ದರ್ಶನ್ ಜಾಮೀನು ಷರತ್ತು ಸಡಿಲ; ದೇಶಾದ್ಯಂತ ಪ್ರಯಾಣಕ್ಕೆ ಅಸ್ತು, ವಿದೇಶ ಪ್ರಯಾಣಕ್ಕೆ ಅನುಮತಿ ಕಡ್ಡಾಯವೆಂದ ಹೈಕೋರ್ಟ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌‌ಗೆ ಜಾಮೀನು ನೀಡುವ ಸಂದರ್ಭದಲ್ಲಿ ವಿಚಾರಣಾ‌‌ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರ ಹೋಗದಂತೆ ವಿಧಿಸಿದ್ದ ಷರತ್ತನ್ನು ಹೈಕೋರ್ಟ್‌ ಸಡಿಲಿಸಿದೆ. ಆದರೆ, ವಿದೇಶ ಪ್ರಯಾಣ ಮಾಡುವಾಗ ಕಡ್ಡಾಯವಾಗಿ ಸಕ್ಷಮ ನ್ಯಾಯಾಲಯದ ಅನುಮತಿ ಪಡೆಯಬೇಕೆಂದು ಆದೇಶಿಸಿದೆ.

ಜಾಮೀನು ಷರತ್ತು ಸಡಿಲಿಕೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಕಲಬುರಗಿಯಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ದರ್ಶನ್ ಅವರಿಗೆ ದೇಶದಾದ್ಯಂತ ಪ್ರಯಾಣಿಸಲು ಅನುಮತಿ ನೀಡಿತಲ್ಲದೆ, ಅರ್ಜಿದಾರರು ಯಾವುದೇ ಕಾರಣಕ್ಕೆ ವಿದೇಶ ಪ್ರಯಾಣ ಮಾಡಬೇಕಾದಲ್ಲಿ ಕಡ್ಡಾಯವಾಗಿ ಸಕ್ಷಮ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂಬ ಮಟ್ಟಿಗೆ ಜಾಮೀನು ಷರತ್ತಿನಲ್ಲಿ ಮಾರ್ಪಾಡು ಮಾಡಿ ಆದೇಶಿಸಿತು.

ವಿಚಾರಣೆ ವೇಳೆ ವಾದ ಮಂಡಿಸಿದ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್, ಅರ್ಜಿದಾರರು ಹೆಸರಾಂತ ನಟರಾಗಿದ್ದು, ಮೈಸೂರು ನಿವಾಸಿಯಾಗಿದ್ದಾರೆ. ವೈಯಕ್ತಿಕ ಹಾಗೂ ಆರೋಗ್ಯದ ಕಾರಣಕ್ಕಾಗಿ ಅವರು ಬೆಂಗಳೂರಿನಿಂದ ಹೊರ ಹೋಗಬೇಕಾಗುತ್ತದೆ. ಕೊಲೆ ಪ್ರಕರಣದಲ್ಲಿ ಜಾಮೀನು ನೀಡುವಾಗ ಸಕ್ಷಮ ನ್ಯಾಯಾಲಯದ ಅನುಮತಿ ಇಲ್ಲದೇ ವ್ಯಾಪ್ತಿ ತೊರೆಯುವಂತಿಲ್ಲ ಎಂದು ಷರತ್ತು ವಿಧಿಸಲಾಗಿದ್ದು, ಅದರಿಂದ ಅರ್ಜಿದಾರರಿಗೆ ತೊಂದರೆಯಾಗುತ್ತಿದೆ. ಪ್ರತಿ ಬಾರಿಯೂ ಅವರು ಸಕ್ಷಮ ನ್ಯಾಯಾಲಯಕ್ಕೆ ತೆರಳಿ ಅನುಮತಿ ಕೋರಲು ಕಷ್ಟವಾಗುತ್ತಿದೆ. ದರ್ಶನ್‌ ಅವರು ರಾಜ್ಯವಲ್ಲದೇ ವಿದೇಶಕ್ಕೂ ಪ್ರಯಾಣಿಸುವ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್‌ ಅವರು, ವಿದೇಶ ಪ್ರಯಾಣ ಕೈಗೊಳ್ಳುವಾಗ ದರ್ಶನ್‌ ಸಕ್ಷಮ ನ್ಯಾಯಾಲಯದ ಅನುಮತಿ ಕೋರಬೇಕು ಎಂಬ ಮಟ್ಟಿಗೆ ಜಾಮೀನು ಷರತ್ತು ಮಾರ್ಪಡಿಸಬಹುದು ಎಂದರು.

Related Articles

Comments (0)

Leave a Comment