ಸರ್ಕಾರಿ ಯೋಜನೆ ಬಗ್ಗೆ ಕೋಮು ಪ್ರಚೋದನಕಾರಿ ವರದಿ ಪ್ರಸಾರ ಮಾಡಿದ ಆರೋಪ; ವಾದ ಮಂಡನೆಗೆ ಸುಧೀರ್ ಚೌಧರಿಗೆ ಅಂತಿಮ ಅವಕಾಶ ನೀಡಿದ ಹೈಕೋರ್ಟ್
- by Jagan Ramesh
- September 12, 2025
- 20 Views

ಬೆಂಗಳೂರು: ರಾಜ್ಯ ಸರ್ಕಾರದ ‘ಸ್ವಾವಲಂಬಿ ಸಾರಥಿ ಯೋಜನೆ’ಯ ಕುರಿತು ಕೋಮು ಪ್ರಚೋದನಕಾರಿ ವರದಿ ಪ್ರಸಾರ ಮಾಡಿದ ಆರೋಪ ಸಂಬಂಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ವಾದ ಮಂಡಿಸಲು ಆಜ್ ತಕ್ ಸುದ್ದಿ ವಾಹಿನಿ ಮತ್ತದರ ಮಾಜಿ ಸಂಪಾದಕ ಸುಧೀರ್ ಚೌಧರಿ ಅವರಿಗೆ ಕೊನೆಯ ಅವಕಾಶ ನೀಡಿರುವ ಹೈಕೋರ್ಟ್, ಒಂದೊಮ್ಮೆ ವಾದ ಮಂಡಿಸಲು ವಿಫಲವಾದರೆ ಅರ್ಜಿ ವಜಾಗೊಳಿಸುವುದಾಗಿ ಎಚ್ಚರಿಸಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್. ಶಿವಕುಮಾರ್ ನೀಡಿರುವ ದೂರು ಆಧರಿಸಿ ಬೆಂಗಳೂರಿನ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸುಧೀರ್ ಚೌಧರಿ ಹಾಗೂ ಆಜ್ ತಕ್ ಸುದ್ದಿವಾಹಿನಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ಈ ಹಿಂದೆಯೇ ನ್ಯಾಯಾಲಯಕ್ಕೆ ಮೌಖಿಕ ಭರವಸೆ ನೀಡಲಾಗಿದ್ದು ಅದನ್ನು ಮುಂದುವರಿಸಲಾಗಿದೆ. ಈಗ ಪೊಲೀಸರು ಅರ್ಜಿದಾರರ ಹಾಜರಾತಿಗೆ ನೋಟಿಸ್ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿದಾರರು ತನಿಖೆಗೆ ಸಹಕರಿಸುತ್ತಿದ್ದಾರೆಯೇ ಎಂಬ ನ್ಯಾಯಪೀಠದ ಪ್ರಶ್ನೆಗೆ ವಕೀಲರು ಹೌದು ಎಂದು ಉತ್ತರಿಸಿದರು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ಅವರು ಈ ಪ್ರಕರಣವನ್ನು ಇಂದು ವಿಚಾರಣೆಗಾಗಿ ನಿರ್ದಿಷ್ಟವಾಗಿ ಪಟ್ಟಿ ಮಾಡಲಾಗಿದೆ. ಅರ್ಜಿ ಸಂಬಂಧ ನಾವು ವಾದ ಮಂಡಿಸಲು ಸಿದ್ಧರಿದ್ದೇವೆ. ತನಿಖೆಗೆ ಸಹಕರಿಸಬೇಕೆಂಬ ಷರತ್ತಿನ ಮೇಲೆ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ಈ ಹಿಂದೆ ಮೌಖಿಕ ಭರವಸೆ ನೀಡಲಾಗಿದೆ. ಹಾಗಾಗಿ, ಅರ್ಜಿದಾರರು ತನಿಖೆಗೆ ಸಹಕರಿಸಲಿ ಎಂದು ಹೇಳಿದರು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಕುರಿತು ವಾದ ಮಂಡಿಸಲು ಅರ್ಜಿದಾರರಿಗೆ ಕೊನೆಯ ಅವಕಾಶ ಕಲ್ಪಿಸಿ, ಪ್ರಕರಣವನ್ನು ಅಕ್ಟೋಬರ್ 13ರಂದು ವಿಚಾರಣೆಗೆ ನಿಗದಿಪಡಿಸಲಾಗುವುದು. ಅಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಲು ವಿಫಲವಾದರೆ, ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದು ತಿಳಿಸಿ, ವಿಚಾರಣೆ ಮುಂದೂಡಿತು.
ಪ್ರಕರಣವೇನು?
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಹಾಯಕ ಆಡಳಿತಾಧಿಕಾರಿ ಎಸ್. ಶಿವಕುಮಾರ್ ಅವರು 2023ರ ಸೆಪ್ಟೆಂಬರ್ 12ರಂದು ಶೇಷಾದ್ರಿಪುರ ಠಾಣೆಗೆ ದೂರು ನೀಡಿ, ಸೆಪ್ಟೆಂಬರ್ 11ರ ರಾತ್ರಿ 9.55ರ ವೇಳೆಗೆ ರಾಷ್ಟ್ರೀಯ ಸುದ್ದಿ ವಾಹಿನಿಯಾದ ಆಜ್ ತಕ್ನಲ್ಲಿ ಅಂದಿನ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರು ಸರ್ಕಾರದ ಯೋಜನೆಯ ಪ್ರಯೋಜನವನ್ನು ಕೇವಲ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ ಎಂದು ಸುದ್ದಿ ಪ್ರಸಾರ ಮಾಡಿದ್ದಾರೆ. ಅಲ್ಪಸಂಖ್ಯಾತರಲ್ಲದ ಹಿಂದಗಳಿಗೆ ಈ ಯೋಜನೆ ನೀಡದೇ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲದ ಬಡ ಹಿಂದುಗಳಿಗೆ ಅನ್ಯಾಯವಾಗಿರುತ್ತದೆ ಎಂದು ಕೋಮು ಪ್ರಚೋದನಾಕಾರಿ ಸುದ್ದಿ ಪ್ರಸಾರ ಮಾಡುವ ಮೂಲಕ ಹಿಂದು ಧರ್ಮ ಮತ್ತು ಇತರ ಧರ್ಮಗಳ ನಡುವೆ ದ್ವೇಷ ಹರಡುವ, ಅಶಾಂತಿಯ ವಾತಾವರಣ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಚೌಧರಿ ಅವರು ತಾವಾಡುವ ಮಾತುಗಳ ಬಗ್ಗೆ ಸ್ಪಷ್ಟ ಅರಿವಿದ್ದರೂ ಸುಳ್ಳು ಸುದ್ದಿ ಬಿತ್ತರಿಸಿ, ರಾಜ್ಯದಲ್ಲಿ ಕೋಮು ಸಾಮರಸ್ಯ ಹಾಳು ಮಾಡಲು ಸಂಚು ಮಾಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಯ ಬಗ್ಗೆ ಸುಳ್ಳು ಮತ್ತು ಕೋಮು ಪ್ರಚೋದನಕಾರಿ ಸುದ್ದಿ ಬಿತ್ತರಿಸಿದ ಆಜ್ ತಕ್ ಸುದ್ದಿ ವಾಹಿನಿ, ಸುಧೀರ್ ಚೌಧರಿ ಹಾಗೂ ಕಾರ್ಯಕ್ರಮ ಆಯೋಜಿಸಿರುವ ವಾಹಿನಿಯ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು. ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
Related Articles
Thank you for your comment. It is awaiting moderation.
Comments (0)