ನಕಲಿ ವೈದ್ಯರ ಹಾವಳಿಗೆ ಹೈಕೋರ್ಟ್ ಕಳವಳ; ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ತಾಕೀತು
- by Jagan Ramesh
- April 16, 2025
- 115 Views

ಬೆಂಗಳೂರು: ಮುಗ್ಧ ಜನರನ್ನು ವಂಚಿಸುತ್ತಿರುವ ಹಾಗೂ ಅವರ ಜೀವಕ್ಕೆ ಅಪಾಯಕಾರಿಯಾಗಿರುವ ನಕಲಿ ವೈದ್ಯರು ನಡೆಸುತ್ತಿರುವ ಚಿಕಿತ್ಸಾಲಯಗಳನ್ನು (ಕ್ಲಿನಿಕ್) ಗುರುತಿಸಿ, ತಕ್ಷಣ ಕಾನೂನು ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡಿರುವ ಕೆ.ಆರ್. ಪೇಟೆಯ ಡಾ. ಎ.ಎ. ಮುರಳೀಧರ ಸ್ವಾಮಿ ಎಂಬಾತ ತಾನು ನಡೆಸುತ್ತಿರುವ ಲಕ್ಷ್ಮೀ ಕ್ಲಿನಿಕ್ ಅನ್ನು ಕರ್ನಾಟಕ ವೈದ್ಯಕೀಯ ಖಾಸಗಿ ಕಂಪನಿಗಳ ಕಾಯ್ದೆ-2007ರ ಅಡಿ ನೋಂದಾಯಿಸಲು ಆರೋಗ್ಯ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಇದೇ ವೇಳೆ, ವೈದ್ಯಕೀಯ ಕ್ಷೇತ್ರದಲ್ಲಿ ಅರ್ಹತೆ ಇಲ್ಲದ ವ್ಯಕ್ತಿಗಳು ನಡೆಸುತ್ತಿರುವ ಕ್ಲಿನಿಕ್‌ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ರವಾನಿಸಲು ರಿಜಿಸ್ಟ್ರಾರ್‌ಗೆ ನಿರ್ದೇಶಿಸಿರುವ ಹೈಕೋರ್ಟ್, ಈ ಸಂಬಂಧ ಕೈಗೊಂಡ ಕ್ರಮದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕೆಂದು ಸರ್ಕಾರಕ್ಕೆ ಸೂಚಿಸಿದೆ.
ನಾಯಿಕೊಡೆಗಳಂತೆ ಹಬ್ಬಿವೆ ನಕಲಿ ಕ್ಲಿನಿಕ್‌ಗಳು:
ತಮ್ಮನ್ನು ತಾವು ವೈದ್ಯರೆಂದು ಬಿಂಬಿಸಿಕೊಳ್ಳುವ ನಕಲಿ ವೈದ್ಯರು, ದೂರದ ಪ್ರದೇಶಗಳಲ್ಲಿ ಚಿಕಿತ್ಸಾಲಯಗಳನ್ನು ತೆರೆದು ಅಲ್ಲಿನ ಜನರನ್ನು ವಂಚಿಸುವುದರ ಮೂಲಕ ಅಮಾಯಕ ಗ್ರಾಮೀಣ ಜನರ ಜೀವಕ್ಕೆ ಅಪಾಯ ಉಂಟುಮಾಡುತ್ತಿದ್ದಾರೆ. ನಕಲಿ ವೈದ್ಯರ ಕ್ಲಿನಿಕ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಆದರೂ, ಯಾವುದೇ ಕ್ರಮ ಕೈಗೊಳ್ಳದೆ, ಅಂತಹ ಕ್ಲಿನಿಕ್‌ಗಳ ಬಗ್ಗೆ ರಾಜ್ಯ ಸರ್ಕಾರ ಎಂತಹ ಅಜ್ಞಾನದಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ತಕ್ಷಣವೇ ನಕಲಿ ಚಿಕಿತ್ಸಾಲಯಗಳನ್ನು ಗುರುತಿಸುವುದು ಮತ್ತು ಕಾನೂನಿನ ಪ್ರಕಾರ ಅವುಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.
ಒನ್ ಮ್ಯಾನ್ ಕ್ಲಿನಿಕ್:
ಅರ್ಜಿಯಲ್ಲಿನ ವಿವರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿದಾರರು ತಮ್ಮನ್ನು ತಾವು ವೈದ್ಯ ಎಂದು ಹೇಳಿಕೊಂಡಿದ್ದಾರೆ. ಅವರು ಲಕ್ಷ್ಮೀ ಕ್ಲಿನಿಕ್‌ನ ಮಾಲೀಕರು, ಅವರೇ ನಿರ್ವಾಹಕರು, ಅವರೇ ಪೂರ್ಣಕಾಲಿಕ ಉದ್ಯೋಗಿಯೂ ಆಗಿದ್ದಾರೆ. ಕ್ಲಿನಿಕ್‌ನಲ್ಲಿ ಬೇರೆ ಯಾವುದೇ ಸಿಬ್ಬಂದಿ ಇಲ್ಲ. ಇದೆಲ್ಲವನ್ನೂ ಗಮನಿಸಿದರೆ ಅರ್ಜಿದಾರರು ಒನ್ ಮ್ಯಾನ್ ಕ್ಲಿನಿಕ್ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಅರ್ಹತಾ ಪ್ರಮಾಣಪತ್ರವೇ ಇಲ್ಲ:
ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಯಾವುದೇ ವೈದ್ಯಕೀಯ ವಿಭಾಗದಲ್ಲಿ ಅಧ್ಯಯನ ಮಾಡಿರುವ ಅರ್ಹತೆ ತೋರಿಸುವ ಪ್ರಮಾಣಪತ್ರಗಳನ್ನು ಸಲ್ಲಿಸಲು ಅರ್ಜಿದಾರರು ವಿಫಲರಾಗಿದ್ದಾರೆ. ಅರ್ಜಿದಾರರ ಪರ ಹಾಜರಾಗಿದ್ದ ವಕೀಲರು, ಅರ್ಜಿದಾರರು ಕೇವಲ ಎಸ್‌ಎಸ್‌ಎಲ್‌ಸಿವರೆಗೆ ಓದಿದ್ದಾರೆ ಮತ್ತು ಕಾಯ್ದೆ ಅಥವಾ ನಿಯಮಗಳಡಿಯಲ್ಲಿ ನೋಂದಣಿಗೆ ಹಕ್ಕನ್ನು ನೀಡುವ ಆಯುರ್ವೇದ, ಅಲೋಪತಿ ಅಥವಾ ಯುನಾನಿ ಸೇರಿ ಯಾವುದೇ ವಿಭಾಗದಲ್ಲಿ ಅರ್ಹತೆ ಹೊಂದಿಲ್ಲ ಎಂಬ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.
ಅರ್ಜಿದಾರರು ಹೊಂದಿರುವ ಏಕೈಕ ಪ್ರಮಾಣಪತ್ರವೆಂದರೆ ಭಾರತೀಯ ಪರ್ಯಾಯ ಔಷಧ ಮಂಡಳಿ 2001ರ ಜನವರಿ 9ರಂದು ನೀಡಿದೆ ಎಂದು ಹೇಳಲಾದ ಪ್ರಮಾಣಪತ್ರ. ಅದರಲ್ಲಿ ಯಾವುದೇ ಅರ್ಹತೆಯನ್ನು ಸೂಚಿಸದ ಕಾರಣ ಪ್ರಮಾಣಪತ್ರವೂ ವಿಶ್ವಾಸಾರ್ಹವಾಗಿಲ್ಲ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಮಾತ್ರಕ್ಕೆ ಅರ್ಜಿದಾರರು ತಮ್ಮನ್ನು ತಾವು ವೈದ್ಯ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಅರ್ಜಿದಾರರು ಕೋರಿರುವ ಪರಿಹಾರ ನೀಡಲಾಗದು ಎಂದಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
Related Articles
Thank you for your comment. It is awaiting moderation.
Comments (0)