ನಕಲಿ ವೇತನ ಪ್ರಮಾಣಪತ್ರ ಸಲ್ಲಿಸಿ ಎಸ್‌ಬಿಎಂಗೆ ವಂಚನೆ ಪ್ರಕರಣ: ಕೃಷ್ಣಯ್ಯ ಶೆಟ್ಟಿ ಜೈಲು ಶಿಕ್ಷೆ ಅಮಾನತಿನಲ್ಲಿರಿಸಿದ ಹೈಕೋರ್ಟ್

ಬೆಂಗಳೂರು: ನಕಲಿ ವೇತನ ಪ್ರಮಾಣಪತ್ರಗಳನ್ನು ಸಲ್ಲಿಸಿ ಬ್ಯಾಂಕ್‌ನಿಂದ 7 ಕೋಟಿ 17 ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರಿಗೆ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಅಮಾನತಿನಲ್ಲಿರಿಸಿದೆ.

ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ಪರಿಗಣಿಸಿ 3 ವರ್ಷ ಜೈಲು ಶಿಕ್ಷೆ ವಿಧಿಸಿ 2025ರ ಫೆಬ್ರವರಿ 6ರಂದು ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಕೃಷ್ಣಯ್ಯ ಶೆಟ್ಟಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಇದಕ್ಕೂ ಮುನ್ನ ಕೃಷ್ಣಯ್ಯ ಶೆಟ್ಟಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹಾಜರಾಗಿ, ಮೇಲ್ಮನವಿದಾರರಿಗೆ ವಿಶೇಷ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೊಂದು ವಂಚನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣವಾಗಿದ್ದು, ಮೇಲ್ಮನವಿ ಕುರಿತು ನ್ಯಾಯಾಲಯ ದೀರ್ಘವಾಗಿ ವಾದ ಆಲಿಸಬೇಕು. ಈಗಾಗಲೇ ಶಿಕ್ಷೆಯನ್ನು ವಿಶೇಷ ನ್ಯಾಯಾಲಯವೇ ಅಮಾನತಿನಲ್ಲಿರಿಸಿದೆ. ಆ ಆದೇಶವನ್ನು ಮುಂದುವರಿಸಬೇಕು ಎಂದು ಕೋರಿದರು.

ಮನವಿ ಪರಿಗಣಿಸಿದ ನ್ಯಾಯಪೀಠ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿ ಇರಿಸಿತು. ಇದೇ ವೇಳೆ, ದಂಡ ಮೊತ್ತವನ್ನು ಪ್ರಕರಣದ ಸಂತ್ರಸ್ತರಿಗೆ ಪರಿಹಾರವಾಗಿ ನೀಡುವಂತೆ ನಿರ್ದೇಶಿಸಿದ್ದ ವಿಶೇಷ ನ್ಯಾಯಾಲಯದ ತೀರ್ಪಿನ ಭಾಗಕ್ಕೂ ತಡೆಯಾಜ್ಞೆ ನೀಡಿದ ನ್ಯಾಯಪೀಠ, ವಿಶೇಷ ನ್ಯಾಯಾಲಯದಲ್ಲಿ ವಿಧಿಸಿರುವ ದಂಡ ಮೊತ್ತದಲ್ಲಿ 5.25 ಲಕ್ಷ ರೂ. ಗಳನ್ನು ಠೇವಣಿ ಇಡಬೇಕು ಎಂದು ಕೃಷ್ಣಯ್ಯ ಶೆಟ್ಟಿಗೆ ನಿರ್ದೇಶಿಸಿತು.

Related Articles

Comments (0)

Leave a Comment