ಬೆಂಗಳೂರು ಚಲನಚಿತ್ರೋತ್ಸವದ ಆಯ್ಕೆ ಪ್ರಕ್ರಿಯೆಗೆ ಆಕ್ಷೇಪ; ಸರ್ಕಾರ, ಚಲನಚಿತ್ರ ಅಕಾಡೆಮಿಗೆ ಹೈಕೋರ್ಟ್ ತುರ್ತು ನೋಟಿಸ್
- by Jagan Ramesh
- February 19, 2025
- 664 Views

ಬೆಂಗಳೂರು: ಮಾರ್ಚ್ 1ರಿಂದ ಆರಂಭವಾಗಲಿರುವ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆಯು ಪಕ್ಷಪಾತದಿಂದ ಕೂಡಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.
ಚಿತ್ರೋತ್ಸವದಲ್ಲಿ ತಮ್ಮ ಚಲನಚಿತ್ರಗಳನ್ನು ಪರಿಗಣಿಸಿರುವುದನ್ನು ತುಮಕೂರಿನ ಸಂವಿಧಾನ ಸಿನಿ ಕಂಬೈನ್ಸ್ ಸೇರಿ ಒಂಬತ್ತು ಪ್ರತ್ಯೇಕ ಸಂಸ್ಥೆಗಳ ನಿರ್ಮಾಪಕರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಅನಂತ್ ರಮಾನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದ ಮಂಡಿಸಿ, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಚಲನಚಿತ್ರಗಳನ್ನು (ಫೀಚರ್ ಫಿಲ್ಮ್) ಆಯ್ಕೆ ಮಾಡಲು ರಚಿಸಿದ್ದ ಸಮಿತಿಯು ಅರ್ಜಿದಾರರ ಚಿತ್ರಗಳನ್ನು ಕನಿಷ್ಠ ಪಕ್ಷ ವೀಕ್ಷಣೆಯನ್ನೂ ಮಾಡಿಲ್ಲ. ಫೆಬ್ರವರಿ 15ರಂದು ಸರ್ಕಾರ ಅಕಾಡೆಮಿಗೆ ಸಾಮಾನ್ಯ ಸಮಿತಿ ಸದಸ್ಯರನ್ನು ನೇಮಕ ಮಾಡಿದೆ. ಅದಕ್ಕೂ ಮೊದಲೇ ಚಿತ್ರಗಳನ್ನು ಆಯ್ಕೆ ಮಾಡಿರುವ ಅಧ್ಯಕ್ಷರ ನಡೆ ಪಕ್ಷಪಾತದಿಂದ ಕೂಡಿದೆ ಹಾಗೂ ದುರುದ್ದೇಶಪೂರ್ವಕವಾಗಿದೆ. ಆದ್ದರಿಂದ, ಚಲಚಿತ್ರಗಳನ್ನು ವೀಕ್ಷಿಸಲು ಹೊಸದಾಗಿ ಸಮಿತಿ ರಚಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಧ್ಯಂತರ ಪರಿಹಾರದ ಭಾಗವಾಗಿ ಚಲನಚಿತ್ರೋತ್ಸವವನ್ನು ಮುಂದೂಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈಗಾಗಲೇ ಚಲನಚಿತ್ರೋತ್ಸವಕ್ಕೆ ಎಲ್ಲ ಸಿದ್ಧತೆಯಾಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಲಾಗುವುದು ಎಂದು ಆದೇಶಿಸಿ, ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿತು.
ಪ್ರಕರಣವೇನು?
ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಮಾರ್ಚ್ 1ರಿಂದ 8ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಚಲನಚಿತ್ರ ಅಕಾಡೆಮಿಯು ಚಿತ್ರೋತ್ಸವದಲ್ಲಿ ಭಾಗಿಯಾಗಲು ಕನ್ನಡ, ಭಾರತ ಮತ್ತು ಏಷ್ಯಾ ಚಿತ್ರ ವಿಭಾಗದಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿತ್ತು. ಇದರಲ್ಲಿ ಅರ್ಜಿದಾರರು ಒಟ್ಟು ಒಂಬತ್ತು ಸಾವಿರ ರೂ. ಪಾವತಿಸಿ ಎಲ್ಲ ವಿಭಾಗಗಳಿಗೂ ಅರ್ಜಿ ಸಲ್ಲಿಸಿದ್ದರು. ಒಟ್ಟಾರೆ 136 ಸಿನಿಮಾಗಳಲ್ಲಿ ಪ್ರತಿ ವಿಭಾಗದಲ್ಲಿ ತಲಾ 14 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಆಯ್ಕೆ ಸಮಿತಿಯು ತಮ್ಮ ಚಿತ್ರಗಳನ್ನು ವಿಕ್ಷಿಸಿಯೇ ಇಲ್ಲ. ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆ ಪಕ್ಷಪಾತದಿಂದ ಕೂಡಿದೆ ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.
Comments (0)