ಕನಿಷ್ಠ ವೇತನ ಪರಿಷ್ಕರಣೆಗೆ ಕೋರಿದ ಅರ್ಜಿ; ಕಾರ್ಮಿಕ ಸಚಿವಾಲಯಕ್ಕೆ ಹೈಕೋರ್ಟ್ ನೋಟಿಸ್
- by Jagan Ramesh
- February 19, 2025
- 840 Views

ಬೆಂಗಳೂರು: ಕೃಷಿ, ಕಟ್ಟಡ ನಿರ್ಮಾಣ ಸೇರಿ ವಿವಿಧ ಏಳು ವಲಯಗಳ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕಳೆದ ಏಳು ವರ್ಷಗಳಿಂದ ಕನಿಷ್ಠ ವೇತನ ಪರಿಷ್ಕರಣೆ ಮಾಡಲಾಗಿಲ್ಲ ಎಂದು ಆಕ್ಷೇಪಿಸಿ ಆಲ್ ಇಂಡಿಯಾ ಸೆಂಟ್ರಲ್ ಯೂನಿಯನ್ ಆಫ್ ಟ್ರೇಡ್ ಕೌನ್ಸಿಲ್ (ಎಐಸಿಸಿಟಿಯು) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅನಂತ್ ರಮಾನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಮುಖ್ಯ ಕಾರ್ಮಿಕ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಿತು. ಅರ್ಜಿದಾರರ ಪರವಾಗಿ ವಕೀಲೆ ಮೃತ್ರೇಯಿ ಕೃಷ್ಣನ್ ವಾದ ಮಂಡಿಸಿದರು.
ಅರ್ಜಿಯಲ್ಲೇನಿದೆ?
ಅಧಿಸೂಚಿತ ಉದ್ಯೋಗಗಳ (ಶೆಡ್ಯೂಲ್ಡ್ ಎಂಪ್ಲಾಯ್ಮೆಂಟ್) ಕನಿಷ್ಠ ವೇತನವನ್ನು ಪ್ರತಿ 5 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಆದರೆ, ಕೃಷಿ ಕಾರ್ಮಿಕರು, ಕಟ್ಟಡ-ರಸ್ತೆೆಗಳ ನಿರ್ಮಾಣ ಹಾಗೂ ನಿರ್ವಹಣೆ, ಕಲ್ಲು ಗಣಿಗಾರಿಕೆ, ಸ್ವೀಪಿಂಗ್ ಮತ್ತು ಕ್ಲೀನಿಂಗ್, ಜಿಪ್ಸಂ ಹಾಗೂ ಇತರ ಗಣಿಗಾರಿಕೆ, ವಾಚ್ ಆ್ಯಂಡ್ ವಾರ್ಡ್, ಲೋಡಿಂಗ್-ಅನ್‌ಲೋಡಿಂಗ್ ವಲಯದ ಉದ್ಯೋಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಕನಿಷ್ಠ ವೇತನವನ್ನು ಕಳೆದ ಏಳು ವರ್ಷಗಳಿಂದ ಪರಿಷ್ಕರಣೆ ಮಾಡಲಾಗಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಈ ಏಳೂ ವಲಯಗಳ ಉದ್ಯೋಗಗಳಿಗೆ 2017ರಲ್ಲಿ ಕನಿಷ್ಠ ವೇತನ ಪರಿಷ್ಕರಣೆ ಮಾಡಲಾಗಿತ್ತು. ಕೊನೇ ಬಾರಿ ವೇತನ ಪರಿಷ್ಕರಿಸಿ ಈಗಾಗಲೇ 7 ವರ್ಷಗಳು ಕಳೆದಿವೆ. ಆದ್ದರಿಂದ, ಸುಪ್ರೀಂಕೋರ್ಟ್ ಮಾನದಂಡಗಳಿಗೆ ಅನಸಾರವಾಗಿ ಮೇಲಿನ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)