- ಟ್ರಯಲ್ ಕೋರ್ಟ್
- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 28
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 41 ಲಕ್ಷಕ್ಕೂ ಅಧಿಕ ಪ್ರಕರಣಗಳ ವಿಲೇವಾರಿ; 2,345 ಕೋಟಿ ರೂ. ಪರಿಹಾರ
- by Jagan Ramesh
- March 11, 2025
- 815 Views

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ಎಲ್ಎಸ್ಎ) ವತಿಯಿಂದ ರಾಜ್ಯದಾದ್ಯಂತ ಮಾರ್ಚ್ 8ರಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳೂ ಸೇರಿ 41 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದ್ದು, ಒಟ್ಟು 2,345 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ.
ಹೈಕೋರ್ಟ್ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಅವರು ಲೋಕ ಅದಾಲತ್ನಲ್ಲಿ ರಾಜಿಯಾದ ಪ್ರಕರಣಗಳು ಹಾಗೂ ಪರಿಹಾರದ ಅಂಕಿ-ಅಂಶಗಳ ಮಾಹಿತಿ ನೀಡಿದರು.
ಹೈಕೋರ್ಟ್ನ ಬೆಂಗಳೂರಿನ 5, ಧಾರವಾಡದ 4 ಮತ್ತು ಕಲಬುರಗಿಯ 2 ಪೀಠಗಳು ಹಾಗೂ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 994 ಪೀಠಗಳು ಸೇರಿ ಒಟ್ಟು 1,005 ಪೀಠಗಳು ಅದಾಲತ್ ನಡೆಸಿ ನ್ಯಾಯಾಲಯದಲ್ಲಿ ಬಾಕಿಯಿದ್ದ 2,59,270 ಪ್ರಕರಣಗಳು ಮತ್ತು 39,22,498 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 41,81,768 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಮೂಲಕ ಒಟ್ಟು 2,345 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಈ ಬಾರಿಯ ಅದಾಲತ್ನಲ್ಲಿ 5 ವರ್ಷ ಮತ್ತು ಅದಕ್ಕೂ ಹಳೆಯ 1,457 ಪ್ರಕರಣಗಳು, 10 ವರ್ಷ ಮತ್ತು ಅದಕ್ಕೂ ಹಳೆಯ 212 ಪ್ರಕರಣಗಳು ಹಾಗೂ 15 ವರ್ಷ ಮತ್ತು ಅದಕ್ಕೂ ಹಳೆಯ 37 ಪ್ರಕರಣಗಳು ಮತ್ತು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ 28 ವರ್ಷಗಳ ಹಳೆಯ ಕ್ರಿಮಿನಲ್ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿರುವುದು ವಿಶೇಷವಾಗಿದೆ. ಮತ್ತೊಂದು ವಿಶೇಷವೆಂದರೆ 1,540 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಂಡಿದ್ದಾರೆ ಎಂದು ನ್ಯಾಯಮೂರ್ತಿ ಕಾಮೇಶ್ವರ ರಾವ್ ಮಾಹಿತಿ ನೀಡಿದರು.
ಮತ್ತೆ ಒಂದಾದ 355 ದಂಪತಿ:
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲು ಉತ್ತೇಜಿಸಲಾಗಿತ್ತು. ಅದರಂತೆ, ಈ ಬಾರಿಯ ಅದಾಲತ್ನಲ್ಲಿ ಒಟ್ಟು 1,966 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ದೂರವಾಗಿದ್ದ 355 ದಂಪತಿಗಳು ರಾಜೀ ಸಂಧಾನದ ಮೂಲಕ ಮತ್ತೆ ಒಂದುಗೂಡಿದ್ದಾರೆ ಎಂದು ನ್ಯಾಯಮೂರ್ತಿಗಳು ಸಂತಸ ವ್ಯಕ್ತಪಡಿಸಿದರು.
ಇತ್ಯರ್ಥಗೊಂಡ ಪ್ರಮುಖ ಪ್ರಕರಣಗಳು:
ಅದಾಲತ್ನಲ್ಲಿ 3,247 ವಿಭಾಗ ದಾವೆಗಳನ್ನು ವಿಲೇವಾರಿ ಮಾಡಲಾಗಿದ್ದು, 4,204 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಿ 268 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. 11,408 ಚೆಕ್ ಬೌನ್ಸ್ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 455 ಎಲ್ಎಸಿ ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, 123 ಕೋಟಿ ರೂ. ಪರಿಹಾರ ಕಲ್ಪಿಸಲಾಗಿದೆ. 784 ಎಂವಿಸಿ ಅಮಲ್ಜಾರಿ ಪ್ರಕರಣಗಳನ್ನು 69 ಕೋಟಿ ರೂ. ಪರಿಹಾರ ಮೊತ್ತಕ್ಕೆ ಇತ್ಯರ್ಥಪಡಿಸಲಾಗಿದೆ. ಜತೆಗೆ, 3,279 ಇತರ ಅಮಲ್ಜಾರಿ ಪ್ರಕರಣಗಳನ್ಮು ಇತ್ಯರ್ಥಪಡಿಸಲಾಗಿದ್ದು, 109 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. 67 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳು ಇತ್ಯರ್ಥ ಪಡಿಸಿದ್ದು 2.59 ಕೋಟಿ ರೂ. ಪರಿಹಾರ ನೀಡಲಾಗಿದೆ. ರಿಯಲ್ ಎಸ್ಟೇಟ್ಗೆ ಸಂಬಂಧಿಸಿದಂತೆ ರೇರಾ ಮುಂದೆ ಬಾಕಿಯಿದ್ದ 40 ಪ್ರಕರಣಗಳನ್ನು 2.6 ಕೋಟಿ ರೂ.ಗಳಿಗೆ ವಿಲೇವಾರಿ ಮಾಡಲಾಗಿದೆ.
ಅದಾಲತ್ನಲ್ಲಿ ವಿಲೇವಾರಿಯಾದ ವಿಶೇಷ ಪ್ರಕರಣಗಳು:
- ಸಾಲ ವಸೂಲಾತಿ ನ್ಯಾಯಮಂಡಳಿಯಲ್ಲಿನ 411 ಪ್ರಕರಣಗಳು 195 ಕೋಟಿ ರೂ. ಪರಿಹಾರ ಮೊತ್ತಕ್ಕೆ ಇತ್ಯರ್ಥ.
- ಬೆಂಗಳೂರು ನಗರ ಜಿಲ್ಲೆಯ ಲಘು ವ್ಯಾಜ್ಯಗಳ ನ್ಯಾಯಾಲಯದ (ಸಿಸಿಎಚ್-1) ಎಂವಿಸಿ ಪ್ರಕರಣವೊಂದರಲ್ಲಿ 1.20 ಕೋಟಿ ರೂ. ಪರಿಹಾರ.
- ಸಿಸಿಚ್-25ರಲ್ಲಿನ ಪ್ರಕರಣವೊಂದು 1.80 ಕೋಟಿ ರೂ. ಹಾಗೂ ಸಿಸಿಎಚ್-4ರಲ್ಲಿನ ಪ್ರಕರಣವೊಂದು 1.49 ಕೋಟಿ ರೂ. ಪರಿಹಾರ ಮೊತ್ತಕ್ಕೆ ವಿಲೇವಾರಿ.
- ಬೆಂಗಳೂರು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಚೆಕ್ಬೌನ್ಸ್ ಪ್ರಕರಣಗಳು ಕ್ರಮವಾಗಿ 3 ಕೋಟಿ ಮತ್ತು 5.81 ಕೋಟಿ ರೂ. ಮೊತ್ತಕ್ಕೆ ಇತ್ಯರ್ಥ.
- ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ನಲ್ಲಿದ್ದ 28 ವರ್ಷ ಹಳೆಯ ಕ್ರಿಮಿನಲ್ ಪ್ರಕರಣದಲ್ಲಿ ರಾಜೀ ಸಂಧಾನ.
ಮೇ 10ಕ್ಕೆ ಮುಂದಿನ ಅದಾಲತ್:
ಈ ವರ್ಷದ ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಮೇ 10ರಂದು ನಿಗದಿಪಡಿಸಲಾಗಿದ್ದು, ವ್ಯಾಜ್ಯದಾರರು ಅದಾಲತ್ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬೇಕೆಂದು ನ್ಯಾಯಮೂರ್ತಿ ಕಾಮೇಶ್ವರ ರಾವ್ ಮನವಿ ಮಾಡಿದರು. ಕೆಎಸ್ಎಲ್ಎಸ್ಎ ಸದಸ್ಯ ಕಾರ್ಯದರ್ಶಿ ಎಂ.ಎಲ್. ರಘುನಾಥ, ಉಪ ಕಾರ್ಯದರ್ಶಿ ಎಂ. ಶ್ರೀಧರ್ ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)