ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್; ಪ್ರಕ್ರಿಯೆಯಲ್ಲಿ ಸುಪ್ರೀಂ ಆದೇಶ ಉಲ್ಲಂಘನೆ ಆರೋಪ
- by Jagan Ramesh
- February 3, 2025
- 620 Views

ಬೆಂಗಳೂರು: ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಮುಖ್ಯ ಆಯುಕ್ತರು ಹಾಗೂ ಆಯುಕ್ತರನ್ನು ನೇಮಕ ಮಾಡಿ ರಾಜ್ಯ ಸರ್ಕಾರ 2025ರ ಜನವರಿ 30ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿಯಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಮಾಹಿತಿ ಆಯುಕ್ತರ ಹುದ್ದೆ ಆಕಾಂಕ್ಷಿಯೂ ಆಗಿದ್ದ ಬೆಂಗಳೂರಿನ ಜೆಪಿ ನಗರದ ನಿವಾಸಿ ಕೆ.ಮಲ್ಲಿಕಾರ್ಜುನ ರಾಜು ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿಯು ನ್ಯಾಯಮೂರ್ತಿ ಆರ್. ದೇವದಾಸ್ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ನಿಗದಿಯಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ, ಮಾಹಿತಿ ಆಯುಕ್ತರಾಗಿ ನೇಮಕಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಆಶಿತ್ ಮೋಹನ್ ಪ್ರಸಾದ್, ಕೆ. ರಮಣ, ಡಾ. ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ. ಚನ್ನಾಲ್, ಎಸ್. ರಾಜಶೇಖರ್, ಬದ್ರುದ್ದೀನ್ ಕೆ, ಡಾ. ಮಮತಾ ಬಿ.ಆರ್. ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.
ಆಕ್ಷೇಪವೇನು?
ರಾಜ್ಯ ಮುಖ್ಯ ಮಾಹಿತಿ ಆಯುಕ್ತರು (ಸಿಐಸಿ) ಹಾಗೂ ಮಾಹಿತಿ ಆಯುಕ್ತರ (ಐಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆಗೆ ಶೋಧನಾ ಸಮಿತಿ ರಚನೆ ಮಾಡಬೇಕು. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಮಾಹಿತಿ ಹಕ್ಕು ಕಾಯ್ದೆ – 2005ರ ಸೆಕ್ಷನ್ 12(3) ಅಡಿಯಲ್ಲಿ ರಚಿಸಲ್ಪಟ್ಟ ಆಯ್ಕೆ ಸಮಿತಿಯ ಮುಂದೆ ಮಂಡಿಸಬೇಕು ಎಂದು ಅಂಜಲಿ ಭಾರಧ್ವಾಜ್ ಮತ್ತಿತರರು ಹಾಗೂ ಕೇಂದ್ರ ಸರ್ಕಾರ ಮತ್ತಿತರರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ, ರಾಜ್ಯ ಸರ್ಕಾರ ಶೋಧನಾ ಸಮಿತಿ ರಚನೆ ಮಾಡದೆಯೇ 2024ರ ಜೂನ್ 11ರಂದು ಅರ್ಜಿಗಳನ್ನು ಆಹ್ವಾನ ಮಾಡಿದೆ. ಮಾಹಿತಿ ಆಯುಕ್ತರ ಹುದ್ದೆಗೆ ಸಲ್ಲಿಕೆಯಾಗಿದ್ದ 184 ಅರ್ಜಿಗಳನ್ನು ಯಾವುದೇ ರೀತಿ ಪರಿಶೀಲನೆಗೆ ಒಳಪಡಿಸದೆಯೇ ಏಳು ಮಂದಿಯನ್ನು ನೇಮಕ ಮಾಡಿ 2025ರ ಜನವರಿ 30ರಂದು ಆದೇಶ ಹೊರಡಿಸಿದೆ. ಇದು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಎ.ಎಂ. ಪ್ರಸಾದ್ ಸಿಐಸಿ ಹುದ್ದೆಗೆ ಅರ್ಜಿಯೇ ಸಲ್ಲಿಸಿಲ್ಲ..!
ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗೆ ಆಯ್ಕೆಯಾಗಿರುವ ಎ.ಎಂ.ಪ್ರಸಾದ್ ಅವರು ಆ ಹುದ್ದೆಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ಬದಲಿಗೆ, ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗಷ್ಟೇ ಅವರು ಅರ್ಜಿ ಸಲ್ಲಿಸಿದ್ದರು. ಅದಾಗ್ಯೂ, ಯಾವುದೇ ವಿವರಣೆ ಇಲ್ಲದೆ ಅವರನ್ನು ಸಿಐಸಿ ಹುದ್ದೆಗೆ ನೇಮಕ ಮಾಡಲಾಗಿದೆ. ಎ.ಎಂ. ಪ್ರಸಾದ್ ಅವರ ಜನನ ಪ್ರಮಾಣಪತ್ರದ ಪ್ರಕಾರ 2025ರ ಅಕ್ಟೋಬರ್ 29ಕ್ಕೆ ಅವರಿಗೆ 65 ವರ್ಷ ತುಂಬಲಿದೆ. ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 13ರ ಪ್ರಕಾರ 65 ವರ್ಷ ದಾಟಿದ ಬಳಿಕ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ. ಅಲ್ಲಿಗೆ ಕೇವಲ 9 ತಿಂಗಳ ಅವಧಿಗೆ ಪ್ರಸಾದ್ ಅವರು ಮುಖ್ಯ ಆಯುಕ್ತರಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಅರ್ಜಿಯನ್ನೇ ಸಲ್ಲಿಸದ ಹುದ್ದೆಗೆ ನೇಮಕ ಮಾಡುವ ಮೂಲಕ ಎ.ಎಂ. ಪ್ರಸಾದ್ ಅವರಿಗೆ ಸರ್ಕಾರ ವಿಶೇಷ ಅನುಕೂಲ ಕಲ್ಪಿಸಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅರ್ಜಿದಾರರ ಮನವಿ:
ರಾಜ್ಯ ಮಾಹಿತಿ ಆಯುಕ್ತರ ನೇಮಕ ಮಾಡಿ 2025ರ ಜನವರಿ 30ರಂದು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಶೋಧನಾ ಸಮಿತಿ ರಚನೆ ಮಾಡಿ, ನೇಮಕ ಪ್ರಕ್ರಿಯೆ ನಡೆಸಲು ಹಾಗೂ ಶೋಧನಾ ಸಮಿತಿಯ ಪ್ರಕ್ರಿಯೆಗಳನ್ನು ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿದಾರರು, ಅರ್ಜಿ ಇತ್ಯರ್ಥವಾಗುವವರೆಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.
ಪ್ರಕರಣದ ವಿವರ:
WP 3203/2025
K. Mallikarjuna Raju Vs State Of Karnataka & Others
Related Articles
Thank you for your comment. It is awaiting moderation.
Comments (0)