ಗನ್ ಲೈಸೆನ್ಸ್ ಅಮಾನತು; ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ನಟ ದರ್ಶನ್

ಬೆಂಗಳೂರು: ಗನ್ ಲೈಸೆನ್ಸ್ (ಬಂದೂಕು ಪರವಾನಗಿ) ಅಮಾನತುಗೊಳಿಸಿ ಬೆಂಗಳೂರು ಉಪ ಪೊಲೀಸ್‌ ಆಯುಕ್ತರು (ಆಡಳಿತ) ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ನಟ ದರ್ಶನ್‌ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸಲ್ಲಿಸಿರುವ ಅರ್ಜಿಯಲ್ಲಿ ನಗರ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರನ್ನು ಪ್ರತಿವಾದಿಯನ್ನಾಗಿಸಲಾಗಿದ್ದು, ಅರ್ಜಿ ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.

ನಟ ದರ್ಶನ್‌ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಸಾಕ್ಷಿಗಳ ಮೇಲೆ ತಮ್ಮ ಪಿಸ್ತೂಲ್‌ ಬಳಸಿ ಸಾಕ್ಷ್ಯ ನಾಶಕ್ಕೆ ಯತ್ನಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಬಂದೂಕು ಪರವಾಗಿ ರದ್ದುಪಡಿಸಲಾಗಿದೆ ಎಂದು ಜನವರಿ 20ರಂದು ಉಪ ಪೊಲೀಸ್‌ ಆಯುಕ್ತರು ಆದೇಶ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ದರ್ಶನ್ ಅರ್ಜಿಯಲ್ಲೇನಿದೆ?
ಕುಟುಂಬ ಮತ್ತು ನನ್ನ ಸುರಕ್ಷತೆಯ ದೃಷ್ಟಿಯಿಂದ ಗನ್ ಲೈಸೆನ್ಸ್ ಪಡೆದಿದ್ದು, ಅದಕ್ಕಾಗಿ ಅಗತ್ಯವಿರುವ ನಿಯಮಗಳನ್ನು ಪಾಲಿಸಲಾಗಿದೆ. ಸಮಾಜದಲ್ಲಿ ನಾನು ಹೊಂದಿರುವ ಸ್ಥಾನಮಾನ ಪರಿಗಣಿಸಿ ಬಂದೂಕು ಪರವಾನಗಿ ನೀಡಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನ್ನನ್ನು ಎರಡನೇ ಆರೋಪಿಯನ್ನಾಗಿಸಲಾಗಿದ್ದು, ಸಕ್ಷಮ ನ್ಯಾಯಾಲಯಕ್ಕೆ ತನಿಖಾಧಿಕಾರಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಮಧ್ಯೆ, ಜನವರಿ 7ರಂದು ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ನನ್ನ ಬಳಿ ಇರುವ ಬಂದೂಕನ್ನು ಪ್ರಕರಣದ ಮೇಲೆ ಪ್ರಭಾವ ಬೀರಲು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಪರವನಾಗಿಯನ್ನು ಏಕೆ ಅಮಾನತು ಮಾಡಬಾರದು ಎಂಬ ಬಗ್ಗೆ ವಿವರಣೆ ಕೇಳಿ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿತ್ತು ಎಂದು ದರ್ಶನ್ ಅರ್ಜಿಯಲ್ಲಿ ವಿವರಿಸಿದ್ದಾರೆ.

ಶೋಕಾಸ್ ನೋಟಿಸ್‌ಗೆ ಜನವರಿ 13ರಂದು ಉತ್ತರಿಸಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾನು ಅಮಾಯಕನಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಹಾಗೂ ಪರವಾನಗಿ ಹೊಂದಿರುವ ಪಿಸ್ತೂಲ್‌ ಬಳಕೆ ಮಾಡುವ ಸಂದರ್ಭ ಉದ್ಭವಿಸುವುದಿಲ್ಲ. ಆದ್ದರಿಂದ, ಶೋಕಾಸ್‌ ನೋಟಿಸ್‌ ಹಿಂಪಡೆಯಬೇಕು ಎಂದು ಕೋರಿದ್ದೆ. ಜತೆಗೆ, ಜನವರಿ 16ರಂದು ಮತ್ತೊಂದು ಪತ್ರದ ಮೂಲಕ ಪಿಸ್ತೂಲ್‌ ದುರ್ಬಳಕೆ ಮಾಡುವುದಿಲ್ಲ. ಆದ್ದರಿಂದ, ಪರವಾನಗಿ ರದ್ದು ಮಾಡಬಾರದು ಎಂದು ಕೋರಲಾಗಿತ್ತು. ಹೀಗಿದ್ದರೂ, ಪರವಾನಗಿ ಅಮಾನತುಗೊಳಿಸದ್ದಲ್ಲದೇ ಜನವರಿ 21ರಂದು ನನ್ನ ಬಳಿ ಇದ್ದ ಪಿಸ್ತೂಲ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದುರುದ್ದೇಶದಿಂದ ಹಾಗೂ ಕಿರುಕುಳ ನೀಡುವ ಸಲುವಾಗಿಯೇ ಪೊಲೀಸರು ಪಿಸ್ತೂಲ್‌ ಪರವಾನಗಿ ಅಮಾನತು ಮಾಡಿ, ವಶಕ್ಕೆ ಪಡೆದಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ವ್ಯಕ್ತಿಯೊಬ್ಬರ ವಿರುದ್ಧ ಕ್ರಿಮಿನಲ್‌ ಪ್ರಕರಣ ಬಾಕಿ ಇದೆ ಎಂದ ಮಾತ್ರಕ್ಕೆ ಅಧಿಕಾರಿಗಳಿಗೆ ಪಿಸ್ತೂಲ್‌ ಪರವಾನಗಿ ಅಮಾನತುಗೊಳಿಸುವ ಅಧಿಕಾರ ಲಭ್ಯವಾಗದು. ಜತೆಗೆ, ಪರವಾನಗಿ ರದ್ದುಪಡಿಸುವಾಗ ಪೊಲೀಸರು ಶೋಕಾಸ್‌ ನೋಟಿಸ್‌ ನೀಡಿರುವುದನ್ನು ಹೊರತುಪಡಿಸಿ ನನ್ನ ಅಹವಾಲು ಆಲಿಸಿಲ್ಲ. ಪೊಲೀಸರ ಈ ನಡೆಯು ಸ್ವೇಚ್ಛೆಯಿಂದ ಕೂಡಿರುವುದರಿಂದ ಪರವಾನಗಿ ಅಮಾನತು ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿರುವ ದರ್ಶನ್, ಮಧ್ಯಂತರ ಪರಿಹಾರದ ಭಾಗವಾಗಿ ಆದೇಶಕ್ಕೆ ತಡೆಯಾಜ್ಞೆ ವಿಧಿಸಬೇಕು ಎಂದು ಕೋರಿದ್ದಾರೆ.

Related Articles

Comments (0)

Leave a Comment