ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲದಿದ್ದರೂ ಚಿನ್ನಸ್ವಾಮಿ ಸ್ಟೇಡಿಯಂಗೆ ವಿದ್ಯುತ್ ಸಂಪರ್ಕ; ಬೆಸ್ಕಾಂ ವಿರುದ್ಧ ಹೈಕೋರ್ಟ್ ಕಿಡಿ
- by Prashanth Basavapatna
- June 30, 2025
- 255 Views

ಬೆಂಗಳೂರು: ಅಗ್ನಿ ಸುರಕ್ಷತಾ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳದಿದ್ದರೂ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿದ್ಯುತ್ ಸಂಪರ್ಕ ನೀಡಿದ ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆಯನ್ನು (ಬೆಸ್ಕಾಂ) ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಈ ತಪ್ಪಿಗೆ ಬೆಸ್ಕಾಂ ಅನ್ನೇ ಸಂಪೂರ್ಣ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದೆ.
ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸಂಬಂಧ ಬೆಸ್ಕಾಂ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ಹಾಜರಾಗಿ, ಬೆಸ್ಕಾಂ ನೋಟಿಸ್ ಕೊಟ್ಟು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಕೆಲವೊಂದು ಬೆಳವಣಿಗೆಗಳು ನಡೆದಿವೆ. ಜೂನ್ 12ಕ್ಕೆ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಡಿತದ ನೋಟಿಸ್ ಕೊಟ್ಟು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ಜೂನ್ 17ಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅದೇ ದಿನ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲಾಗಿದೆ ಎಂದರು.
ಮತ್ತೆ ವಿದ್ಯುತ್ ಸಂಪರ್ಕ ಕೊಟ್ಟಿದ್ದೇಕೆ?
ಈ ವಿಚಾರ ಗಮನಿಸಿದ ನ್ಯಾಯಾಲಯ ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತದ ನೋಟಿಸ್ ಕೊಟ್ಟು, ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು. ಆದರೆ, ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ ಎಂದು ಗೊತ್ತಿದ್ದರೂ ಮತ್ತೆ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಹೇಗೆ? ಈ ವಿಚಾರದಲ್ಲಿ ಸಂಪೂರ್ಣವಾಗಿ ಬೆಸ್ಕಾಂ ಅನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತು.
ಬೆಸ್ಕಾಂ ಪರ ವಕೀಲರು, ಕೆಎಸ್ಸಿಎ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಬೇಕಿದ್ದರೆ ಅದನ್ನು ಪುನಃ ಕಡಿತಗೊಳಿಸಲಾಗುವುದು ಎಂದು ನ್ಯಾಯಾಲಯಕ್ಕೆೆ ತಿಳಿಸಿದರು.
ಶೂನ್ಯ ಸಹನೆ ಇರಬೇಕು:
ಅದಕ್ಕೆ ನ್ಯಾಯಪೀಠ, ಅಗ್ನಿ ಸರುಕ್ಷತಾ ನಿರಾಕ್ಷೇಪಣಾ ಪತ್ರ ಸರ್ಕಾರ ನೀಡಬೇಕು. ಸರ್ಕಾರವನ್ನು ಕೇಳದೇ ನಿಮ್ಮಷ್ಟಕ್ಕೆ ನೀವೇ ವಿದ್ಯುತ್ ಸಂಪರ್ಕ ಕೊಟ್ಟುಬಿಟ್ಟರೆ ನ್ಯಾಯಾಲಯ ಸುಮ್ಮನಿರುವುದಿಲ್ಲ. ಈಗಾಗಲೇ ಆಗಿರುವ ಅನಾಹುತ ಸಾಕಷ್ಟಿದೆ. ಮತ್ತೇನಾದರೂ ಅವಘಡ ಸಂಬಂಭವಿಸಿದರೆ ಯಾರು ಹೊಣೆ? ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದಿದ್ದರೆ ಸ್ಟೇಡಿಯಂ ಕತ್ತಲಲ್ಲಿ ಇರಲಿ ಬಿಡಿ. ಇರುವ ಆಯ್ಕೆ ಒಂದೇ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು, ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು ಅಷ್ಟೇ. ಅಪಾಯಗಳ ವಿಚಾರದಲ್ಲಿ ಶೂನ್ಯ ಸಹನೆ ಬೇಕು ಎಂದು ತೀಕ್ಷ್ಣವಾಗಿ ನುಡಿಯಿತು.
ಕೆಎಸ್ಸಿಎ ಪರ ವಕೀಲರು, ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಬಲವಂತದ ಕ್ರಮ ಕೈಗೊಳ್ಳದಂತೆ ಬೆಸ್ಕಾಂ, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೂಚಿಸಬೇಕು ಎಂದು ಮನವಿ ಮಾಡಿದರು. ಈ ವಿಚಾರದಲ್ಲಿ ಏನನ್ನೂ ಹೇಳುವುದಿಲ್ಲ ಎಂದು ನ್ಯಾಯಪೀಠ ಹೇಳಿತು.
ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆಸ್ಕಾಂ ಪರ ವಕೀಲರು ಮೌಖಿಕ ಭರವಸೆ ನೀಡಿದರು. ಅದಕ್ಕೆ, ಮೊದಲು ಸರ್ಕಾರವನ್ನು ಕೇಳಿ, ಒಂದೊಮ್ಮೆ ಸರ್ಕಾರ ಹೇಳಿದರೆ ಆಯಿತು. ಇಲ್ಲದಿದ್ದರೆ ಆಗಿರುವ ತಪ್ಪಿಗೆ ನಿಮ್ಮನ್ನೇ (ಬೆಸ್ಕಾಂ) ಹೊಣೆ ಮಾಡಲಾಗುವುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.
ವಾದ-ಪ್ರತಿವಾದ ಆಲಿಸಿದ ಬಳಿಕ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ), ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು.
ಪ್ರಕರಣವೇನು?
ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಇಲಾಖೆಯ 2023ರ ಮೇ 11ರ ಸಲಹಾ ಪತ್ರದಲ್ಲಿ ಸೂಚಿಸಲಾದ ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳದೇ ಇರುವುದರಿಂದ 2011ರ ಜುಲೈ 7ರಂದು ಸ್ಟೇಡಿಯಂಗೆ ನೀಡಲಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಇಲಾಖೆ ಮಹಾ ನಿರ್ದೇಶಕರು 2025ರ ಜೂನ್ 10ರಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ಅದರಂತೆ, ಜೂನ್ 12ರಂದು ಕೆಎಸ್ಸಿಎಗೆ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತದ ನೋಟಿಸ್ ಜಾರಿಗೊಳಿಸಿತ್ತು. ಅದನ್ನು ಪ್ರಶ್ನಿಸಿ ಕ್ರಿಕೆಟ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದೆ.
Related Articles
Thank you for your comment. It is awaiting moderation.
Comments (0)