ಆತ್ಮಹತ್ಯೆಗೆ ಪ್ರಚೋದನೆ ಆರೋಪ; ಸಂಸದ ಕೆ. ಸುಧಾಕರ್ ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕ ಬಾಬು ಎಂಬಾತನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಡಾ. ಕೆ ಸುಧಾಕರ್‌ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಇದೇ ವೇಳೆ, ಪ್ರಕರಣದ ತನಿಖೆಗೆ ಸಹಕರಿಸುವಂತೆ ಡಾ. ಕೆ. ಸುಧಾಕರ್ ಅವರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಮೃತ ಬಾಬು ಪತ್ನಿ ಎನ್. ಶಿಲ್ಪಾ ಸಲ್ಲಿಸಿರುವ ದೂರು ಆಧರಿಸಿ, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಕೋರಿ ಸಂಸದ ಕೆ. ಸುಧಾಕರ್ ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಸುಧಾಕರ್ ಹಾಗೂ ಸರ್ಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಅರ್ಜಿದಾರ ಸುಧಾಕರ್‌ ತನಿಖೆಗೆ ಸಹಕರಿಸಬೇಕು. ಹೈಕೋರ್ಟ್‌ ಅನುಮತಿ ಪಡೆಯದೇ ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತಿಲ್ಲ ಎಂದು ಮಧ್ಯಂತರ ಆದೇಶ ಹೊರಡಿಸಿತು.

ಜತೆಗೆ, ಅರ್ಜಿ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ, ದೂರುದಾರೆ ಶಿಲ್ಪಾ (ಮೃತನ ಪತ್ನಿ) ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಸುಧಾಕರ್ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಮೃತ ಬಾಬು ಜತೆ ಸುಧಾಕರ್ ಯಾವುದೇ ನೇರ ಸಂಪರ್ಕ ಹೊಂದಿರಲಿಲ್ಲ. ಸುಧಾಕರ್‌ ಅವರು ಮೃತ ಬಾಬು ಅವರಿಂದ ಒಂದು ಪೈಸೆ ಹಣವನ್ನೂ ಸ್ವೀಕರಿಸಿಲ್ಲ. ಬಾಬು ಹಣ ನೀಡಿದ್ದಾರೆ ಎನ್ನಲಾದ ಮಂಜುನಾಥ್‌ ಮತ್ತು ನಾಗೇಶ್‌ ಸಹ ಸುಧಾಕರ್‌ಗೆ ಪರಿಚಿತರಲ್ಲ. ಸುಧಾಕರ್‌ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ ವಾದ ಮಂಡಿಸಿ, ಪತಿಯ ಮರಣ ಪತ್ರದಲ್ಲಿ ಸುಧಾಕರ್ ಅವರ ಹೆಸರು ಉಲ್ಲೇಖವಾಗಿದ್ದರಿಂದ ಮೃತರ ಪತ್ನಿ ದೂರು ನೀಡಿದ್ದಾರೆ. ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಅನುಮತಿಸಬೇಕು. ಅರ್ಜಿದಾರರನ್ನು ಬಂಧಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಪ್ರಕರಣವೇನು?
ಇದೇ ಆಗಸ್ಟ್ 7ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಚಿಕ್ಕಬಳ್ಳಾಪುರ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿದ್ದ ಅವರ ಪತ್ನಿ ಶಿಲ್ಪಾ, 2021ರಲ್ಲಿ ಅಂದಿನ ಆರೋಗ್ಯ ಮತ್ತು ವೈದ್ಯಕೀಯ ಸಚಿವರಾಗಿದ್ದ ಡಾ. ಕೆ ಸುಧಾಕರ್‌ ಮತ್ತು ಅವರ ಪರಿಚತರು ಎನ್ನಲಾದ ನಾಗೇಶ್‌ ಮತ್ತು ಮಂಜುನಾಥ್‌ ಅವರು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಪತಿ ಬಾಬು ಅವರಿಂದ 35 ಲಕ್ಷ ರೂ. ಪಡೆದಿದ್ದರು. ಈ ಹಣ ಹೊಂದಿಸಲು ಸಾಲ ಮಾಡಿದ್ದರು. ಈ ನಡುವೆ ಕೆಲಸವೂ ಸಿಗದೆ, ಸಾಲಬಾಧೆ ಹೆಚ್ಚಾಗಿ, ಮಾನಸಿಕವಾಗಿ ನೊಂದಿದ್ದ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿಯ ಡೆತ್‌ ನೋಟ್‌ ಆಧರಿಸಿ ದೂರು ನೀಡಿದ್ದರು.

ಆ ದೂರನ್ನು ಆಧರಿಸಿ ಕೆ. ಸುಧಾಕರ್‌, ನಾಗೇಶ್‌ ಮತ್ತು ಮಂಜುನಾಥ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ಗಳಾದ 108 (ಆತ್ಮಹತ್ಯೆಗೆ ಪ್ರಚೋದನೆ), 352 (ಉದ್ದೇಶಪೂರ್ವಕ ಅಪಮಾನ) 351(2) (ಕ್ರಿಮಿನಲ್ ಬೆದರಿಕೆ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‌ 3(2)(v) ಅಡಿ ಪ್ರಕರಣ ದಾಖಲಿಸಲಾಗಿದೆ. ಬಂಧನ ಭೀತಿಯಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಸಂಸದ ಸುಧಾಕರ್, ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಮನವಿ ಮಾಡಿದ್ದು, ಅರ್ಜಿ ಇತ್ಯರ್ಥವಾಗುವವರೆಗೆ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.

Related Articles

Comments (0)

Leave a Comment