ಪ್ರಕಾಶ್ ರಾಜ್ ಬಗ್ಗೆ ಸುಳ್ಳು ಫೇಸ್‌ಬುಕ್ ಪೋಸ್ಟ್; ಪ್ರಶಾಂತ್ ಸಂಬರಗಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: “ನಟ ಪ್ರಕಾಶ್‌ ರಾಜ್‌ ಮಹಾಕುಂಭಮೇಳದಲ್ಲಿ ಮಿಂದೆದ್ದಿದ್ದರು” ಎಂಬ ಸುಳ್ಳು ಶೀರ್ಷಿಕೆಯೊಂದಿಗೆ ಫೇಸ್‌ಬುಕ್‌ ಪೋಸ್ಟ್‌ ಪ್ರಕಟಿಸಿದ ಆರೋಪ ಸಂಬಂಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಪ್ರಕಾಶ್‌ ರಾಜ್‌ ದೂರಿನ ಮೇರೆಗೆ ಮೈಸೂರಿನ ಲಕ್ಷ್ಮೀಪುರಂ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಮತ್ತು ಪ್ರಕರಣ ಕುರಿತ ಮೈಸೂರಿನ 8ನೇ ಹೆಚ್ಚುವರಿ ಸಿವಿಲ್‌ (ಕಿರಿಯ ಶ್ರೇಣಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಪ್ರಶಾಂತ್‌ ಸಂಬರಗಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ಇದೇ ವೇಳೆ, ಲಕ್ಷ್ಮೀಪುರಂ ಠಾಣೆ ಪೊಲೀಸರು ಮತ್ತು ದೂರುದಾರರಾದ ಪ್ರಕಾಶ್‌ ರಾಜ್‌ಗೆ ನೋಟಿಸ್‌ ಜಾರಿ ಮಾಡಿದ ನ್ಯಾಯಪೀಠ, ಅರ್ಜಿ ಸಂಬಂಧ ಮಾರ್ಚ್ 4ರೊಳಗೆ ಆಕ್ಷೇಪಣೆ ಸಲ್ಲಿಸಬೇಕು. ಮಧ್ಯಂತರ ಆದೇಶದ ತೆರವಿಗೆ ಮತ್ತು ತಿದ್ದುಪಡಿ ಕೋರಲು ದೂರುದಾರ ಪ್ರಕಾಶ್‌ ರಾಜ್‌ ಸ್ವತಂತ್ರರಾಗಿದ್ದಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣವೇನು?
ಪ್ರಶಾಂತ್‌ ಸಂಬರಗಿ 2025ರ ಜನವರಿ 27ರಂದು ಸಂಜೆ ಫೇಸ್‌ಬುಕ್‌ ಖಾತೆಯಲ್ಲಿ, ಪ್ರಕಾಶ್‌ ರಾಜ್‌ ನೀರಿನಲ್ಲಿ ಮುಳುಗಿ ನಮಸ್ಕರಿಸುತ್ತಿರುವ ಪೋಟೋ ಪ್ರಕಟಿಸಿ, “ನಟ ಪ್ರಕಾಶ್‌ ರಾಜ್‌ ಮಹಾಕುಂಭಮೇಳದಲ್ಲಿ ಮಿಂದೆದ್ದಿದ್ದಾರೆ. ಅವರ ಎಲ್ಲ ಪಾಪಗಳನ್ನು ಕ್ಷಮಿಸಲಾಗಿದೆ” ಎಂದು ಶೀರ್ಷಿಕೆ ಬರೆದು ಪೋಸ್ಟ್‌ ಮಾಡಿದ್ದರು.

ಈ ಕುರಿತು ಪ್ರಕಾಶ್ ರಾಜ್ ಫೆಬ್ರವರಿ 1ರ ಬೆಳಗ್ಗೆ 8 ಗಂಟೆಗೆ ಮೈಸೂರಿನ ಲಕ್ಷ್ಮೀಪುರಂ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಶಾಂತ್‌ ಸಂಬರಗಿ ಉದ್ದೇಶಪೂರ್ವಕವಾಗಿ ತಮ್ಮ ಹೆಸರು ಹಾಗೂ ಭಾವಚಿತ್ರ ಉಪಯೋಗಿಸಿಕೊಂಡು ಫೇಸ್‌ಪುಕ್‌ನಲ್ಲಿ ಸುಳ್ಳು ಶೀರ್ಷಿಕೆಯಡಿ ಪೋಸ್ಟ್‌ ಪ್ರಕಟಿಸಿದ್ದಾರೆ. ಇದರಿಂದ, ತಮ್ಮ ಖ್ಯಾತಿಗೆ ಧಕ್ಕೆಯಾಗಿದೆ. ಆದ್ದರಿಂದ, ಸಂಬರಗಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಲಾಗಿತ್ತು. ಸಂಬರಗಿ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್‌ ನೀಡಿದ್ದರು.

Related Articles

Comments (0)

Leave a Comment