ಮುಡಾ ನಿವೇಶನ ಹಂಚಿಕೆ ಹಗರಣ; ಸಿಎಂ ಮೇಲ್ಮನವಿ ವಿಚಾರಣೆ ಮಾ.22ಕ್ಕೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಮುಡಾ ಹಗರಣದ ತನಿಖೆಗೆ ಅನುಮತಿ ನೀಡಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿರುವ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿವಾದಿತ ಭೂಮಿಯ ಮೂಲ ಮಾಲಿಕ ಜೆ. ದೇವರಾಜು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 22ಕ್ಕೆ ಮುಂದೂಡಿದೆ.

ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ಎತ್ತಿಹಿಡಿದಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಬಂಧವಿಲ್ಲದಿದ್ದರೂ ಪ್ರಕರಣದಲ್ಲಿ ತಮ್ಮನ್ನು ಎಳೆದು ತರಲಾಗಿದೆ ಎಂದು ಆಕ್ಷೇಪಿಸಿ ಜೆ. ದೇವರಾಜು ಸಲ್ಲಿಸಿರುವ ಪ್ರತ್ಯೇಕ ಮೇಲ್ಮನವಿಗಳು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶನಿವಾರ ವಿಚಾರಣೆಗೆ ನಿಗದಿಯಾಗಿದ್ದವು.

ಸಿದ್ದರಾಮಯ್ಯ ಪರವಾಗಿ ಹಾಜರಾದ ವಕೀಲ ಶತಭಿಷ್‌ ಶಿವಣ್ಣ, ಸಿಎಂ ಪರವಾಗಿ ವಾದ ಮಂಡಿಸಲು ಹಿರಿಯ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರನ್ನು ನಿಯೋಜಿಸಲಾಗಿದ್ದು, ಯಾವುದಾದರೂ ಶನಿವಾರ ಪ್ರಕರಣದ ವಿಚಾರಣೆ ನಡೆಸಬಹುದು. ಮಾರ್ಚ್‌ 22ರಂದು ಹೈಕೋರ್ಟ್‌ ಕಾರ್ಯನಿರ್ವಹಿಸಲಿದೆ. ಪ್ರಕರಣದಲ್ಲಿ ಮೊದಲಿಗರಾಗಿ ಸಿಂಘ್ವಿ ವಾದ ಆರಂಭಿಸಲಿದ್ದು, ಖುದ್ದು ನ್ಯಾಯಪೀಠದ ಮುಂದೆ ಹಾಜರಾಗಿ ವಾದ ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ನ್ಯಾಯಾಲಯಕ್ಕೆ ಅನುಕೂಲವಾಗುವ ಯಾವುದಾದರೂ ದಿನಾಂಕದಂದು ಮೇಲ್ಮನವಿಗಳ ವಿಚಾರಣೆ ನಡೆಸಬಹುದು ಎಂದರು.

ಅಂತಿಮವಾಗಿ ನ್ಯಾಯಪೀಠ, ಮೇಲ್ಮನವಿದಾರ ಸಿದ್ದರಾಮಯ್ಯ ಅವರನ್ನು ಪ್ರತಿನಿಧಿಸಿರುವ ವಕೀಲ ಶತಭಿಷ್‌ ಶಿವಣ್ಣ ಅವರ ಕೋರಿಕೆಯ ಹಾಗೂ ಪಕ್ಷಕಾರರ ಜಂಟಿ ಮನವಿ ಮೇರೆಗೆ ವಿಚಾರಣೆಯನ್ನು ಮಾರ್ಚ್‌ 22ಕ್ಕೆ ಮುಂದೂಡಲಾಗಿದೆ. ಯಾವೆಲ್ಲ ಪ್ರತಿವಾದಿಗಳಿಗೆ ಅರ್ಜಿಯ ಪ್ರತಿ ಹಂಚಿಕೆಯಾಗಿಲ್ಲ ಅವರಿಗೆ ಪ್ರತಿ ನೀಡಬೇಕು ಮತ್ತು ಕಚೇರಿ ಎತ್ತಿರುವ ಆಕ್ಷೇಪಣೆಗಳನ್ನು ಸರಿಪಡಿಸಬೇಕು ಎಂದು ಮೇಲ್ಮನವಿದಾರರಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

Related Articles

Comments (0)

Leave a Comment