ಮಾಹಿತಿ ಆಯುಕ್ತರ ಪ್ರಮಾಣ ಸ್ವೀಕಾರಕ್ಕಿಲ್ಲ ಅಡ್ಡಿ; ನೇಮಕಾತಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು ರಾಜ್ಯ ಸರ್ಕಾರ ಸಲ್ಲಿಸಿದ ಬಳಿಕ ಸೂಕ್ತ ಆದೇಶ ಹೊರಡಿಸುವುದಾಗಿ ತಿಳಿಸಿರುವ ಹೈಕೋರ್ಟ್, ನೇಮಕಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ. ಇದರಿಂದ, ಮಂಗಳವಾರ ಸಂಜೆ ರಾಜಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಯಾವುದೇ ಅಡ್ಡಿ ಇಲ್ಲದಂತಾಗಿದೆ.

ರಾಜ್ಯ ಮಾಹಿತಿ ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡಿ ರಾಜ್ಯ ಸರ್ಕಾರ 2025ರ ಜನವರಿ 30ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಜೆಪಿ ನಗರದ ನಿವಾಸಿ ಕೆ. ಮಲ್ಲಿಕಾರ್ಜುನ ರಾಜು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರು ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಅರ್ಜಿದಾರರು ಮಧ್ಯಂತರ ಆದೇಶ ಕೋರಿರುವುದನ್ನು ಪರಿಗಣಿಸಬಾರದು ಎಂದೇನಿಲ್ಲ. ಸರ್ಕಾರ ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮಧ್ಯಂತರ ಆದೇಶದ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿತು.

ಜತೆಗೆ, ಮಾಹಿತಿ ಆಯುಕ್ತರ ನೇಮಕಾತಿಯು ಅರ್ಜಿ ಕುರಿತು ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ನೂತನವಾಗಿ ನೇಮಕಗೊಂಡಿರುವ ಎಲ್ಲ ಮಾಹಿತಿ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಅಶೋಕ್ ಬಿ. ಪಾಟೀಲ್ ವಾದ ಮಂಡಿಸಿ, ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆಗೆ ಶೋಧನಾ ಸಮಿತಿ ರಚನೆ ಮಾಡಬೇಕು. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಆಯ್ಕೆ ಸಮಿತಿಯ ಮುಂದೆ ಮಂಡಿಸಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ, ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿ ರಾಜ್ಯ ಸರ್ಕಾರ ನೇಮಕಾತಿ ಆದೇಶ ಮಾಡಿದೆ ಎಂದು ಆಕ್ಷೇಪಿಸಿದರು.

ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕವಾಗಿರುವ ಆಶಿತ್‌ ಮೋಹನ್‌ ಪ್ರಸಾದ್‌ ಅವರು ಆ ಹುದ್ದೆಗೆ ಅರ್ಜಿಯನ್ನೇ ಸಲ್ಲಿಸಿರಲಿಲ್ಲ. ಬದಲಿಗೆ ಮಾಹಿತಿ ಆಯುಕ್ತರ ಹುದ್ದೆಗಷ್ಟೇ ಅರ್ಜಿ ಸಲ್ಲಿಸಿದ್ದರು. ಇದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಶೋಧನಾ ಸಮಿತಿ/ಆಯ್ಕೆ ಸಮಿತಿ ದಾಖಲೆಗಳನ್ನು ಪರಿಶೀಲಿಸಿ, ಪ್ರತಿವಾದಿಗಳ ಹೆಸರುಗಳನ್ನು ಮುಖ್ಯಮಂತ್ರಿ ನೇತೃತ್ವದ ಸಮಿತಿಯು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಈ ಬಳಿಕ ನೇಮಕಾತಿ ಪ್ರಕ್ರಿಯೆ ನಡೆದಿದೆ. ಮಂಗಳವಾರ ಸಂಜೆ 5 ಗಂಟೆಗೆ ರಾಜಭವನದಲ್ಲಿ ಮಾಹಿತಿ ಆಯುಕ್ತರ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ನೇಮಕಾತಿಗೆ ಸಂಬಂಧಿಸಿದ ಮಾಹಿತಿ ಪರಿಶೀಲಿಸದೆಯೇ ಯಾವುದೇ ಮಧ್ಯಂತರ ಆದೇಶ ಹೊರಡಿಸಬಾರದು ಎಂದು ಮನವಿ ಮಾಡಿದರಲ್ಲದೆ, ಪ್ರಕರಣವನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅರ್ಜಿದಾರರ ಮನವಿ ಏನು?
ರಾಜ್ಯ ಮಾಹಿತಿ ಆಯುಕ್ತರ ನೇಮಕ ಮಾಡಿ 2025ರ ಜನವರಿ 30ರಂದು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಶೋಧನಾ ಸಮಿತಿ ರಚನೆ ಮಾಡಿ, ನೇಮಕ ಪ್ರಕ್ರಿಯೆ ನಡೆಸಲು ಹಾಗೂ ಶೋಧನಾ ಸಮಿತಿಯ ಪ್ರಕ್ರಿಯೆಗಳನ್ನು ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿದಾರರು, ಅರ್ಜಿ ಇತ್ಯರ್ಥವಾಗುವವರೆಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

Related Articles

Comments (0)

Leave a Comment