ಪರಿಷ್ಕೃತ ಎಂಆರ್‌ಪಿ ಮಾರ್ಗಸೂಚಿಗೆ ತಡೆ ನೀಡಲು ಹೈಕೋರ್ಟ್ ನಕಾರ; ಕೇಂದ್ರ ಸರ್ಕಾರಕ್ಕೆ ನೋಟಿಸ್
- by Jagan Ramesh
- September 15, 2025
- 14 Views

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಉತ್ಪನ್ನಗಳ ತಯಾರಕರು ಮತ್ತು ಆಮದುದಾರರು ದಾಸ್ತಾನು ಉಳಿದಿರುವ ವಸ್ತು ಮತ್ತು ಉತ್ಪನ್ನಗಳ ಮೇಲೆ ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ದರ (ಎಂಆರ್‌ಪಿ) ಕಡ್ಡಾಯವಾಗಿ ಪ್ರಕಟಿಸಬೇಕು ಎಂಬ ಮಾರ್ಗಸೂಚಿಗಳಿಗೆ ಏಕಪಕ್ಷೀಯವಾಗಿ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಮಾರ್ಗಸೂಚಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ಗ್ರಾಹಕ ವ್ಯವಹಾರಗಳು ತೂಕ ಮತ್ತು ಮಾಪನ ಇಲಾಖೆ ಸೆಪ್ಟೆಂಬರ್ 9ರಂದು ಹೊರಡಿಸಿರುವ ಮಾರ್ಗಸೂಚಿಗಳನ್ನು ರದ್ದುಪಡಿಸುವಂತೆ ಕೋರಿ ಅಡುಗೆ ಹಾಗೂ ಗೃಹಬಳಕೆ ಉತ್ಪನ್ನಗಳ ತಯಾರಿಕಾ ಸಂಸ್ಥೆ ‘ಟಿಟಿಕೆ ಪ್ರೆಸ್ಟೀಜ್’ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿ ಕೇಂದ್ರ ಸರ್ಕಾರದ ವಾದ ಆಲಿಸದೆ ಏಕಪಕ್ಷೀಯವಾಗಿ ಮಾರ್ಗಸೂಚಿಗಳಿಗೆ ತಡೆ ನೀಡಲಾಗದು ಎಂದು ತಿಳಿಸಿತಲ್ಲದೆ, ಅರ್ಜಿ ಸಂಬಂಧ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ಗ್ರಾಹಕ ವ್ಯವಹಾರಗಳು ತೂಕ ಮತ್ತು ಮಾಪನ ಇಲಾಖೆ ಹಾಗೂ ರಾಜ್ಯ ಸರ್ಕಾರದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ನಿಯಂತ್ರಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿತು.
ಪ್ರಕರಣವೇನು?
ಜಿಎಸ್‌ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ತಯಾರಕರು, ಪ್ಯಾಕ್ ಮಾಡುವವರು ಮತ್ತು ಆಮದುದಾರರು ಮಾರಾಟವಾಗದ ಉತ್ಪನ್ನಗಳ ಮೇಲಿನ ಎಂಆರ್‌ಪಿಯನ್ನು 2025ರ ಡಿಸೆಂಬರ್ 31ರವರೆಗೆ ಅಥವಾ ಹಾಲಿ ಇರುವ ದಾಸ್ತಾನು ಖಾಲಿಯಾಗುವವರೆಗೆ ಪರಿಷ್ಕರಿಸಬಹುದು. ಪರಿಷ್ಕೃತ ಎಂಆರ್‌ಪಿ ಜಿಎಸ್‌ಟಿಯಿಂದ ಆದ ಬದಲಾವಣೆಯನ್ನು ಮಾತ್ರ ತೋರಿಸಬೇಕು. ತೆರಿಗೆಯಿಂದ ಆದ ಹೆಚ್ಚಳ ಮತ್ತು ಏರಿಕೆಯನ್ನು ಮಾತ್ರ ಆದರಲ್ಲಿ ತೋರಿಸಬೇಕು ಎಂದು ಕೇಂದ್ರ ಸರ್ಕಾರ ಸೆಪ್ಟೆಂಬರ್ 9ರಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಈ ಮಾರ್ಗಸೂಚಿಗಳು ಸೆಪ್ಟೆಂಬರ್ 22ರಿಂದ ಅನ್ವಯವಾಗಲಿವೆ ಎಂದು ಹೇಳಲಾಗಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
Related Articles
Thank you for your comment. It is awaiting moderation.
Comments (0)