ಅಕ್ರಮ ಬೆಟ್ಟಿಂಗ್ ಪ್ರಕರಣ; ವಕೀಲ ಅನಿಲ್ ಗೌಡ ವಿರುದ್ಧದ ಇಡಿ ಸಮನ್ಸ್‌ಗೆ ಹೈಕೋರ್ಟ್ ತಡೆ
- by Jagan Ramesh
- September 16, 2025
- 54 Views

ಬೆಂಗಳೂರು: ಆನ್‌ಲೈನ್ ಮತ್ತು ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವಿರೇಂದ್ರ ಅವರ ಸ್ನೇಹಿತ ವಕೀಲ ಅನಿಲ್ ಗೌಡ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ಸಮನ್ಸ್‌ಗೆ ಮಂಗಳವಾರ ಮಧ್ಯಂತರ ತಡೆ ನೀಡಿರುವ ಹೈಕೋರ್ಟ್, ಅನಿಲ್ ಗೌಡ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿದೆ.
ಇಡಿ ಜಾರಿಗೊಳಿಸಿದ್ದ ಸಮನ್ಸ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ವಕೀಲ ಅನಿಲ್ ಗೌಡ, ಅರ್ಜಿ ಇತ್ಯರ್ಥವಾಗುವವರೆಗೆ ಸಮನ್ಸ್ ಹಾಗೂ ಪ್ರಕರಣದ ತನಿಖೆಗೆ ತಡೆ ನೀಡಬೇಕು. ಜತೆಗೆ, ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಇಡಿಗೆ ನಿರ್ದೇಶಿಸಬೇಕೆಂದು ಮಧ್ಯಂತರ ಮನವಿ ಮಾಡಿದ್ದರು. ಈ ಮಧ್ಯಂತರ ಮನವಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ಹೈಕೋರ್ಟ್ ಹೇಳಿದ್ದೇನು?
ವಕೀಲರಿಗೆ ಸಮನ್ಸ್ ನೀಡುವ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅನಿಲ್ ಗೌಡ ಅವರು ಮಧ್ಯಂತರ ರಕ್ಷಣೆಗೆ ಅರ್ಹರಾಗಿದ್ದು, 2025ರ ಆಗಸ್ಟ್ 24ರಂದು ಅನಿಲ್ ಗೌಡ ಅವರಿಗೆ ಇಡಿ ಜಾರಿ ಮಾಡಿರುವ ಸಮನ್ಸ್‌ಗೆ ತಡೆ ನೀಡಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ವಿಚಾರ ನಿರ್ಧಾರವಾಗುವವರೆಗೆ ಜಾರಿ ನಿರ್ದೇಶನಾಲಯವು ಅನಿಲ್ ಗೌಡ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯ ಸೆಕ್ಷನ್ 50 ಅನ್ನು ಅನ್ವಯಿಸುವುದು ಮತ್ತು ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳುವುದರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ವಾದ-ಪ್ರತಿವಾದ:
ಅನಿಲ್ ಗೌಡ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ವಿಕಾಸ್ ಪಹ್ವಾ, ಅರ್ಜಿದಾರರು ವೃತ್ತಿಯಲ್ಲಿ ವಕೀಲರಾಗಿದ್ದು, ಕೆ.ಸಿ. ವೀರೇಂದ್ರ ಅವರಿಗೆ ಕಾನೂನು ಸಲಹೆಗಾರರಾಗಿದ್ದಾರೆ. ವೀರೇಂದ್ರ ಅವರ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆಯೇ ಹೊರತು ಕಂಪನಿಯ ದೈನಂದಿನ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ಇಡಿ ಅಧಿಕಾರ ವ್ಯಾಪ್ತಿ ಮೀರಿ, ರಾಜಕೀಯಪ್ರೇರಿತ ಮತ್ತು ದುರುದ್ದೇಶದಿಂದ ಅನಿಲ್ ಗೌಡಗೆ ಸಮನ್ಸ್ ಜಾರಿ ಮಾಡಿ ದಾಖಲೆಗಳನ್ನು ಕೇಳಿದೆ. ಇಡಿ ಅಧಿಕಾರಿಯ ವ್ಯಾಪ್ತಿಯು ಸುಪ್ರೀಂಕೋರ್ಟ್ ಪರಿಶೀಲನೆಯಲ್ಲಿದೆ. ವೀರೇಂದ್ರ ಅವರಿಗೆ ಅರ್ಜಿದಾರರು ವಕೀಲನಾಗಿ ಸಲಹೆ ನೀಡಿರುವುದರಿಂದ ಅವರನ್ನು ವಿಚಾರಣೆಗೊಳಪಡಿಸದಂತೆ ಇಡಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದರು.
ಇಡಿ ಪರ ವಕೀಲರು, ಕ್ಯಾಸಲ್ ರಾಕ್ ಸಂಸ್ಥೆಯಲ್ಲಿ ವೀರೇಂದ್ರ ಪಪ್ಪಿ ಅವರು ಶೇ. 35 ಷೇರು, ಅನಿಲ್ ಗೌಡ ಶೇ. 15 ಷೇರು ಹೊಂದಿದ್ದಾರೆ. ಅನಿಲ್ ಗೌಡರಿಂದ ಜಪ್ತಿ ಮಾಡಿರುವ ಲ್ಯಾಪ್‌ಟಪ್‌ನಲ್ಲಿ ಶೇ. 5 ಲಾಭಾಂಶ ಅಂದರೆ 29 ಕೋಟಿ ರೂ. ಗಳನ್ನು ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಅನಿಲ್ ಗೌಡ ಅವರು ವೀರೇಂದ್ರ ಅವರ ಜತೆ ಉದ್ಯಮ ನಡೆಸುತ್ತಿದ್ದರು ಎಂಬುದಕ್ಕೆ 2021ರ ಜುಲೈ 28ರ ಇಮೇಲ್ ಸಾಕ್ಷಿ ಒದಗಿಸುತ್ತದೆ. ಆ ಸಂದರ್ಭದಲ್ಲಿ ಅನಿಲ್ ಗೌಡ ಎಲ್‌ಎಲ್‌ಬಿ ಕಲಿಯುತ್ತಿರಬಹುದು. 2022ರಲ್ಲಿ ಅನಿಲ್ ಗೌಡ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದಾರೆ. ಸದ್ಯ ಕಾನೂನಿನ ಪ್ರಕಾರ ಅನಿಲ್ ಗೌಡ ವಕೀಲರಾಗಿರಬಹುದು. ಆದರೆ, ಕಾನೂನು ಸಲಹೆ ನೀಡಿರುವುದಕ್ಕಾಗಿ ಅನಿಲ್ ಗೌಡ ಅವರಿಗೆ ಸಮನ್ಸ್ ನೀಡಲಾಗಿಲ್ಲ. ಉದ್ಯಮದಲ್ಲಿ ಪಾಲುದಾರರಾಗಿರುವುದರಿಂದ ಅವರ ಹೇಳಿಕೆ ದಾಖಲಿಸಲು ಸಮನ್ಸ್ ನೀಡಲಾಗಿದೆ ಎಂದು ಸಮನ್ಸ್ ಜಾರಿ ಮಾಡಿದ್ದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.
Related Articles
Thank you for your comment. It is awaiting moderation.
Comments (0)