ವಕ್ಫ್ ಮಂಡಳಿಗೆ ಮುಸ್ಲಿಂ ವಿವಾಹ ನೋಂದಣಿ ಅಧಿಕಾರ; ಉತ್ತರಿಸಲು ಸರ್ಕಾರಕ್ಕೆ ಕೊನೇ ಅವಕಾಶ ನೀಡಿದ ಹೈಕೋರ್ಟ್
- by Jagan Ramesh
- April 22, 2025
- 304 Views

ಬೆಂಗಳೂರು: ಮುಸ್ಲಿಮರ ವಿವಾಹ ನೋಂದಣಿ ಹಾಗೂ ಮುಸ್ಲಿಂ ದಂಪತಿಗೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಅಧಿಕಾರವನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ವಹಿಸಿದ್ದು ಹೇಗೆ ಎಂಬ ಬಗ್ಗೆ ಉತ್ತರಿಸಲು ಸರ್ಕಾರಕ್ಕೆ ಕೊನೇ ಅವಕಾಶ ಕಲ್ಪಿಸಿರುವ ಹೈಕೋರ್ಟ್, ಜೂನ್ 11ರವರೆಗೆ ಗಡುವು ನೀಡಿದೆ.
ಮುಸ್ಲಿಂ ಸಮುದಾಯದ ವಿವಾಹಿತ ದಂಪತಿಗೆ ವಿವಾಹ ನೋಂದಣಿ ಮಾಡುವ ಮತ್ತು ಪ್ರಮಾಣಪತ್ರ ನೀಡುವ ಅಧಿಕಾರವನ್ನು ರಾಜ್ಯ ವಕ್ಫ್ ಮಂಡಳಿಗೆ ನೀಡಿ ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆ 2023ರ ಸೆಪ್ಟೆಂಬರ್ 30ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಬೆಂಗಳೂರಿನ ಆಲಂ ಪಾಷಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ವಕ್ಫ್ ಮಂಡಳಿಗೆ ಅಧಿಕಾರ ವಹಿಸಿರುವ ಕುರಿತು ಉತ್ತರಿಸಲು ಮತ್ತೆ ಕಾಲವಕಾಶ ಕೇಳಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಈ ಹಿಂದೆ ಮೂರು ಬಾರಿ ಕಾಲಾವಕಾಶ ನೀಡಲಾಗಿತ್ತು. ಈಗ ಸರ್ಕಾರ ಮತ್ತೆ ಸಮಯ ಕೇಳುತ್ತಿದೆ. ಕೊನೆಯ ಬಾರಿ ಅವಕಾಶ ನೀಡಲಾಗುವುದು, ಜೂನ್ 11ರೊಳಗೆ ಸರ್ಕಾರ ಉತ್ತರ ನೀಡಬೇಕೆಂದು ತಾಕೀತು ಮಾಡಿತು. ಜತೆಗೆ, ಅಲ್ಪಸಂಖ್ಯಾತ ಇಲಾಖೆಯ ಆದೇಶವನ್ನು ಅಮಾನತಿನಲ್ಲಿಟ್ಟು 2024ರ ನವೆಂಬರ್ 11ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನೂ ನ್ಯಾಯಾಲಯ ವಿಸ್ತರಿಸಿತು.
ಅರ್ಜಿದಾರರ ಆಕ್ಷೇಪವೇನು?
ಮುಸ್ಲಿಂ ಸಮುದಾಯದ ವಿವಾಹಿತ ದಂಪತಿಗೆ ವಿವಾಹ ನೋಂದಣಿ ಮಾಡುವ ಮತ್ತು ವಿವಾಹ ಪ್ರಮಾಣಪತ್ರ ವಿತರಿಸುವ ಅಧಿಕಾರವನ್ನು ರಾಜ್ಯ ವಕ್ಫ್ ಮಂಡಳಿಗೆ ನೀಡಿ ಸರ್ಕಾರ ಹೊರಡಿಸಿರುವ ಆದೇಶ ವಕ್ಫ್ ಕಾಯ್ದೆ – 1995 ಹಾಗೂ ಸಂವಿಧಾನದ ಪರಿಚ್ಛೇದ 14ಕ್ಕೆ ತದ್ವಿರುದ್ಧವಾಗಿದೆ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಸರ್ಕಾರದ ಆದೇಶ ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)