ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಹ್ವಾನಕ್ಕೆ ವಿರೋಧ; ಪಿಐಎಲ್ಗಳನ್ನು ವಜಾಗೊಳಿಸಿದ ಹೈಕೋರ್ಟ್
- by Jagan Ramesh
- September 15, 2025
- 39 Views

ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಇದರಿಂದ, ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರ ಆಯ್ಕೆ ಮಾಡಿದ್ದ ರಾಜ್ಯ ಸರ್ಕಾರದ ನಡೆಯನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ನ್ಯಾಯಾಲಯದಲ್ಲಿ ತೀವ್ರ ಹಿನ್ನಡೆಯಾದಂತಾಗಿದೆ.
ಪ್ರಸಕ್ತ ವರ್ಷದ ದಸರಾ ಮಹೋತ್ಸವದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಉದ್ಯಮಿ ಟಿ. ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್. ಸೌಮ್ಯಾ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ಹಾಗೂ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಭಿನ್ನ ಧರ್ಮದ ವ್ಯಕ್ತಿ ಭಾಗಿಯಾಗುವುದು ಅರ್ಜಿದಾರರ ಯಾವುದೇ ಕಾನೂನಾತ್ಮಕ ಅಥವಾ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ ಅಥವಾ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಸಾಬೀತುಪಡಿಸುವಲ್ಲಿ ವಿಫಲವಾಗಿರುವುದರಿಂದ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಆದೇಶಿಸಿ, ವಿಸ್ತೃತ ಆದೇಶವನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿತು.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ಅರ್ಜಿದಾರರಲ್ಲೊಬ್ಬರಾದ ಪ್ರತಾಪ್ ಸಿಂಹ ಪರ ವಕೀಲ ಎಸ್. ಸುದರ್ಶನ್ ವಾದ ಮಂಡಿಸಿ, ಬಾನು ಮುಷ್ತಾಕ್ ಅವರು ಹಿಂದು ಸಂಪ್ರದಾಯ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ಭುವನೇಶ್ವರಿ ದೇವಿ, ಕನ್ನಡ ಧ್ವಜದ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ದಸರಾ ಉದ್ಘಾಟನೆಗೆ ಆಯ್ಕೆಯಾದವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದು ಶಿಷ್ಟಾಚಾರ, ಇದನ್ನು ಪಾಲಿಸಲಾಗಿಲ್ಲ. ಬಾನು ಮುಷ್ತಾಕ್ ಅವರಿಗೆ ಅರಿಶಿಣ-ಕುಂಕುಮದ ಮೇಲೆ ನಂಬಿಕೆ ಇಲ್ಲ. ದಸರಾ ಹಿಂದು ಹಬ್ಬವಾಗಿದ್ದು, ಜಾತ್ಯತೀತ ಹಬ್ಬವಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಬಾನು ಮುಷ್ತಾಕ್ ಅವರ ಆಯ್ಕೆ ಪ್ರಶ್ನಿಸಲು ನಿಮಗೆ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಹಕ್ಕು ಏನಿದೆ ಎಂಬುದನ್ನು ಹೇಳಿ, ಶಿಷ್ಟಾಚಾರ ಪಾಲಿಸುವುದು ಅವರಿಗೆ ಬಿಟ್ಟ ವಿಚಾರ. ಅರ್ಚಕರ ಪೂಜೆಯ ಹಕ್ಕು ಕಸಿದರೆ, ವ್ಯಕ್ತಿಯ ಆಸ್ತಿ ಕಸಿದರೆ ಪ್ರಶ್ನೆ ಮಾಡಬಹುದು. ಇಲ್ಲಿ ನಿಮ್ಮ ಯಾವ ಹಕ್ಕು ಕಸಿಯಲಾಗಿದೆ ಎಂದು ಕೇಳಿತು.
ಮತ್ತೊಬ್ಬ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ರಂಗನಾಥ್ ರೆಡ್ಡಿ, ಹಿಂದು ದೇವರ ಪೂಜೆಯನ್ನು ಆಗಮ ಶಾಸ್ತ್ರದಿಂದ ಪ್ರತ್ಯೇಕಿಸಲಾಗದು. ಹಿಂದುಯೇತರ ವ್ಯಕ್ತಿಯು ದಸರಾ ಉದ್ಘಾಟಿಸಬಹುದೇ ಎಂಬ ಪ್ರಶ್ನೆ ಇಲ್ಲಿದೆ. ಹಿಂದು ದೇವರ ಮೇಲೆ ನಂಬಿಕೆ ಇದೆ ಎಂದು ಬಾನು ಮುಷ್ತಾಕ್ ಅವರು ಸ್ಪಷ್ಟಪಡಿಸಿದರೆ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದರು.
ನಿಸಾರ್ ಅಹ್ಮದ್ ಬಗ್ಗೆ ಇಲ್ಲದ ಆಕ್ಷೇಪ ಈಗೇಕೆ?
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಅರ್ಜಿದಾರರಲ್ಲೊಬ್ಬರಾದ ಪ್ರತಾಪ್ ಸಿಂಹ ಅವರಿಗೆ ದಂಡ ವಿಧಿಸಬೇಕು. ಸಂಸದರಾಗಿದ್ದಾಗ ನಾಡಿನ ಖ್ಯಾತ ಸಾಹಿತಿ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿದ್ದರು. ಅವರೊಂದಿಗೆ ಪ್ರತಾಪ್ ಸಿಂಹ ಸಹ ವೇದಿಕೆ ಹಂಚಿಕೊಂಡಿದ್ದರು. ಹೀಗಿರುವಾಗ, ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳೆ ಅಥವಾ ಸಾಹಿತಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಅಸಾಮಾನ್ಯ ಸಂಗತಿ ಏನಲ್ಲ. ಈ ವಿಚಾರವನ್ನು ಪ್ರತಾಪ್ ಸಿಂಹ ತಮ್ಮ ಅರ್ಜಿಯಲ್ಲಿ ಬಹಿರಂಗಪಡಿಸಿಲ್ಲ. ಬಾನು ಮುಷ್ತಾಕ್ ಅವರು ಬುಕರ್ ಪ್ರಶಸ್ತಿ ಪುರಸ್ಕೃತರಾಗಿದ್ದು, ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಲೇಖಕರಾದ ನಿಸಾರ್ ಅಹ್ಮದ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದಾಗ ಪ್ರತಾಪ್ ಸಿಂಹ ಯಾವುದೇ ಆಕ್ಷೇಪ ಎತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ದಸರಾ ರಾಜ್ಯದ ಹಬ್ಬವಾಗಿದ್ದು, ಸರ್ಕಾರದ ನಿರ್ಧಾರವು ಸಂವಿಧಾನದ ಪರಿಚ್ಛೇದ 15ಕ್ಕೆ ಪೂರಕವಾಗಿದೆ. ಎಲ್ಲ ಪಕ್ಷಗಳ ಮುಖಂಡರನ್ನೊಳಗೊಂಡ ದಸರಾ ಸಮಿತಿಯು ಅತಿಥಿ ಆಯ್ಕೆಯನ್ನು ಮುಖ್ಯಮಂತ್ರಿಗೆ ನೀಡಿತ್ತು. ಮುಖ್ಯಮಂತ್ರಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಾರೆ. ದಸರಾ ಜಾತ್ಯತೀತ ಹಬ್ಬವಾಗಿದ್ದು, ಇದನ್ನು ಧಾರ್ಮಿಕ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಪರ ವಕೀಲ ಸುದರ್ಶನ್, ನಿಸಾರ್ ಅಹ್ಮದ್ ಅವರು ಮುಸ್ಲಿಮ್ ಆಗಿದ್ದರೂ ಹಿಂದು ಸಂಸ್ಕೃತಿಯ ಮೇಲೆ ಅಪಾರ ಗೌರವ ಹೊಂದಿದ್ದರು. ಕನ್ನಡ ಮಾತೆ, ಕೃಷ್ಣನ ಬಗ್ಗೆ ಪದ್ಯಗಳನ್ನೂ ಬರೆದಿದ್ದಾರೆ. ಅವರು ಎಂದಿಗೂ ಕನ್ನಡ ವಿರೋಧಿ ಹೇಳಿಕೆ ನೀಡಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಕಾನೂನಾತ್ಮಕ ಅಥವಾ ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಗಳನ್ನು ವಜಾಗೊಳಿಸಿತು.
ಈ ವೇಳೆ, ಆದೇಶ ಪ್ರಕಟಿಸಿದ ಬಳಿಕವೂ ವಾದ ಮುಂದುವರಿಸಲು ಯತ್ನಿಸಿದ ಪ್ರತಾಪ್ ಸಿಂಹ ಪರ ವಕೀಲರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ನಮ್ಮ ಆದೇಶ ಪ್ರಕಟಿಸಲಾಗಿದೆ. ಹಾಗಿದ್ದರೂ ವಾದ ಮುಂದುವರಿಸುತ್ತಿರುವುದೇಕೆ, ಈ ನ್ಯಾಯಾಲಯದಲ್ಲಿ ನೀವು ಹೀಗೆಲ್ಲ ಮಾಡಲಾಗದು, ದಂಡ ವಿಧಿಸಬೇಕೆ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿತು.
Related Articles
Thank you for your comment. It is awaiting moderation.
Comments (0)