ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪ; ಮಣಿಕಂಠ ರಾಥೋಡ್ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು/ಕಲಬುರಗಿ: ರಾಜಕೀಯ ವಿರೋಧಿಗಳು ಒಬ್ಬರನ್ನೊಬ್ಬರು ಕಳ್ಳ ಎಂದು ಕರೆಯುವುದು ಕ್ರಿಮಿನಲ್‌ ಪ್ರಕರಣ ದಾಖಲಾತಿಗೆ ಆಧಾರವಾಗದು ಎಂದಿರುವ ಹೈಕೋರ್ಟ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ‘ಅಕ್ಕಿ ಕಳ್ಳ’ ಎಂದು ಸಂಬೋಧಿಸಿದ್ದ ಆರೋಪದಲ್ಲಿ ಬಿಜೆಪಿಯ ಮುಖಂಡ ಮಣಿಕಂಠ ರಾಥೋಡ್‌ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.

ಉದ್ದೇಶಪೂರ್ವಕ ಅಪಮಾನ ಮತ್ತು ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಕಲಬುರಗಿಯ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತದಕ್ಕೆ ಸಂಬಂಧಿಸಿದ ನ್ಯಾಯಿಕ ಪ್ರಕ್ರಿಯೆ ರದ್ದು ಕೋರಿ ಮಣಿಕಂಠ ರಾಥೋಡ್‌ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿಯಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ, ಪ್ರಿಯಾಂಕ್‌ ಖರ್ಗೆ ಮತ್ತು ಮಣಿಕಂಠ ಅವರು ರಾಜಕೀಯ ವಿರೋಧಿಗಳಾಗಿದ್ದು, ನಿಂದನೆಗೆ ಒಳಗಾಗಿದ್ದಾರೆ ಎನ್ನಲಾದ ಪ್ರಿಯಾಂಕ್‌ ಅವರು ದೂರು ನೀಡಿಲ್ಲ. ರಾಜಕೀಯ ವಿರೋಧಿಗಳು ಒಬ್ಬರನ್ನೊಬ್ಬರು ಕಳ್ಳ ಎಂದು ಹೇಳುವುದು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆಧಾರವಲ್ಲ. ಇದು ಮೇಲ್ನೋಟಕ್ಕೆ ಸಂವಿಧಾನದ ಪರಿಚ್ಛೇದ 19(1)ರ ಅಡಿ ದೊರೆತಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ಎಫ್‌ಐಆರ್‌ ದಾಖಲಿಸಿರುವುದು ಮೇಲ್ನೋಟಕ್ಕೆ ರಾಜಕೀಯ ಪ್ರೇರಿತವಾಗಿದ್ದು, ಅನುಕಂಪ ಪಡೆಯಲು ನ್ಯಾಯಾಂಗ ಪ್ರಕ್ರಿಯೆಯನ್ನು ಅಸ್ತ್ರವನ್ನಾಗಿ ಬಳಕೆ ಮಾಡಲಾಗಿದೆ. ಈ ಸಂಬಂಧ ನ್ಯಾಯಾಂಗ ಪ್ರಕ್ರಿಯೆ ಆರಂಭಿಸಿರುವುದು ಕಾನೂನಿನ ದುರ್ಬಳಕೆಯಲ್ಲದೇ ಬೇರೇನೂ ಅಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದೆ.

ಪ್ರಕರಣವೇನು?
ಮಣಿಕಂಠ ರಾಥೋಡ್ ಅವರು 2025ರ ಮೇ 26ರಂದು ತಮ್ಮ ಫೇಸ್‌ಬುಕ್‌ನ ಖಾತೆಯಲ್ಲಿ ಅಪಲೋಡ್ ಮಾಡಿದ್ದ ವಿಡಿಯೊದಲ್ಲಿ ಸಚಿವ ಪ್ರಿಯಾಂಕ್‌ ಅವರನ್ನು “ಲೇ ಅಕ್ಕಿ ಕಳ್ಳ” ಎಂದು ಕರೆದು ಅವಹೇಳನ ಮಾಡಿದ್ದಾರೆ. ಅಲ್ಲದೆ, ಕೋಲಿ ಕಬ್ಬಲಿಗ ಎಸ್‌ಟಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಾಮಾದಾರ ಅವರನ್ನು “ಟೋಪಿ ಲಚ್ಚ್ಯಾ” ಎಂದು ಕರೆದು ಅಮಾನಿಸಿದ್ದಾರೆ. ಇದರ ಜತೆಗೆ ಪ್ರಕರಣವೊಂದರಲ್ಲಿ ಮಣಿಕಂಠ ಅವರಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರನ್ನೂ ನಿಂದನೆ ಮಾಡಿದ್ದಾರೆ. ಆದ್ದರಿಂದ, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತ ಹಣಮಂತ ದೂರು ನೀಡಿದ್ದರು.

ದೂರು ಆಧರಿಸಿ ಚಿತ್ತಾಪುರ ಪೊಲೀಸರು ಮಣಿಕಂಠ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 352(ಉದ್ದೇಶಪೂರ್ವಕ ಅವಮಾನ) ಹಾಗೂ 353(2) (ಧರ್ಮ, ಜಾತಿ, ಸಮುದಾಯ, ಭಾಷೆಯ ಆಧಾರದಲ್ಲಿ ದ್ವೇಷ ಮೂಡಿಸುವ ಸಲುವಾಗಿ ಸುಳ್ಳು ಮಾಹಿತಿ ಹಬ್ಬಿಸುವುದು) ಅಡಿ ಎಫ್‌ಐಆರ್ ದಾಖಲಿಸಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ಮಣಿಕಂಠ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರ ಮಣಿಕಂಠ ರಾಥೋಡ್‌ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌, ವಕೀಲ ಜಿ.ಆರ್‌. ಬಸವಕಿರಣ್ ಹಾಗೂ ಸರ್ಕಾರದ ಪರವಾಗಿ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಸಿದ್ದಲಿಂಗ ಪಾಟೀಲ ವಾದ ಮಂಡಿಸಿದ್ದರು.

Related Articles

Comments (0)

Leave a Comment