ಮುಖ್ಯ ಕಾರ್ಯದರ್ಶಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಎಂಎಲ್ಸಿ ರವಿಕುಮಾರ್‌ ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್

ಬೆಂಗಳೂರು: “ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ರಾತ್ರಿ ಸರ್ಕಾರಕ್ಕೆ, ಹಗಲಿನ ವೇಳೆ ಸಿಎಂಗೆ ಕೆಲಸ ಮಾಡುತ್ತಾರೆ” ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ವಿಧಾನ ಪರಿಷತ್‌ ಮುಖ್ಯ ವಿಪ್‌ ಹಾಗೂ ಬಿಜೆಪಿ ಮುಖಂಡ ಎನ್‌. ರವಿಕುಮಾರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಆದೇಶಿಸಿರುವ ಹೈಕೋರ್ಟ್, ತನಿಖೆಗೆ ಸಹಕರಿಸುವಂತೆ ರವಿಕುಮಾರ್ ಅವರಿಗೆ ನಿರ್ದೇಶಿಸಿದೆ.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ನಾಗರತ್ನ ನೀಡಿದ ದೂರಿನ ಅನ್ವಯ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಎನ್. ರವಿಕುಮಾರ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿ, ಟ್ಯಾಬ್‌ ಮತ್ತು ಮೊಬೈಲ್‌ನಲ್ಲಿ ರವಿಕುಮಾರ್‌ ಅವರ ಹೇಳಿಕೆಯನ್ನು ವೀಕ್ಷಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಆದರೆ, ಅವರು ತನಿಖೆಗೆ ಸಹಕರಿಸಬೇಕು ಎಂದು ಆದೇಶಿಸಿತು. ಜತೆಗೆ, ಪ್ರತಿವಾದಿ ಸರ್ಕಾರಕ್ಕೆ ನೋಟಿಸ್‌ ಜಾರಿ, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.

ವಾದ-ಪ್ರತಿವಾದ:
ಇದಕ್ಕೂ ಮುನ್ನ ರವಿಕುಮಾರ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್‌ ಶ್ಯಾಮ್‌, ರವಿಕುಮಾರ್‌ ಅವರು ಮುಖ್ಯ ಕಾರ್ಯದರ್ಶಿಗೆ ಮೆಚ್ಚುಗೆ ಸೂಚಿಸಿ ಮಾತನಾಡಿದ್ದಾರೆಯೇ ಹೊರತು, ದೂರುದಾರರು ಅರ್ಥಮಾಡಿಕೊಂಡಿರುವ ರೀತಿಯಲ್ಲಿ ಅಲ್ಲ. ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆಕ್ಷೇಪಿಸಿದರು.

ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ ವಾದ ಮಂಡಿಸಿ, ರವಿಕುಮಾರ್‌ ಅವರಿಗೆ ಇಂಥ ಹೇಳಿಕೆ ನೀಡುವ ಚಾಳಿಯಿದೆ. ಈ ಹಿಂದೆ ಕಲಬುರಗಿಯ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದು ನಿಂದಿಸಿದ್ದರು. ಮತ್ತೊಬ್ಬರು ರವಿ ಎನ್ನುವವರು (ಸಿಟಿ ರವಿ) ಸದನದಲ್ಲೇ ಸಚಿವೆಯೊಬ್ಬರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದರು. ಇದಕ್ಕೆ ಯಾವುದೇ ವಿಶೇಷ ವಿನಾಯಿತಿ ನೀಡದೇ ಇದೇ ನ್ಯಾಯಾಲಯ ಅವರ ಅರ್ಜಿ ವಜಾಗೊಳಿಸಿತ್ತು. ತಡ ರಾತ್ರಿಯಲ್ಲಿ ಮಹಿಳೆ ಮುಕ್ತವಾಗಿ ಓಡಾಡುವ ಸಂದರ್ಭ ನಿರ್ಮಾಣವಾದಾಗ ಮಾತ್ರ ಸ್ವಾತಂತ್ರ್ಯ ಜಾರಿಗೆ ಬಂದಂತೆ, ಎಂದು ಹೇಳಿದ್ದ ಗಾಂಧಿ ಪ್ರತಿಮೆಯ ಕೆಳಗೆ ನಿಂತು ರಾಜ್ಯದ ಅತ್ಯುನ್ನತ ಅಧಿಕಾರಿಯ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂದರು.

ಪೊಲೀಸರ ಮನೋಬಲಕ್ಕೆ ಪೆಟ್ಟು:
ವಿಡಿಯೊ ಪರಿಶೀಲಿಸಿದ ನ್ಯಾಯಪೀಠ, “ಅಂಥದ್ದೇನೂ ಕಾಣುತ್ತಿಲ್ಲ. ತಡೆ ನೀಡಲಾಗುವುದು. ದೂರುದಾರೆ ಸಂತ್ರಸ್ತೆಯಲ್ಲವಲ್ಲ” ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಬೆಳ್ಳಿಯಪ್ಪ, ಎಲ್ಲ ಪ್ರಕರಣಗಳಲ್ಲೂ ಈ ರೀತಿ ತಡೆ ನೀಡುತ್ತಾ ಹೋದರೆ ಪೊಲೀಸರ ಮನೋಬಲ ಏನಾಗಬೇಕು? ಯಾರು ಬೇಕಾದರೂ ಕ್ರಿಮಿನಲ್‌ ಕಾನೂನು ಜಾರಿಗೊಳಿಸಬಹುದು. ರವಿಕುಮಾರ್‌ ವಿಚಾರಣಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಅಲ್ಲೇ ಹೋಗಲಿ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಹೈಕೋರ್ಟ್‌ ಮುಂದೆ ಬಂದಿದ್ದಾರೆ. ಇದು ಸಂಜ್ಞೇ ಅಪರಾಧವಾಗಿದೆ. ಸುದ್ದಿ ವಾಹಿನಿಯ ಸಂಪಾದಕರು, ಸ್ಥಳದಲ್ಲಿದ್ದ ಪೊಲೀಸರು, ಮುಖ್ಯ ಕಾರ್ಯದರ್ಶಿ ಹೇಳಿಕೆಯನ್ನೂ ದಾಖಲಿಸಿ, ರವಿಕುಮಾರ್‌ ಅವರ ಹೇಳಿಕೆಯ ಉದ್ದೇಶವನ್ನು ಪತ್ತೆ ಮಾಡಲಾಗುವುದು. ಆದ್ದರಿಂದ, ತಡೆ ನೀಡಬಾರದು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಅರುಣ್‌ ಶ್ಯಾಮ್‌, ರವಿಕುಮಾರ್‌ ಅವರ ಮನೆಯ ಮುಂದೆ ಹತ್ತು ಮಂದಿ ಪೊಲೀಸರು ಬಂಧನಕ್ಕೆ ಕಾದು ಕೂತಿದ್ದಾರೆ. ಇದು ತಡೆಯಾಜ್ಞೆ ನೀಡಬೇಕಾದ ಮತ್ತು ಅರ್ಜಿದಾರರಿಗೆ ರಕ್ಷಣೆ ನೀಡಲೇಬೇಕಾದ ಪ್ರಕರಣವಾಗಿದೆ. ಇದಕ್ಕೆ ಸಂಬಂಧಿತ ತೀರ್ಪುಗಳನ್ನು ತೋರಿಸಲಾಗುವುದು. ತಡೆ ನೀಡಿದರೆ ಪೊಲೀಸರ ಮನೋಬಲ ಕುಂದುತ್ತದೆ ಎನ್ನುವುದಾದರೆ, ಮುಖ್ಯಮಂತ್ರಿಗಳು ಬೆಳಗಾವಿಯಲ್ಲಿ ಎಸಿಪಿಗೆ ಕೈ ಎತ್ತಿದಾಗ ಏನು ಆಗಲಿಲ್ಲವೇ? ಎಂದು‌ ವ್ಯಂಗ್ಯವಾಡಿದರು.

Related Articles

Comments (0)

Leave a Comment