ಕೆಪಿಸಿಎಲ್‌ಗೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಅಧಿಕಾರಿಯೊಬ್ಬರಿಗೆ ಬ್ಯಾಕ್‌ಲಾಗ್ ಮುಂಬಡ್ತಿ ನೀಡಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ (ಕೆಪಿಸಿಎಲ್) ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಜಾರಿಗೊಳಿಸಿದ್ದ ನೋಟಿಸ್‌ಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.

ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ 2025ರ ಜೂನ್ 16ರಂದು ಜಾರಿಗೊಳಿಸಿದ್ದ ನೋಟಿಸ್ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಣೆ ರದ್ದು ಕೋರಿ ಕೆಪಿಸಿಎಲ್ ಉಪ ಪ್ರಧಾನ ವ್ಯವಸ್ಥಾಪಕರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ವಿಚಾರಣೆ ವೇಳೆ ಕೆಪಿಸಿಎಲ್ ಪರ ವಕೀಲರು ವಾದ ಮಂಡಿಸಿ, ಬಡ್ತಿ ನೀಡುವುದು ಸೇವಾ ವಿಷಯಕ್ಕೆ ಸಂಬಂಧಿಸಿದ್ದು, ಇದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ, ಆಯೋಗ ಜಾರಿಗೊಳಿಸಿರುವ ನೋಟಿಸ್ ರದ್ದುಪಡಿಸಬೇಕು. ಕೆಪಿಸಿಎಲ್ ವಿರುದ್ಧ ವಿಚಾರಣೆ ನಡೆಸದಂತೆ ಆಯೋಗವನ್ನು ನಿರ್ಬಂಧಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಆಯೋಗದ ನೋಟಿಸ್ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಆಯೋಗದ ನೋಟಿಸ್‌ಗೆ ತಡೆ ನೀಡಿತಲ್ಲದೆ, ಆಯೋಗ ಮತ್ತು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:
ಬ್ಯಾಕ್‌ಲಾಗ್ ಮುಂಬಡ್ತಿ ನೀಡಿಲ್ಲ ಎಂದು ಆಕ್ಷೇಪಿಸಿ ಕೆಪಿಸಿಎಲ್ ಅಧಿಕಾರಿ ಬೂಸಪ್ಪ ಗರಿ ರಾಘವೇಂದ್ರ ಎಂಬುವರು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ದೂರು ನೀಡಿದ್ದರು. ಅದನ್ನು ಆಧರಿಸಿ ಆಯೋಗ ಕೆಪಿಸಿಎಲ್‌ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಗೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಕೆಪಿಸಿಎಲ್ ಹೈಕೋರ್ಟ್ ಮೊರೆ ಹೋಗಿದೆ.

Related Articles

Comments (0)

Leave a Comment