರ್ಮಾನಿಸಲಾಗಿದೆ. ಟಿಕೆಟ್ ದರ ನಿಯಂತ್ರಣಕ್ಕೆ ಸರ್ಕಾರಕ್ಕೆ ಅವಕಾಶವಿದೆ ಎಂದು ಸಮಜಾಯಿಷಿ ನೀಡಿದರು.

ವಾಣಿಜ್ಯ ಮಂಡಳಿಯಿಂದ ಮಧ್ಯಂತರ ಅರ್ಜಿ:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ಹಾಜರಾದ ಹಿರಿಯ ವಕೀಲ ವಿ. ಲಕ್ಷ್ಮೀನಾರಾಯಣ ಅವರು, ಸರ್ಕಾರದ ತೀರ್ಮಾನವನ್ನು ಬೆಂಬಲಿಸಿ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅದನ್ನು ವಿಚಾರಣೆಗೆ ಪರಿಗಣಿಸಿ ಮಂಡಳಿಯ ವಾದವನ್ನೂ ಸಹ ಆಲಿಸಬೇಕು. ಮಂಡಳಿಯ ಮನವಿ ಮೇರೆ ಸರ್ಕಾರ ದರ ನಿಗದಿ ನಿರ್ಧಾರ ಕೈಗೊಂಡಿದೆ ಎಂದರು. ಆದರೆ, ವಾಣಿಜ್ಯ ಮಂಡಳಿಯ ಮಧ್ಯಂತರ ಅರ್ಜಿಗೆ ಅರ್ಜಿದಾರರ ಪರ ವಕೀಲರು ಆಕ್ಷೇಪ ಎತ್ತಿದರು.

ಅರ್ಜಿದಾರರ ಮನವಿ ಏನು?
‘ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025’ ವ್ಯಾಪ್ತಿ ಮೀರಿದ್ದು, ಇದರಿಂದ ಸಂವಿಧಾನ ಖಾತ್ರಿಪಡಿಸುವ ಮೂಲಭೂತ ಮತ್ತು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಲಿದೆ. ನಿಯಮಗಳು ಜಾರಿಗೆ ಬಂದಲ್ಲಿ ಮಲ್ಟಿಪ್ಲೆಕ್ಸ್‌ಗಳ ವಹಿವಾಟಿನ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಸರ್ಕಾರಕ್ಕೂ ಭಾರಿ ನಷ್ಟ ಉಂಟಾಗಲಿದೆ. ಆದ್ದರಿಂದ, ತಿದ್ದುಪಡಿ ನಿಯಮಗಳನ್ನು ರದ್ದುಪಡಿಸಬೇಕು ಎಂದು ಕೋರಿರುವ ಅರ್ಜಿದಾರರು, ಅರ್ಜಿ ಇತ್ಯರ್ಥವಾಗುವವರೆಗೆ ತಿದ್ದುಪಡಿ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

Related Articles

Comments (0)

Leave a Comment