ಸಿಎಂ ಸಿದ್ದರಾಮಯ್ಯ ನಿರಾಳ; ವರುಣಾ ಕ್ಷೇತ್ರದಿಂದ ಆಯ್ಕೆ ಅಸಿಂಧು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಮೈಸೂರಿನ ವರುಣಾ ವಿಧಾನಸಭೆ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಆಯ್ಕೆ ಅಸಿಂಧುಗೊಳಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಸಿದ್ದರಾಮಯ್ಯ ಅವರ ಆಯ್ಕೆ ಪ್ರಶ್ನಿಸಿ ವರುಣಾ ಹೋಬಳಿಯ ಕೂಡನಹಳ್ಳಿ ನಿವಾಸಿ ಕೆ.ಎಂ. ಶಂಕರ್ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಜಾಗೊಳಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಅರ್ಜಿದಾರರ ಆಕ್ಷೇಪವೇನು?
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ಗ್ಯಾರಂಟಿ ಯೋಜನೆಗಳು ಮೂಲಭೂತ ಹಕ್ಕುಗಳು ಮತ್ತು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿವೆ. ಆ ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆಯು ನೋಂದಾಯಿತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) ಪಕ್ಷದ ಪ್ರಣಾಳಿಕೆ ಅಲ್ಲ. ಅದು ಕೆಪಿಸಿಸಿಯ ಪ್ರಣಾಳಿಕೆಯಾಗಿದೆ. ಕೆಪಿಸಿಸಿ ನೋಂದಾಯಿತ ಪಕ್ಷವಲ್ಲ. ಆದ್ದರಿಂದ, ಅದರ ಹೆಸರಿನಲ್ಲಿ ರೂಪಿಸಿರುವ ಪ್ರಣಾಳಿಕೆ ಭ್ರಷ್ಟಾಚಾರಕ್ಕೆ ಸಮವಾಗಲಿದೆ. ಗ್ಯಾರಂಟಿ ಯೋಜನೆಗಳ ಕಾರ್ಡ್‌ಗೆ ಸಹಿ ಮಾಡಿರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ. ಸಿದ್ದರಾಮಯ್ಯನವರೇ ಪ್ರಣಾಳಿಕೆ ರೂಪಿಸಿ, ಪ್ರಚಾರ ಮಾಡಿದ್ದಾರೆ. ಆ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಆದ್ದರಿಂದ, ಅವರ ಆಯ್ಕೆ ಅಸಿಂಧುಗೊಳಿಸಬೇಕು. ಭ್ರಷ್ಟಾಚಾರದ ಮೂಲಕ ಚುನಾವಣೆ ಜಯಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿದ್ದರು.

ಸಿದ್ದರಾಮಯ್ಯ ವಾದವೇನು?
ಅರ್ಜಿಗೆ ಆಕ್ಷೇಪಿಸಿದ್ದ ಸಿದ್ದರಾಮಯ್ಯ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌, ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿರುದ್ಧ 11 ಆರೋಪಗಳನ್ನು ಮಾಡಲಾಗಿದೆ. ಅದರಲ್ಲಿ, ಚುನಾವಣಾ ವೆಚ್ಚದ ಬಗ್ಗೆ ಪ್ರಮುಖ ಆರೋಪವಾಗಿದೆ. ಆದರೆ, ಸಿದ್ದರಾಮಯ್ಯ ಅವರು ಚುನಾವಣಾ ವೆಚ್ಚದ ಮಿತಿ ಮೀರಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಅಥವಾ ಚುನಾವಣಾ ಆಯೋಗಕ್ಕೆ ದೂರು ನೀಡಿಲ್ಲ. ಚುನಾವಣೆಗೆ ಎಷ್ಟು ವೆಚ್ಚ ಮಾಡಲಾಗಿದೆ ಎಂಬುದು ಮುಖ್ಯವಾಗುತ್ತದೆ. ಆದರೆ, ಅದನ್ನು ಉಲ್ಲೇಖಿಸಿಲ್ಲ. ಗ್ಯಾರಂಟಿಗಳನ್ನು ಒಳಗೊಂಡ ಪ್ರಣಾಳಿಕೆ ಪಕ್ಷಕ್ಕೆ ಸೇರಿದ್ದು, ಅದು ಸಿದ್ದರಾಮಯ್ಯ ಅವರ ಚುನಾವಣಾ ವೆಚ್ಚಕ್ಕೆ ಹೇಗೆ ಸೇರುತ್ತದೆ ಎಂದು ಪ್ರಶ್ನಿಸಿದ್ದರು.

ಸಿದ್ದರಾಮಯ್ಯ ಅವರು ಚುನಾವಣೆಗೆ ಎಷ್ಟು ಹಣ ವೆಚ್ಚ ಮಾಡಿದ್ದಾರೆ, ಯಾವಾಗ, ಹೇಗೆ, ಎಲ್ಲಿ ವೆಚ್ಚ ಮಾಡಿದ್ದಾರೆ ಎಂಬುದನ್ನು ತೋರಿಸುವ ಸಣ್ಣ ಅಂಶವೂ ಅರ್ಜಿಯಲ್ಲಿಲ್ಲ. ಚುನಾವಣಾ ವೆಚ್ಚ ಮಿತಿ ಮೀರಿದೆ ಎಂಬುದಕ್ಕೆ ಪೂರಕ ದತ್ತಾಂಶವಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ದುರುದ್ದೇಶಪೂರಿತ ಆರೋಪ ಮಾಡಲಾಗಿದೆ. ನಿರ್ದಿಷ್ಟ ವಿಚಾರ ಒಳಗೊಂಡಿರದ ಇದನ್ನು ಚುನಾವಣಾ ಅರ್ಜಿ ಎನ್ನಲಾಗದು. ಯಾವುದೇ ಪರಿಶೀಲನೆ ಇಲ್ಲ. ಪ್ರಮಾಣಪತ್ರ ಇಲ್ಲ. ಕೇವಲ ಸುಳ್ಳುಗಳನ್ನು ಅರ್ಜಿಯಲ್ಲಿ ತುಂಬಲಾಗಿದೆ. ಇದಕ್ಕಾಗಿ ಅರ್ಜಿದಾರರ ವಿರುದ್ದ ಕ್ರಮವಾಗಬೇಕು. ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಉಲ್ಲೇಖಿಸುವ ಅಂಶಗಳು ಭವಿಷ್ಯದಲ್ಲಿ ರಚನೆಯಾಗುವ ಸರ್ಕಾರದ ಭರವಸೆಗಳೇ ಹೊರತು ಅಭ್ಯರ್ಥಿಯ ವೈಯಕ್ತಿಕ ಭರವಸೆಗಳಲ್ಲ. ಪ್ರಣಾಳಿಕೆಯಲ್ಲಿನ ಭರವಸೆಗಳು ಚುನಾವಣಾ ಅಕ್ರಮ ಎನ್ನಲಾಗದು. ಆದ್ದರಿಂದ,‌ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

Related Articles

Comments (0)

Leave a Comment