ಇನ್ಫೊಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ವಿರುದ್ಧದ ಜಾತಿ ನಿಂದನೆ ಪ್ರಕರಣ ರದ್ದು

ಬೆಂಗಳೂರು: ಇನ್ಫೊಸಿಸ್‌ ಸಹ ಸಂಸ್ಥಾಪಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸದಸ್ಯರಾಗಿದ್ದ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣನ್‌ ಸೇರಿ 16 ಮಂದಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗಿದ್ದ ಎಫ್‌ಐಆರ್‌ ಮತ್ತದರ ಸಂಬಂಧಿತ ವಿಚಾರಣಾ ಪ್ರಕ್ರಿಯೆನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಜಾತಿ ತಾರತಮ್ಯ ನಡೆಸಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ಐಐಎಸ್‌ಸಿಯ ನಿವೃತ್ತ ಪ್ರಾಧ್ಯಾಪಕರಾದ ಡಿ. ಸಣ್ಣದುರ್ಗಪ್ಪ ದಾಖಲಿಸಿದ್ದ ಪ್ರಕರಣ ರದ್ದುಕೋರಿ ಕ್ರಿಸ್​ ಗೋಪಾಲಕೃಷ್ಣ, ಐಐಎಸ್‌ಸಿ ಮಾಜಿ ನಿರ್ದೇಶಕ ಪ್ರೊ. ಪಿ. ಬಲರಾಮ್ ಸೇರಿ 16 ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಮಾನ್ಯ ಮಾಡಿರುವ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಕಾನೂನು ಪ್ರಕ್ರಿಯೆಯ ದುರುಪಯೋಗ:
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದರೆ, ದೂರುದಾರರು ಈ ಹಿಂದೆ ಎರಡು ಬಾರಿ ದಾಖಲಿಸಿದ್ದ ದೂರಿನಲ್ಲಿರುವ ಅಂಶಗಳನ್ನೇ ಖಾಸಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರುದಾರರನ್ನು ಸೇವೆಯಿಂದ ತೊರೆಯಲು ಬೆದರಿಕೆ ಹಾಕಿದ್ದರು ಎನ್ನಲಾದ ವಕೀಲರಾದ ಪ್ರದೀಪ್​.ಎಸ್​ ಸಾಹುಕಾರ್ ಮತ್ತು ಅಭಿಲಾಷ್ ರಾಜು ಅವರನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿರುವುದು ಬಿಟ್ಟರೆ ಖಾಸಗಿ ದೂರಿನಲ್ಲಿ ಬೇರೆ ಆರೋಪಗಳಿಲ್ಲ. ಇದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ. ಸೇವೆಯಿಂದ ವಜಾಗೊಳಿಸಿದ ಸಂಬಂಧ ಒಂದೇ ರೀತಿಯ ಆರೋಪದಲ್ಲಿ ಮೂರು ದೂರುಗಳನ್ನು ದಾಖಲಿಸುವುದು ವಿನಾ ಕಾರಣ ಕಿರುಕುಳ ನೀಡಿದಂತಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸೇವೆಯಿಂದ ವಜಾಗೊಳಿಸಿರುವ ಕ್ರಮ ಮತ್ತು ಅದನ್ನು ರಾಜೀನಾಮೆಯನ್ನಾಗಿ ಪರಿಗಣಿಸಿರುವುದು ಸಿವಿಲ್​ ಪ್ರಕ್ರಿಯೆಯಾಗಿದ್ದು, ಅದನ್ನು ಕ್ರಿಮಿನಲ್ ಆರೋಪದಲ್ಲಿ ದೂರು ದಾಖಲಿಸುವುದಕ್ಕೆ ಸಾಧ್ಯವಿಲ್ಲ. ಜತೆಗೆ, ಅರ್ಜಿದಾರರ ವಿರುದ್ಧ ದಾಖಲಾಗಿರುವ ದೂರು ಪರಿಶೀಲಿಸಿದರೆ ಎಸ್‌ಸಿ-ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ-1989ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂಬ ಅಂಶ ಸ್ಪಷ್ಟವಾಗಲಿದೆ. ಆದ್ದರಿಂದ, ಅರ್ಜಿಯನ್ನು ಪುರಸ್ಕರಿಸಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಜತೆಗೆ, ದೂರುದಾರ ಸಣ್ಣದುರ್ಗಪ್ಪ ವಿರುದ್ಧ ಕ್ರಿಮಿನಲ್​ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸುವ ಸಂಬಂಧ ರಾಜ್ಯ ಅಡ್ವೋಕೇಟ್​ ಜನರಲ್​ ಅವರಿಂದ ಅನುಮತಿ ಕೋರಲು ಅರ್ಜಿದಾರರಿಗೆ ನ್ಯಾಯಾಲಯ ಸ್ವಾತಂತ್ರ್ಯ ಕಲ್ಪಿಸಿದೆ.

Related Articles

Comments (0)

Leave a Comment