ಕೆ.ಜಿ. ಹಳ್ಳಿ ಗಲಭೆ ಪ್ರಕರಣ; ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಲು ಆರೋಪಿಗೆ ಮಧ್ಯಂತರ ಜಾಮೀನು
- by Jagan Ramesh
- September 15, 2025
- 14 Views

ಬೆಂಗಳೂರು: ನಗರದ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದ ಆರೋಪಿಯೋರ್ವನಿಗೆ ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಲು 90 ದಿನಗಳ ಅವಧಿಗೆ ಷರತ್ತುಬದ್ಧ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ.
ಹರ್ನಿಯಾ ಸಮಸ್ಯೆಯಿಂದ ಬಳುತ್ತಿರುವ ಕೆ.ಜಿ. ಹಳ್ಳಿಯ ಶ್ಯಾಂಪುರ ರಸ್ತೆ ನಿವಾಸಿ ಮೊಹಮ್ಮದ್ ಖಲೀಲ್ ಅಹ್ಮದ್ (19ನೇ ಆರೋಪಿ) ಎಂಬಾತ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಆದೇಶವೇನು?
ಅರ್ಜಿದಾರ ಆರೋಪಿ ಹರ್ನಿಯಾದಿಂದ ಬಳಲುತ್ತಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಸರ್ಜರಿಗೆ ಒಳಗಾಗಲು ಆತ ನಿರ್ಧರಿಸಿದ್ದಾನೆ. ಅರ್ಜಿದಾರನಿಗೆ 71 ವರ್ಷವಾಗಿದೆ. ವೈದ್ಯಕೀಯ ವರದಿ ಮತ್ತು ವಯಸ್ಸು ಪರಿಗಣಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಗುಣಮುಖರಾಗಲು ಅರ್ಜಿದಾರನಿಗೆ 90 ದಿನಗಳ ಕಾಲ ವೈದ್ಯಕೀಯ ಮಧ್ಯಂತರ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಆರೋಪಿಯು 1 ಲಕ್ಷ ರೂ. ವೈಯಕ್ತಿ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ನೀಡಬೇಕು. ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ಮನೆ ವಿಳಾಸ ನೀಡಬೇಕು. ಬೆಂಗಳೂರು ಬಿಟ್ಟು ತೆರಳಬಾರದು. ಎರಡು ವಾರಕ್ಕೊಮ್ಮೆ ವೈದ್ಯಕೀಯ ವರದಿಯನ್ನು ಎನ್‌ಐಎ ತನಿಖಾಧಿಕಾರಿಗೆ ನೀಡಬೇಕು. ಜೈಲಿನಿಂದ ಬಿಡುಗಡೆಯಾದ ದಿನಾಂಕದಿಂದ ಸರಿಯಾಗಿ 91ನೇ ದಿನದಂದು ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ, ತನಗೆ 71 ವರ್ಷವಾಗಿದ್ದು, ಸದ್ಯ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಶಸ್ತ್ರಚಿಕಿತ್ಸೆಗೆ ಒಳಗಾಗು ಒಳಗಾಗಲು 60 ದಿನಗಳ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸರ್ಜರಿ ಮಾಡಿಸಲು ಯಾರೂ ಸಲಹೆ ನೀಡಿಲ್ಲ. ಅಗತ್ಯ ವೈದ್ಯಕೀಯ ನೆರವನ್ನು ಜೈಲಿನಲ್ಲಿ ನೀಡಲಾಗಿದೆ ಎಂಬ ಆಧಾರದಲ್ಲಿ ಆರೋಪಿಯ ಮನವಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ, ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.
ಅರ್ಜಿದಾರನ ವಿರುದ್ಧದ ಆರೋಪವೇನು?
ಅರ್ಜಿದಾರ ಉಗ್ರಗಾಮಿ ಸಿದ್ಧಾಂತ ಹೊಂದಿದ್ದು, ಭಯೋತ್ಪಾದಕ ಕೃತ್ಯ ಎಸಗುವ ಉದ್ದೇಶದಿಂದ ಪಿತೂರಿ ನಡೆಸಿದ್ದಾನೆ. ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪಿ. ನವೀನ್ ಎಂಬಾತನ ವಿರುದ್ಧ ಕ್ರಮ ಜರುಗಿಸಬೇಕು. ಆತನನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಒತ್ತಾಯಿಸಿ 2020ರ ಆಗಸ್ಟ್ 11ರಂದು ರಾತ್ರಿ 8.45ಕ್ಕೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿ ಅರ್ಜಿದಾರ ಸೇರಿ ಇತರರು ಜಮಾಯಿಸಿದ್ದರು. ನವೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದರೂ, ಪೊಲೀಸ್ ಠಾಣೆ ಧ್ವಂಸಗೊಳಿಸಿದ ಹಾಗೂ ಖಾಸಗಿ ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಇಟ್ಟಿದ್ದಲ್ಲದೆ, ಪೊಲೀಸರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಆರೋಪ ಅರ್ಜಿದಾರನ ಮೇಲಿದೆ.
Related Articles
Thank you for your comment. It is awaiting moderation.
Comments (0)